ಉಡುಪಿ ಜಿಲ್ಲೆಯ ಪಡುಬಿದ್ರಿಯ ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಕೂರು ಗ್ರಾಮದ ದೇವರ ಕಾಡು ಪ್ರದೇಶದಲ್ಲಿ ನಿರ್ಮಾಣವಾಗಿರುವ M11 ಇಂಡಸ್ಟ್ರಿ ಬಯೋ ಡೀಸೆಲ್ ಹಾಗೂ ಫಾಮ್ ಆಯಿಲ್ ಘಟಕದಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ.
ಜಲ ಮಾಲಿನ್ಯದಿಂದಾಗಿ ಸಾರ್ವಜನಿಕರ ಹಾಗೂ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿದ್ದು, ಕಳೆದ ಒಂದೂವರೆ ತಿಂಗಳಿನಿಂದ ಸ್ಥಳೀಯ ಗ್ರಾಮಗಳಾದ ನಂದಿಕೂರು, ಪಲಿಮಾರು, ನಾಲು, ಪಾದಬೆಟ್ಟು, ಎಲ್ಲೂರು, ಹೆಜಮಾಡಿ, ಇನ್ನ ಹಾಗೂ ಕರ್ನಿರೆ ಗ್ರಾಮದ ವ್ಯಾಪ್ತಿಯಲ್ಲಿ ಈ ವಿಷ ಅನಿಲವು ಹರಡಿದ್ದು ಜನರು ಬದುಕುವ ಪರಿಸ್ಥಿತಿ ಕಷ್ಟಕರವಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಹಲವಾರು ಬಾರಿ ಗ್ರಾಮ ಪಂಚಾಯಿತಿ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಪ್ರತಿಭಟನೆಯ ಮೂಲಕ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಿಲ್ಲವೆಂಬಂತೆ ಆ ಕಂಪನಿಯಿಂದ ಆಗುವ ಸಮಸ್ಯೆಗಳಿಗೆ ಈವರೆಗೆ ಪರಿಹಾರ ಸಿಕ್ಕಿಲ್ಲ.
ಸ್ಥಳೀಯ ಅಂಗನವಾಡಿ ಹಾಗೂ ಶಾಲೆಯ ಮಕ್ಕಳಿಗೆ ತಲೆಸುತ್ತು ಬರುವಿಕೆ ಹಾಗೂ ವಾಂತಿಭೇದಿ ಅಂತಹ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಸ್ಥಳೀಯ ಸಾರ್ವಜನಿಕರು ಮುಖಕ್ಕೆ ಮಾಸ್ಕ್ ಅಥವಾ ಟವಲ್ ಸುತ್ತಿಕೊಂಡು ಮನೆಯ ಒಳಗೆ ಹಾಗೂ ಹೊರಗೆ ಓಡಾಡುವ ಪರಿಸ್ಥಿತಿ ಬಂದೊದಗಿದೆ ಹಾಗೂ ಮಳೆನೀರು ಹರಿಯುವ ತೋಡಿನಲ್ಲಿ ಕೆಮಿಕಲ್ ಮಿಶ್ರಿತ ನೀರು ಶಾಂಭವಿ ನದಿಗೆ ಸೇರುತ್ತಿದ್ದು ಮೀನುಗಳು ಸಾಯುತ್ತಿರುವುದು ಸಾರ್ವಜನಿಕರಿಗೆ ಆತಂಕ ಉಂಟಾಗಿದೆ.

ಈಗಾಗಲೇ ಪರಿಸರ ಇಲಾಖೆ ಅಧಿಕಾರಿಗಳು ನೀರಿನ ಸ್ಯಾಂಪಲ್ ಪಡೆದು ವರದಿ ನೀಡಿರುತ್ತಾರೆ. ಕಂಪನಿಗೆ ಶೋಕಾಸ್ ನೋಟೀಸ್ ನೀಡಲಾಗಿದ್ದು ಕಂಪನಿಯು ಯಾವುದೇ ನೋಟಿಸ್‌ಗೆ ಕ್ಯಾರೆ ಎನ್ನದೆ ಕಾನೂನು ಉಲ್ಲಂಘನೆ ಮಾಡಿದೆ. ಈ ಕಂಪನಿಯಲ್ಲಿ ಅಕ್ರಮವಾಗಿ ಬೃಹತ್ ಕೊಳವೆ ಬಾವಿಗಳನ್ನು ಕೂಡ ತೋಡಿದೆ. ಇದರಿಂದ ಸ್ಥಳೀಯ ಜನರಿಗೆ ಬಾವಿಯ ನೀರು ಬತ್ತಿ ಅಂತರ್ಜಲ ಮಟ್ಟ ಕುಸಿದು ಜನರಿಗೆ ಕುಡಿಯಲು ನೀರು ಕೂಡ ಸಿಗದೇ ಪರದಾಡುವ ಪರಿಸ್ಥಿತಿ ಬಂದೊದಗಿದೆ.
ಈಗಾಗಲೇ ಸ್ಥಳೀಯ ಬಾವಿ ಮತ್ತು ಬೋರ್ವೆಲ್‌ಗಳಲ್ಲಿ ಡೀಸೆಲ್ ಮಿಶ್ರಿತ ಎಣ್ಣೆಯ ಅಂಶ ಕಂಡುಬಂದಿದ್ದು, ಕುಡಿಯುವುದು ಬಿಟ್ಟು ಬಟ್ಟೆ ಒಗೆಯಲು ಕೂಡ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಪಲಿಮಾರು ಕಿಂಡಿ ಅಣೆಕಟ್ಟುವಿನಿಂದ ನೀರು ಕೊಂಡೊಯ್ಯಲು ಪಿಡಬ್ಲ್ಯೂಡಿ ರಸ್ತೆ ಅಂಚಿನಲ್ಲಿ ಹಾಗೂ ರಾಜ್ಯ ಹೆದ್ದಾರಿಯಲ್ಲಿ ಹಾಕಿರುವ ಪೈಪ್ ಲೈನ್ ಅನ್ನು ತೆರವುಗೊಳಿಸಿ ರಸ್ತೆ ಬದಿಯ ಚರಂಡಿಗಳನ್ನು ಯಥಾ ಸ್ಥಿತಿಯನ್ನು ಸರಿಪಡಿಸಿಕೊಡಬೇಕಾಗಿದೆ. ಸ್ಥಳೀಯವಾಗಿ ಕಟ್ಟಿಗೆ (ಕಚ್ಚಾ ವಸ್ತು) ಬೃಹತ್ ಪ್ರಮಾಣದಲ್ಲಿ ಬೇಕಾಗಿದ್ದು, ಈ ಕಂಪನಿಯ ಕೆಲವು ಗುತ್ತಿಗೆದಾರರು ದುಡ್ಡಿನ ಆಸೆಗಾಗಿ ಸ್ಥಳೀಯ ಪರಿಸರದಲ್ಲಿರುವ ಗಿಡ ಮರ ಪೊದೆಗಳನ್ನು ನಾಶ ಮಾಡಿ ಯಾವುದೇ ಅನುಮತಿ ಇಲ್ಲದೆ ಟನ್ ಗಟ್ಟಲೆ ಕಟ್ಟಿಗೆ ಸಾಗಿಸುತ್ತಿರುವುದು ಕಂಡುಬಂದಿದೆ.
ಹೀಗೆ ಮುಂದುವರೆದರೆ ಪರಿಸರ ನಾಶವಾಗುತ್ತಾ ಬಂದರೆ ಈ ಭಾಗದಲ್ಲಿರುವ ಜನರು ಜೀವನ ನಡೆಸುವುದು ಕಷ್ಟಕರವಾಗಿರುತ್ತದೆ. ಹಾಲಿ ಶಾಸಕರು ಮಾಜಿ ಶಾಸಕರು ಜನಪ್ರತಿನಿಧಿಗಳು ಭೇಟಿ ನೀಡಿ ಕಂಪನಿಯನ್ನು ಪರಿಸರ ಮಾಲಿನ್ಯ ರಹಿತವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದು ಯಾವುದಕ್ಕೂ ಕಂಪನಿ ಕ್ಯಾರೇ ಎನ್ನುತ್ತಿಲ್ಲ.
ಹಾಗಾಗಿ ಸ್ಥಳೀಯರೆಲ್ಲರೂ, ಎಲ್ಲ ಗ್ರಾಮಗಳ ಜನರು, ವಿವಿಧ ಸಂಘ ಸಂಸ್ಥೆಗಳು ಹಾಗೂ ಸ್ಥಳೀಯ ಎಲ್ಲಾ ಗ್ರಾಮ ಪಂಚಾಯತ್ ಬೆಂಬಲದೊಂದಿಗೆ ಪಕ್ಷಾತೀತವಾಗಿ ಎಲ್ಲ ಜನ ಪ್ರತಿನಿಧಿಗಳ ಬೆಂಬಲದೊಂದಿಗೆ ಇಂದು ಕಂಪನಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಈ ದಿನ.ಕಾಮ್ ಜೊತೆ ಮಾತನಾಡಿದ ಪಾಲಿಮಾರ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, M11 ಕಂಪನಿ ನಮ್ಮ ಪಂಚಾಯತ್ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಕೃಷಿ ಭೂಮಿ ಜಾಸ್ತಿ ಇದೆ. ಇಂತಹ ಕೃಷಿ ಭೂಮಿಯ ನಡುವಿನ ಜಾಗದಲ್ಲಿ ಪರಿಸರ ಮಾಲಿನ್ಯ ಮಾಡುವಂತಹ ಕಂಪನಿ ಬಂದಿದೆ. ಮಳೆಯ ನೀರಿನ ಜೊತೆಯಲ್ಲಿ ಒಂದು ರೀತಿಯ ಎಣ್ಣೆ ಮಿಶ್ರಿತ ನೀರು ಹರಿಯುತ್ತಲಿದೆ. ಸಾರ್ವಜನಿಕರಿಗೆ ಒಂದು ರೀತಿಯ ಕೆಟ್ಟ ವಾಸನೆ ಬಂದು ಬಹಳಷ್ಟು ಸಮಸ್ಯೆ ಆಗುತ್ತಿದೆ. ಆ ವಾಸನೆಗೆ ತಲೆಸುತ್ತು ಬಂದಿದೆ ಎಂದು ಸ್ಥಳೀಯ ದೂರು ನೀಡುತ್ತಿದ್ದಾರೆ” ಎಂದರು.
“ಪಂಚಾಯತ್ ಗಮನಕ್ಕೆ ಬಂದಾಗ ಗ್ರಾಮ ಸಭೆಯಲ್ಲಿ ಕಂಪನಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೆವು. ಸಂಬಂಧ ಪಟ್ಟ ಎಲ್ಲಾ ಇಲಾಖೆಗೆ ಪತ್ರದ ಮೂಲಕ ದೂರನ್ನು ಸಹ ನೀಡಿದ್ದೇವೆ. ಈವರೆಗೆ ಕ್ರಮವಾಗಿಲ್ಲ. ನಮ್ಮ ಬೇಡಿಕೆ ಒಂದೇ, ಪರಿಸರಕ್ಕೆ ಮಾರಕವಾದ ಯಾವುದೇ ಕಂಪನಿಗಳು ನಮಗೆ ಬೇಡ” ಎಂದು ಹೇಳಿದರು.

ಈದಿನ.ಕಾಮ್ ಜೊತೆ ಮಾತನಾಡಿದ ದಿನೇಶ್ ಕೋಟ್ಯಾನ್, ಕಂಪನಿಯ ಪ್ರಾರಂಭಿಕ ಹಂತದಲ್ಲಿಯೇ ಗ್ರಾಮಸ್ಥರಿಗೆ ಸಮಸ್ಯೆ ಉಂಟು ಮಾಡುತ್ತಿದೆ. ಕಂಪನಿ ವಿರುದ್ಧ ದೂರು ನೀಡಿದರು ಯಾವುದೇ ಸ್ಪಂದನೆ ಸಿಕ್ಕಿಲ್ಲ.ನಾವು ಕಂಪನಿಗೆ ವಿರುದ್ದ ಅಲ್ಲ. ಮಾಲಿನ್ಯ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ಆಗದೆ ಇವರು ರೀತಿಯಲ್ಲಿ ಕಂಪನಿ ನಡೆಸಿ, ಕೈಗಾರಿಕೆ, ಉದ್ಯೋಗ, ಅಭಿವೃದ್ಧಿ ಎಲ್ಲವೂ ಬೇಕು. ಅದರ ಜೊತೆಯಲ್ಲಿ ಪರಿಸರ ಕೂಡ ಸ್ವಚ್ಛವಾಗಿರಬೇಕು” ಎಂದು ಹೇಳಿದರು.
ಜಿಲ್ಲಾಧಿಕಾರಿ ಭೇಟಿ ಮತ್ತು ಎಚ್ಚರಿಕೆ
ಪರಿಸರ ಅಧಿಕಾರಿಗಳ ಪರೀಕ್ಷಾ ವರದಿಗನುಗುಣವಾಗಿ ಅವರ ಸೂಚನೆಯನ್ನು ಕಂಪನಿ ಪಾಲಿಸಬೇಕು. ತಪ್ಪಿದ್ದಲ್ಲಿ ಕಂಪನಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಎಚ್ಚರಿಸಿದ್ದಾರೆ.

ಅಡುಗೆ ಎಣ್ಣೆಯನ್ನು ಮರು ಬಳಕೆ ಮಾಡಿ ಬಯೋ ಡಿಸೇಲ್ ಉತ್ಪಾದಿಸುವ ಎಂ11 ಕಂಪನಿಯು ವಿಷಯುಕ್ತ ತ್ಯಾಜ್ಯವನ್ನು ಪರಿಸರಕ್ಕೆ ಬಿಡುತ್ತಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಪರಿಸರವನ್ನು ಮಲಿನಗೊಳಿಸುವಂತಿಲ್ಲ ಮತ್ತು ಸ್ಥಳೀಯರ ಉದ್ಯೋಗವನ್ನು ಕಸಿದುಕೊಳ್ಳುವಂತಿಲ್ಲ. ಸರ್ಕಾರದ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
