ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ | ಡಾ. ಸುಧಾಕರ್ – ರಕ್ಷಾ ರಾಮಯ್ಯ ನಡುವಿನ ಕದನ ಕಣವಾಗಬಹುದೇ?

Date:

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಬೆಂಗಳೂರು ಸರಹದ್ದಿನ ಕ್ಷೇತ್ರವಾದರೂ, ಭೂಮಿಗೆ ಭಾರೀ ಬೆಲೆ ಇದ್ದರೂ, ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದ ಕ್ಷೇತ್ರವಾಗಿದೆ. ಇಲ್ಲಿಂದ ಗೆದ್ದ ಸಂಸದರು ಮಂತ್ರಿಗಳಾಗಿದ್ದಾರೆ, ಪಕ್ಷದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸ್ಥಾನದಲ್ಲಿದ್ದಾರೆ. ಅದು ಆರ್.ಎಲ್. ಜಾಲಪ್ಪ ಇರಬಹುದು, ವೀರಪ್ಪ ಮೊಯ್ಲಿ ಅವರಾಗಿರಬಹುದು, ಇಲ್ಲ ಇವರಿಗಿಂತ ಮುಂಚೆ ಗೆದ್ದ ವಿ. ಕೃಷ್ಣರಾವ್ ಇರಬಹುದು. ಎಲ್ಲರೂ ಕ್ಷೇತ್ರವನ್ನು ಕಡೆಗಣಿಸಿದ್ದಾರೆ. ಈ ಕಾರಣದಿಂದಾಗಿಯೇ ಇಲ್ಲಿಯ ಮತದಾರರು ಚುನಾವಣೆಯ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ. ನಾಯಕರ ಬಗ್ಗೆ ಸಿಟ್ಟಿನಿಂದ ಮಾತನಾಡುತ್ತಾರೆ.

ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರ ಸಂಖ್ಯೆ ಹೆಚ್ಚಾಗಿದ್ದರೂ, 1977ರಿಂದ ಇಲ್ಲಿಯವರೆಗೆ ಇಬ್ಬರು ಒಕ್ಕಲಿಗರಷ್ಟೇ ಗೆದ್ದಿರುವುದು. ಈ ಕ್ಷೇತ್ರದ ಇನ್ನೂ ಒಂದು ವಿಶೇಷವೆಂದರೆ, ಯಾವಾಗಲೂ ಸಣ್ಣಪುಟ್ಟ ಸಮುದಾಯಕ್ಕೆ ಸೇರಿದವರನ್ನೇ ಆಯ್ಕೆ ಮಾಡಿಕೊಂಡಿರುವುದು. ಈಡಿಗ ಸಮುದಾಯದ ಜಾಲಪ್ಪ ನಾಲ್ಕು ಬಾರಿ ಸಂಸದರಾದರೆ, ಬ್ರಾಹ್ಮಣರಾದ ಕೃಷ್ಣ ರಾವ್ ಮೂರು ಬಾರಿ ಗೆದ್ದಿದ್ದಾರೆ. ಕ್ಷೇತ್ರಕ್ಕೆ ಸಂಬಂಧವೇ ಇಲ್ಲದ ಕರಾವಳಿ ಮೂಲದ ದೇವಾಡಿಗ ಸಮುದಾಯದ ವೀರಪ್ಪ ಮೊಯ್ಲಿಯವರು ಎರಡು ಬಾರಿ ಗೆದ್ದು ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದೂ ಇದೆ.

ಚಿಕ್ಕಬಳ್ಳಾಪುರ ಈ ಮೊದಲು ಕೋಲಾರ ಜಿಲ್ಲೆಯ ಭಾಗವಾಗಿತ್ತು. 2008ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ರೂಪುಗೊಂಡಿತು. ಕ್ಷೇತ್ರ ವಿಂಗಡಣೆಯಲ್ಲಿ ಗೌರಿಬಿದನೂರು, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಯಲಹಂಕ, ಹೊಸಕೋಟೆ, ದೇವನಹಳ್ಳಿ(ಮೀಸಲು), ದೊಡ್ಡಬಳ್ಳಾಪುರ, ನೆಲಮಂಗಲ(ಮೀಸಲು) ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

8 ವಿಧಾನಸಭಾ ಕ್ಷೇತ್ರಗಳ ಪೈಕಿ 6ರಲ್ಲಿ ಗೆದ್ದಿರುವ ಕಾಂಗ್ರೆಸ್, 2ರಲ್ಲಿ ಗೆದ್ದಿರುವ ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಆದರೆ, ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ, ಒಕ್ಕಲಿಗ ಮತಗಳು ಯಾವ ಪಕ್ಷದತ್ತ ವಾಲಬಹುದು ಎಂಬುದು ಸದ್ಯದ ರಾಜಕೀಯ ವಿಶ್ಲೇಷಕರ ಚರ್ಚೆಯಾಗಿದೆ.

ಹಾಗೆಯೇ ಅಭ್ಯರ್ಥಿಗಳಾಗಲು ಬಿಜೆಪಿಯಿಂದ ಮಾಜಿ ಸಚಿವ ಡಾ. ಸುಧಾಕರ್, ಯಲಹಂಕ ಶಾಸಕ ವಿಶ್ವನಾಥ್ ಅವರ ಪುತ್ರ ಅಲೋಕ್ ಹೆಸರು ಸದ್ಯಕ್ಕೆ ಚಾಲ್ತಿಯಲ್ಲಿವೆ. ಸುಧಾಕರ್ ಪರವಾಗಿ ದೇವೇಗೌಡ, ಕುಮಾರಸ್ವಾಮಿ ಮತ್ತು ದಿಲ್ಲಿಯ ನಾಯಕರ ಒಲವಿದ್ದರೆ; ವಿಶ್ವನಾಥ್ ಪುತ್ರ ಅಲೋಕ್ ಪರ ಯಡಿಯೂರಪ್ಪ ಮತ್ತು ವಿಜಯೇಂದ್ರ ಇದ್ದಾರೆ. ಇಬ್ಬರ ಪೈಕಿ ಯಾರೇ ಅಭ್ಯರ್ಥಿಯಾದರೂ, ಹಣದ ಹೊಳೆಯನ್ನೇ ಹರಿಸುತ್ತಾರೆಂದು ಇಲ್ಲಿಯ ಮತದಾರರೇ ಮಾತನಾಡಿಕೊಳ್ಳುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋತ ಸುಧಾಕರ್ ಗೆ ಟಿಕೆಟ್ ಕೊಟ್ಟರೆ, ಯಡಿಯೂರಪ್ಪ, ವಿಜಯೇಂದ್ರ ಮತ್ತು ಯಲಹಂಕ ಶಾಸಕ ವಿಶ್ವನಾಥ್ ರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಅಲೋಕ್ ಗೆ ಕೊಟ್ಟರೆ, ಸುಧಾಕರ್ ಮುನಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

ಇನ್ನು ಕಾಂಗ್ರೆಸ್ಸಿನಿಂದ ಹಿರಿಯ ನಾಯಕರಾದ ವೀರಪ್ಪ ಮೊಯ್ಲಿ ಮತ್ತು ಎಂ.ಆರ್. ಸೀತಾರಾಂ ಅವರ ಪುತ್ರ ರಕ್ಷಾ ರಾಮಯ್ಯನವರ ಹೆಸರು ಕೇಳಿಬರುತ್ತಿದೆ. ಮೊಯ್ಲಿಯವರಿಗೆ ದಿಲ್ಲಿ ಮಟ್ಟದಲ್ಲಿ ಬೆಂಬಲವಿದ್ದು, ಕ್ಷೇತ್ರವನ್ನು ಎರಡು ಸಲ ಪ್ರತಿನಿಧಿಸಿದ ಅನುಭವವಿದೆ. ಹಾಗೆಯೇ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಪತ್ರಸಮರಕ್ಕಿಳಿದದ್ದು, ಅವರಿಗೆ ಕಂಟಕವಾಗಬಹುದು ಎಂದೂ ಹೇಳಲಾಗುತ್ತಿದೆ. ಎಂ.ಆರ್. ಸೀತಾರಾಂ ಅವರ ಪುತ್ರ ರಕ್ಷಾರಾಮಯ್ಯ, ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದವರು. ಇವರ ಪರವಾಗಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರು ಇದ್ದಾರೆ. ಇವರ ಬೆನ್ನಿಗೆ ಬಲಿಜ ಸಮುದಾಯವೂ ಇದೆ. ಇವುಗಳ ನಡುವೆಯೇ ಗೌರಿಬಿದನೂರಿನ ಶಿವಶಂಕರರೆಡ್ಡಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿ ಅಭ್ಯರ್ಥಿಯಾಗುವ ಕನಸು ಕಾಣುತ್ತಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾದ ಬಿ.ಎನ್. ಬಚ್ಚೇಗೌಡ, ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿಯಿಂದ ದೂರ ಸರಿದಿದ್ದಾರೆ. ಅವರ ಪುತ್ರ ಶರತ್ ಬಚ್ಚೇಗೌಡ ಈಗ ಕಾಂಗ್ರೆಸ್ ಪಕ್ಷ ಸೇರಿ, ಹೊಸಕೋಟೆಯ ಶಾಸಕರಾಗಿರುವುದು; ಗೌರಿಬಿದನೂರಿನಿಂದ ಗೆದ್ದ ಸ್ವತಂತ್ರ ಅಭ್ಯರ್ಥಿ ಪುಟ್ಟಸ್ವಾಮಿಗೌಡ, ಬಚ್ಚೇಗೌಡರ ಬೀಗರಾಗಿರುವುದು; ಇವರ ಕುಟುಂಬ ಈಗ ಕಾಂಗ್ರೆಸ್ ಪರವಾಗಿ ನಿಂತಿರುವುದು, ಕಾಂಗ್ರೆಸ್ಸಿಗೆ ಬಲ ಬಂದಂತಾಗಿದೆ. ಜೊತೆಗೆ ಬಲಿಜ ಸಮುದಾಯ ಹೆಚ್ಚಾಗಿರುವ ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಯಲ್ಲಿರುವುದು, ಕಾಂಗ್ರೆಸ್ ವಲಯದಲ್ಲಿ ಹುಮ್ಮಸ್ಸು ಹೆಚ್ಚಿಸಿದೆ. ಅಕಸ್ಮಾತ್ ಬಲಿಜ ಸಮುದಾಯಕ್ಕೆ ಸೇರಿದ ರಕ್ಷಾ ರಾಮಯ್ಯರಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ, ಒಕ್ಕಲಿಗ ಮತ್ತು ಬಲಿಜ ಸಮುದಾಯಗಳು ಕಾಂಗ್ರೆಸ್ ಪರವಾಗಿ ನಿಲ್ಲುವುದರಲ್ಲಿ ಅನುಮಾನವಿಲ್ಲ ಎಂಬ ಚಿತ್ರಣ ಸದ್ಯಕ್ಕಿದೆ. ಹಠಕ್ಕೆ ಬಿದ್ದ ಮೊಯ್ಲಿಯವರು ಟಿಕೆಟ್ ತಂದರೆ, ಕ್ಷೇತ್ರ ಮತ್ತೊಮ್ಮೆ ಬಿಜೆಪಿ ಪಾಲಾಗುವುದು ಶತಸಿದ್ಧ ಎನ್ನುತ್ತಿದ್ದಾರೆ ಕ್ಷೇತ್ರದ ಜನ.

2019ರ ಚುನಾವಣೆಯಲ್ಲಿ ಬಿಜೆಪಿಯಿಂದ ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅಖಾಡಕ್ಕಿಳಿದಿದ್ದರು. ಮೊಯ್ಲಿಯವರ ಹಿರಿತನದ ಜೊತೆಗೆ ಸಣ್ಣಪುಟ್ಟ ಸಮುದಾಯಗಳ ಬೆಂಬಲವೂ ಇತ್ತು. ಜೊತೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದಾಗಿ ಒಕ್ಕಲಿಗರು, ದಲಿತರು ಮತ್ತು ಮುಸ್ಲಿಮರು ಜೊತೆಗಿದ್ದರು. ಆದರೂ ಮೊಯ್ಲಿಯವರು 1,82,110 ಮತಗಳ ಅಂತರದಿಂದ ಸೋತಿದ್ದರು. ಇದನ್ನು ಹಿರಿಯರಾದ ಮೊಯ್ಲಿಯವರು ಅರ್ಥ ಮಾಡಿಕೊಂಡು ಚುನಾವಣಾ ರಾಜಕೀಯದಿಂದ ದೂರ ಸರಿಯುವುದು ಸೂಕ್ತ. ಹಾಗೆಯೇ ಹೊಸಬರಿಗೆ ಜಾಗ ಕಲ್ಪಿಸಿಕೊಟ್ಟು ಬೆಂಬಲಿಸುವ ಅನಿವಾರ್ಯತೆಯೂ ಇದೆ.

ಈ ಕ್ಷೇತ್ರವು ಚಿಕ್ಕಬಳ್ಳಾಪುರ ಜಿಲ್ಲೆಯ 3, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ಹಾಗೂ ಬೆಂಗಳೂರು ನಗರ ಜಿಲ್ಲೆಯ 1 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿದೆ. ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ಕ್ಷೇತ್ರಗಳಲ್ಲಿ ಬಲಿಜ ಸಮುದಾಯದವರು ಹೆಚ್ಚಾಗಿದ್ದರೆ, ಬಾಗೇಪಲ್ಲಿ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ, ಯಲಹಂಕದಲ್ಲಿ ಒಕ್ಕಲಿಗರ ಪ್ರಾಬಲ್ಯವಿದೆ. ಜೊತೆಗೆ ನೆಲಮಂಗಲ ಮತ್ತು ದೇವನಹಳ್ಳಿ ಮೀಸಲು ಕ್ಷೇತ್ರಗಳಾಗಿದ್ದು, ಎರಡರಲ್ಲಿಯೂ ಕಾಂಗ್ರೆಸ್ ಪಕ್ಷ ಗೆದ್ದಿದೆ. ಗೆದ್ದವರಲ್ಲಿ ಒಬ್ಬರು- ಕೆ.ಎಚ್.ಮುನಿಯಪ್ಪ ಮಂತ್ರಿಯಾಗಿದ್ದಾರೆ. ಹಾಗೆಯೇ ಬಾಗೇಪಲ್ಲಿ ಮತ್ತು ಗೌರಿಬಿದನೂರಿನಲ್ಲಿ ಸಂಪಂಗಿ ಮತ್ತು ಶಿವಶಂಕರರೆಡ್ಡಿಗಳಿಂದ ಬಂಡಾಯವನ್ನೂ ಕಾಂಗ್ರೆಸ್ ಎದುರಿಸುತ್ತಿದೆ.

ಈ ವರದಿ ಓದಿದ್ದೀರಾ?: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ | ಬಿಜೆಪಿ ಭದ್ರಕೋಟೆ ವಶಕ್ಕೆ ಕಾಂಗ್ರೆಸ್ ಅವಿರತ ಪ್ರಯತ್ನ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟ 21,82,236 ಮತದಾರರಿದ್ದಾರೆ. ಇದರಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಒಕ್ಕಲಿಗರಿದ್ದರೆ, ಅಷ್ಟೇ ಸಂಖ್ಯೆಯ ಪರಿಶಿಷ್ಟ ಜಾತಿ-ಪಂಗಡದ ಮತದಾರರಿದ್ದಾರೆ. ಮೂರನೇ ಸ್ಥಾನದಲ್ಲಿ ಮುಸ್ಲಿಮರಿದ್ದಾರೆ. ಕ್ಷೇತ್ರದಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ. ಇವರೆಲ್ಲರ ನಡುವೆ ಸಣ್ಣ ಪುಟ್ಟ ಸಮುದಾಯಗಳ ಮತಗಳು, ಈ ಕ್ಷೇತ್ರದ ನಿರ್ಣಾಯಕ ಮತಗಳಾಗಲಿವೆ ಎಂಬುದು ಇಲ್ಲಿನ ಮತದಾರರ ಅನಿಸಿಕೆಯಾಗಿದೆ.

ಮೋದಿ ಅಲೆ ಮತ್ತು ಮೈತ್ರಿಯ ಬಲದಿಂದ ಬಿಜೆಪಿ ಸದ್ಯಕ್ಕೆ ಓಟದಲ್ಲಿ ಮುಂದಿರುವಂತೆ ಕಂಡುಬಂದರೂ, ಆರು ಕ್ಷೇತ್ರಗಳನ್ನು ಗೆದ್ದಿರುವ ಕಾಂಗ್ರೆಸ್, ತನ್ನ ಸಾಂಪ್ರದಾಯಿಕ ಮತದಾರರಾದ ದಲಿತರು ಮತ್ತು ಮುಸ್ಲಿಮರ ಮನವೊಲಿಸುವತ್ತ ಮನಸ್ಸು ಮಾಡಿದರೆ, ಗೆಲುವು ಖಚಿತ ಎಂಬುದನ್ನು ಈಗಲೇ ಹೇಳಬಹುದಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ ಪೆನ್‌ಡ್ರೈವ್ ಪ್ರಕರಣ | ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಎಫ್‌ಐಆರ್

ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್...

ದೇಶಪ್ರೇಮಿ ಯುವಜನರ ಸಮಾವೇಶ | ಪಕೋಡಾ ಪ್ರದರ್ಶಿಸಿ ಪ್ರಧಾನಿ ಮೋದಿ ವಿರುದ್ಧ ಆಕ್ರೋಶ

ದೇಶವನ್ನು ಅಭಿವೃದ್ಧ ಪತದಲ್ಲಿ ಕೊಂಡೊಯ್ಯುತ್ತೇವೆ ಎಂದಿದ್ದ ಮೋದಿ, ವರ್ಷಕ್ಕೆ 2 ಕೋಟಿ...

ಹಾಸನ ಪೆನ್‌ಡ್ರೈವ್ | ಪ್ರಜ್ವಲ್ ರೇವಣ್ಣ ತಪ್ಪಿಸಿಕೊಂಡಿದ್ದರೆ ನನಗೆ ಸಂಬಂಧವಿಲ್ಲ: ಎಚ್‌.ಡಿ ಕುಮಾರಸ್ವಾಮಿ

ಹಾಸನದ ಅಶ್ಲೀಲ ವಿಡಿಯೋಗಳ (ಪೆನ್‌ಡ್ರೈವ್‌) ಪ್ರಕರಣದ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ....

ಪ್ರಜ್ವಲ್ ಪ್ರಕರಣ | ಉಪ್ಪು ತಿಂದವನು ನೀರು ಕುಡಿಯಲೇಬೇಕು: ಎಚ್ ಡಿ ಕುಮಾರಸ್ವಾಮಿ

ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್ ಪ್ರಕರಣ...