‘ಭಾರತವು ದೀರ್ಘಾವಧಿಯಿಂದ ಪ್ಯಾಲೆಸ್ತೀನ್ ಪರ ಹಿತಾಸಕ್ತಿಯನ್ನು ಬೆಂಬಲಿಸುವ ಮತ್ತು ಮಾನವ ಹಕ್ಕುಗಳನ್ನು ಎತ್ತಿ ಹಿಡಿಯುವ ನೀತಿಯನ್ನು ಅನುಸರಿಸಿದೆ. ಜೊತೆಗೆ ಭಾರತ ಇಸ್ರೇಲ್‌ನೊಂದಿಗೆ ದೊಡ್ಡಮಟ್ಟದ ವಹಿವಾಟು ಕೂಡ ನಡೆಸುತ್ತಿದೆ. ಹಾಗಾಗಿ, ಗಾಝಾದ ಮೇಲೆ ಇಸ್ರೇಲ್ ಸುರಿಸುತ್ತಿರುವ ಬಾಂಬ್ ದಾಳಿಯನ್ನು ನಿಲ್ಲಿಸಲು ಭಾರತವು ಮಧ್ಯ ಪ್ರವೇಶ ಮಾಡಬೇಕು ಎಂದು ಕರ್ನಾಟಕ ಸಂಘಟನೆಗಳ ಮತ್ತು ಧಾರ್ಮಿಕ ನೇತಾರರ ಪ್ಯಾಲೆಸ್ತೀನ್ ಸಹಾನುಭೂತಿ ಒಕ್ಕೂಟ ಆಗ್ರಹಿಸಿದೆ.
ಇಂದು(ಅ.26) ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಬಿಫ್ಟ್ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಆಗ್ರಹ ವ್ಯಕ್ತಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖ್ಯಾತ ವಕೀಲ, ಸಾಮಾಜಿಕ ಹೋರಾಟಗಾರ ಬಿ ವೆಂಕಟೇಶ್, ‘ಪ್ಯಾಲೆಸ್ತೀನ್ ಮತ್ತೊಮ್ಮೆ ವಿನಾಶಕಾರಿ ಯುದ್ಧದ ಜ್ವಾಲೆಯಿಂದ ಆವರಿಸಿದೆ. ತೆರೆದ ಜೈಲಿನಂತಹ ಪರಿಸ್ಥಿತಿಯಲ್ಲಿ ವಾಸಿಸುತ್ತಿರುವ ಸುಮಾರು 2.3 ಮಿಲಿಯನ್ ಬಡ ಜನರಿಗೆ ನೆಲೆಯಾಗಿರುವ ಕಿರಿದಾದ ಭೂಮಿಯ ಮೇಲೆ ನಿರಂತರವಾಗಿ ಇಸ್ರೇಲ್ ಮಾಡುತ್ತಿರುವ ಬಾಂಬ್ ದಾಳಿಯಿಂದಾಗಿ ಸಾವಿರಾರು ಮಕ್ಕಳು, ಮಹಿಳೆಯರು ಸಹಿತ ಅಮೂಲ್ಯ ಜೀವ ಮತ್ತು ಆಸ್ತಿಪಾಸ್ತಿಯ ನಷ್ಟಕ್ಕೆ ಕಾರಣವಾಗಿದೆ. ಹಾಗಾಗಿ, ಕೂಡಲೇ ಕದನ ವಿರಾಮ ಘೋಷಿಸಲು ಹಾಗೂ ಶಾಂತಿಯ ಮಾತುಕತೆ ಸ್ಥಾಪನೆಗೆ ಭಾರತ ಮುಂದಾಗಬೇಕು’ ಎಂದು ಒತ್ತಾಯಿಸಿದರು.
‘ಭಾರತವು ದೀರ್ಘಾವಧಿಯಿಂದ ಪ್ಯಾಲೆಸ್ತೀನ್ ಹಿತಾಸಕ್ತಿಯನ್ನು ಬೆಂಬಲಿಸುವ ಮತ್ತು ಮಾನವ ಹಕ್ಕುಗಳನ್ನು ಎತ್ತಿ ಹಿಡಿಯುವ ನೀತಿಯನ್ನು ಅನುಸರಿಸಿದೆ. ವಿಶ್ವಸಂಸ್ಥೆಯ ನಿರ್ಣಯಗಳು ಮತ್ತು ಅಂತಾರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವಲ್ಲಿ ನಮ್ಮ ದೇಶವು ಮಧ್ಯವರ್ತಿಯ ಪಾತ್ರವನ್ನು ವಹಿಸಬೇಕು. ಇಸ್ರೇಲ್ ಯುದ್ಧ ತಕ್ಷಣ ನಿಲ್ಲಿಸುವಂತೆ ಅಂತಾರಾಷ್ಟ್ರೀಯ ಸಮುದಾಯ ಒತ್ತಡ ಹಾಕಬೇಕು. ಯುದ್ಧಾಪರಾಧ ಎಸಗುತ್ತಿರುವ ಇಸ್ರೇಲ್ ವಿರುದ್ಧ ವಿಶ್ವಸಂಸ್ಥೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಡಾ. ಬೆಳಗಾಮಿ ಮಹಮ್ಮದ್ ಸಾದ್ ಮಾತನಾಡಿ, ಇಸ್ರೇಲ್ ಇಂದು ಗಾಝಾದ ಮೇಲೆ ನಡೆಸುತ್ತಿರುವ ದಾಳಿಯಿಂದಾಗಿ ಸಾವಿರಾರು ಅಮೂಲ್ಯ ಜೀವ ಮತ್ತು ಆಸ್ತಿಪಾಸ್ತಿಯ ನಷ್ಟಕ್ಕೆ ಕಾರಣವಾಗಿದೆ. 31 ಮಸೀದಿಗಳು, 4 ಚರ್ಚ್‌ಗಳು, ಹಲವಾರು ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಗುರಿಯಾಗಿಸಿ ವೈಮಾನಿಕ ದಾಳಿ ನಡೆಸಲಾಗಿದೆ. ಆಹಾರ, ನೀರು, ಇಂಧನ, ವಿದ್ಯುತ್ ಮತ್ತು ಔಷಧಿಗಳ ಮೇಲೆ ಸಂಪೂರ್ಣ ದಿಗ್ಬಂಧನ ಹೇರಲಾಗಿದೆ. ಇಸ್ರೇಲ್‌ನ ಈ ಸಾಮೂಹಿಕ ಶಿಕ್ಷೆಯಿಂದಾಗಿ ಮಾನವ ಕುಲವೇ ನಾಚಿಕೆಪಟ್ಟುಕೊಳ್ಳುವಂತಾಗಿದೆ’ ಎಂದು ತಿಳಿಸಿದರು.
‘ಭಾರತ ಇಂದು ವಿಶ್ವದಲ್ಲಿ ತಮ್ಮದೇ ಆದ ಘನತೆಯನ್ನು ಹೊಂದಿದೆ. ಗಾಝಾದ ದುಃಖಿತ ಸಂತ್ರಸ್ತರಿಗೆ ನೆರವಿನ ರವಾನೆಯು ಸ್ವಾಗತಾರ್ಹ ಹೆಜ್ಜೆಯಾಗಿದೆ. ಸಂತ್ರಸ್ತರನ್ನು ಬೆಂಬಲಿಸುವುದು ಮತ್ತು ದಬ್ಬಾಳಿಕೆ ಮಾಡುವವರನ್ನು ವಿರೋಧಿಸುವುದು ನಾಗರಿಕರ ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕಾಗಿದ್ದು, ಅದನ್ನು ರಕ್ಷಿಸಬೇಕು. ಇಸ್ರೇಲ್ ತನ್ನ ಗ್ರೇಟರ್ ಇಸ್ರೇಲ್ ಎಂಬ ಗುರಿಯನ್ನು ಸಾಧಿಸುವ ಇರಾದೆಯಿಂದ ಅಂತಾರಾಷ್ಟ್ರೀಯ ಕಾನೂನು, ನ್ಯಾಯ ಮತ್ತು ವಿಶ್ವಸಂಸ್ಥೆಯ ನಿರ್ಣಯಗಳಿಗೆ ಬಹಿರಂಗ ವಿರೋಧ ತೋರುತ್ತಾ ಫೆಲೆಸ್ತೀನ್ ಗಡಿ ಮತ್ತು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ. ನಿಜವಾದ ಸಮಸ್ಯೆ ಅತಿಕ್ರಮಣವೇ ಹೊರತು ಪ್ರತಿರೋಧವಲ್ಲ. ಅಂತಾರಾಷ್ಟ್ರೀಯ ಸಮುದಾಯ, ಅದರಲ್ಲೂ ಭಾರತ ಮತ್ತು ಮುಸ್ಲಿಂ ರಾಷ್ಟ್ರಗಳು ಒಗ್ಗೂಡಿ ಈ ಅನ್ಯಾಯ ಮತ್ತು ದಬ್ಬಾಳಿಕೆಯನ್ನು ಕೊನೆಗಾಣಿಸಲು ಇಸ್ರೇಲ್ ಮೇಲೆ ಒತ್ತಡ ಹಾಕಬೇಕಿದೆ’ ಎಂದು ತಿಳಿಸಿದರು.
‘ವಿಶ್ವಸಂಸ್ಥೆಯು ಇಸ್ರೇಲ್‌ನ ವಿರುದ್ಧ ಸುಮಾರು 45 ಅಧಿಕೃತ ನಿರ್ಣಯಗಳನ್ನು ಅಂಗೀಕರಿಸಿತ್ತು. ಸಂಘರ್ಷ ನಿಂತು, ಶಾಂತಿ ನೆಲೆಗೊಳ್ಳಬೇಕು ಎಂದು ಹೇಳಿಕೆ ನೀಡಿದ ಕಾರಣಕ್ಕೆ, ವಿಶ್ವಸಂಸ್ಥೆಯು ನಮ್ಮ ನೆಲಕ್ಕೆ ಬರಬಾರದು ಎಂದು ಇಸ್ರೇಲ್ ವೀಸಾ ರದ್ದು ಪಡಿಸಿದೆ. ಇದು ಅಧಿಕಾರದ ಮದ, ತಾನು ದೊಡ್ಡವನು ಎಂಬ ಅಹಂಕಾರ ಬಂದು ಬಿಟ್ಟಿದೆ’ ಎಂದು ಮಾಸ್ ಮೀಡಿಯಾದ ಅಕ್ಬರ್ ಅಲಿ ಉಡುಪಿ ಹೇಳಿದರು.
‘ಹಮಾಸ್ 40 ಮಕ್ಕಳ ಶಿರಚ್ಛೇದ ಮಾಡಿದೆ ಎಂದು ಸುಳ್ಳು ಸುದ್ದಿ ಹರಡಲಾಗಿತ್ತು. ಅಮೆರಿಕ ಅಧ್ಯಕ್ಷರೂ ಕೂಡ ಅದನ್ನೇ ನಂಬಿಕೊಂಡು ಭಾಷಣದಲ್ಲಿ ಉಲ್ಲೇಖಿಸಿದ್ದರು. ಕೊನೆಗೆ ಸುದ್ದಿ ಹರಿಡಿದ್ದ ಸಿಎನ್‌ಎನ್ ಸಂಸ್ಥೆಯೇ, ಹಾಗೆ ಆಗಿಲ್ಲ. ಅದು ಸುಳ್ಳು ಸುದ್ದಿ ಎಂದು ಕ್ಷಮೆ ಕೇಳಿತು. ಇಸ್ರೇಲ್ ತನ್ನ ನಿಲುವುಗಳನ್ನು ಸಮರ್ಥಿಸಿಕೊಳ್ಳಲು ಸುಳ್ಳುಗಳನ್ನು ಸೃಷ್ಟಿ ಮಾಡಿ, ಹರಡುತ್ತಿದೆ’ ಎಂದು ತಿಳಿಸಿದರು.
‘ಇಸ್ರೇಲ್ ಕೂಡಲೇ ಕದನ ವಿರಾಮ ಘೋಷಿಸಬೇಕು. ಗಾಝಾದ ಮೇಲಿನ ಮುತ್ತಿಗೆಯನ್ನು ತೆಗೆದು ಹಾಕಬೇಕು. ಮಾನವೀಯ ಪರಿಹಾರವನ್ನು ಒದಗಿಸುವುದು, ಮೂಲಭೂತ ಸೌಕರ್ಯಗಳ ಮರುಸ್ಥಾಪನೆ, ನಾಗರಿಕರಿಗೆ ರಕ್ಷಣೆ, ಅಂತಾರಾಷ್ಟ್ರೀಯ ಕಾನೂನಿಗೆ ಗೌರವ ಮತ್ತು ಪರಸ್ಪರ ಸಮಾಲೋಚನೆಯ ಕೆಲಸವನ್ನು ತಡ ಮಾಡದೆ ಶೀಘ್ರವಾಗಿ ಕಾರ್ಯಗತ ಮಾಡಬೇಕು. ಸ್ವತಂತ್ರ ಪ್ಯಾಲೆಸ್ತೀನ್ ದೇಶವನ್ನು ಸ್ಥಾಪಿಸುವುದು ಮತ್ತು ಅನ್ಯಾಯ-ಅಕ್ರಮಣವನ್ನು ಕೊನೆಗೊಳಿಸುವುದು ಶಾಂತಿ ಸ್ಥಾಪನೆಗೆ ಏಕೈಕ ಶಾಶ್ವತ ಮಾರ್ಗವಾಗಿದೆ. ಹಾಗಾಗಿ, ಶಾಂತಿಯ ಮಾತುಕತೆಗೆ ಭಾರತ ಮುಂದಾಗಬೇಕು’ ಎಂದು ಅಕ್ಬರ್ ಅಲಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಟಿ ಜಾಮಿಯಾ ಮಸೀದಿಯ ಗುರುಗಳಾದ ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿ, ಜಮೀಯತುಲ್ ಉಲಮಾ ಕರ್ನಾಟಕದ ಅಧ್ಯಕ್ಷ ಮೌಲಾನಾ ಇಫ್ತಿಕಾರ್ ಖಾಸ್ಮಿ, ಸೋಲಿಡಾರಿಟಿ ಯೂತ್‌ಮೂಮೆಂಟ್‌ನ ರಾಜ್ಯಾಧ್ಯಕ್ಷ ಲಬೀದ್ ಶಾಫಿ ಉಪಸ್ಥಿತರಿದ್ದರು.