ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಮತ್ತಷ್ಟು ಹಿಗ್ಗಿದೆ. ಹಲವು ಕಾರಣಗಳಿಂದ ಚಾಲನೆಯಾಗದೇ ಉಳಿದಿದ್ದ ಬೈಯಪ್ಪನಹಳ್ಳಿ-ಕೆ.ಆರ್.ಪುರಂ ನಡುವಿನ ನೇರಳೆ ಮಾರ್ಗವೂ ಇದೀಗ ಸಂಚಾರಕ್ಕೆ ತೆರೆದುಕೊಳ್ಳುತ್ತಿದೆ. ಈ ಮಾರ್ಗದಲ್ಲಿ ಅಕ್ಟೋಬರ್ 7ರಿಂದ ಮೆಟ್ರೋ ಸಂಚಾರಕ್ಕೆ ಚಾಲನೆ ದೊರೆಯಲಿದೆ ಎಂದು ಬೆಂಗಳೂರು ರೈಲು ಮೆಟ್ರೋ ನಿಗಮ (ಬಿಎಂಆರ್‌ಸಿಎಲ್) ತಿಳಿಸಿದೆ.
ಇತ್ತೀಚೆಗೆ, ಕೆ.ಆರ್.ಪುರಂ ಮತ್ತು ವೈಟ್‌ಫೀಲ್ಡ್ ನಡುವಿನ ಮೆಟ್ರೋ ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಆದರೆ, ಕೆ.ಆರ್.ಪುರಂ ಮತ್ತು ಬೈಯಪ್ಪನಹಳ್ಳಿ ನಡುವಿನ ಮಾರ್ಗದಲ್ಲಿ ನಿರ್ಮಾಣ ಕಾರ್ಯ ಮತ್ತು ತಪ್ಪಿದ್ದ ಸಂಪರ್ಕ ಕೊಂಡಿ ಕೆಲಸಗಳ ಬಾಕಿ ಉಳಿದಿದ್ದರಿಂದ ಈ ಮಾರ್ಗದಲ್ಲಿ ಸಂಚಾರಕ್ಕೆ ಚಾಲನೆ ನೀಡಲಾಗಿರಲಿಲ್ಲ.
ಇದೀಗ, ಈ ಮಾರ್ಗದಲ್ಲಿ ಎಲ್ಲ ಕೆಲಸಗಳು ಪೂರ್ಣಗೊಂಡಿದ್ದು, ಶನಿವಾರ ಮೆಟ್ರೋ ಸಂಚಾರಕ್ಕೆ ಚಾಲನೆ ದೊರೆಯಲಿದೆ. ಬೈಯಪ್ಪನಹಳ್ಳಿ-ಕೆ.ಆರ್.ಪುರಂ ನಡುವಿನ ಮಾರ್ಗವು ತೆರೆದುಕೊಳ್ಳುವುದರ ಜತೆಗೆ ಸುಮಾರು 40 ಕಿಲೋ ಮೀಟರ್ ಉದ್ದದ್ದ ನೇರಳೆ ಮಾರ್ಗವು ಸಂಪೂರ್ಣವಾಗಿ ಪೂರ್ಣಗೊಳ್ಳಲಿದೆ.
ಈ ಸುದ್ದಿ ಓದಿದ್ದೀರಾ? ಮತದಾರ ಪಟ್ಟಿಗೆ ಹೆಸರು ನೋಂದಾಯಿಸಲು ಅರ್ಜಿ ಸಲ್ಲಿಕೆಗೆ ನ.6ರವರೆಗೆ ಅವಕಾಶ
ಇಂದಿನವರೆಗೆ, ಎಂಜಿ ರಸ್ತೆ, ಕೆಂಗೇರಿ ಭಾಗದಿಂದ ಕಾಡುಗೋಡಿಗೆ ಸಂಚರಿಸುವವರು ಬೈಯಪ್ಪನಹಳ್ಳಿಯಲ್ಲಿ ಇಳಿದು ಅಲ್ಲಿಂದ ಬಸ್ ಮೂಲಕ ಕೆ.ಆರ್.ಪುರಂಗೆ ತೆರಳಿ, ಅಲ್ಲಿಂದ ಮೆಟ್ರೋ ಮೂಲಕ ಕಾಡುಗೋಡಿ ತಲುಪಬೇಕಿತ್ತು. ಈಗ ಬೈಯಪ್ಪನಹಳ್ಳಿ-ಕೆ.ಆರ್.ಪುರಂ ನಡುವೆಯೂ ಮೆಟ್ರೋ ಸಂಚರಿಸುವುದರಿಂದ ಪ್ರಯಾಣಿಕರಿಗೆ ಬಸ್ ಹತ್ತುವ ಕಸರತ್ತು ಇಲ್ಲವಾಗಲಿದೆ.