ನರೇಗಾ (ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ) ಗ್ರಾಮೀಣ ಪ್ರದೇಶದ ಬಡವರಿಗೆ, ದಿನಗೂಲಿ ಕಾರ್ಮಿಕರಿಗೆ ಆರ್ಥಿಕ ನೆರವನ್ನು ಒದಗಿಸಿ ಅವರನ್ನು ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟಲು ಮತ್ತು ಗ್ರಾಮೀಣ ಕುಟುಂಬಗಳನ್ನು ಆರ್ಥಿಕವಾಗಿ ಸದೃಢಗೊಳಿಸಲು ಉದ್ದೇಶಿಸಿ ಶುರು ಮಾಡಿದ ಯೋಜನೆ. ಆದರೆ, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕು ಪಂಚಾಯತಿ ವ್ಯಾಪ್ತಿಯ ಹಲವಾರು ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ನರೇಗಾ ಕೆಲಸಗಳನ್ನು ಮಾಡಿಸುತ್ತಿರುವ ಆರೋಪಗಳು ಕೇಳಿ ಬಂದಿವೆ.
ಈ ಯೋಜನೆಯಲ್ಲಿ ಸ್ಥಳೀಯ ಪ್ರಭಾವಿ ವ್ಯಕ್ತಿಗಳು, ಗುತ್ತಿಗೆದಾರರು ಮತ್ತು ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು ನಿರ್ಬಂಧಿತ ಸಮುದಾಯ ಕಾಮಗಾರಿಗಳನ್ನು ಮಾಡುತ್ತಿರುವುದು ಕಂಡುಬಂದಿದೆ.
ನರೇಗಾ ಯೋಜನೆಯ ಮಾರ್ಗಸೂಚಿಗಳು ಅನ್ವಯ, ಈ ಕಾಮಗಾರಿಗಳು ಗುತ್ತಿಗೆ ನೀಡದೆ ಸ್ಥಳೀಯ ಉದ್ಯೋಗಾರ್ಥಿಗಳಿಗೆ ಮಾತ್ರ ನೀಡಬೇಕು. ಆದರೆ, ಪ್ರಭಾವಶಾಲಿ ರಾಜಕೀಯ ನಾಯಕರ, ಗುತ್ತಿಗೆದಾರರ ಒತ್ತಡದಿಂದಾಗಿ ಕಾಮಗಾರಿಗಳನ್ನು ಯಂತ್ರಗಳ ಸಹಾಯದಿಂದ ನಡೆಸಲಾಗುತ್ತಿದ್ದು, ನರೇಗಾ ಮಾರ್ಗಸೂಚಿಗಳನ್ನು ಗಾಳಿಗೆ ತೂರಲಾಗಿದೆ.

ಸರ್ಕಾರವು ಗುತ್ತಿಗೆದಾರರು ಮತ್ತು ಜನಪ್ರತಿನಿಧಿಗಳು ನರೇಗಾ ಯೋಜನೆ ವ್ಯಾಪ್ತಿಯಲ್ಲಿ ಸಮುದಾಯ ಕಾಮಗಾರಿಗಳನ್ನು ನಿರ್ವಹಿಸುವುದನ್ನು ನಿಷೇಧಿಸಿರುವುದರಿಂದ, ಈ ಯೋಜನೆ ಕಾರ್ಯಾನುಷ್ಠಾನದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO), ನರೇಗಾ ಇಂಜಿನಿಯರ್ ಮತ್ತು ಸಹಾಯಕ ನಿರ್ದೇಶಕರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅವರು ಈ ಭ್ರಷ್ಟಾಚಾರದ ಭಾಗವಾಗಿ, ಯೋಜನೆಯ ಹಣವನ್ನು ಗುತ್ತಿಗೆದಾರರು ಮತ್ತು ಜನಪ್ರತಿನಿಧಿಗಳ ಪಾಲಾಗುವಂತೆ ಮಾಡಿದ್ದಾರೆ ಎನ್ನಲಾಗಿದೆ.
ಭ್ರಷ್ಟಾಚಾರ ತಡೆಗಟ್ಟಲು, ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆ (ಕ.ರಾ.ಮಾ.ಹ.ವೇ) ಎರಡು ತಿಂಗಳಿಂದ ಸಾಕಷ್ಟು ಪೂರಕ ಮಾಹಿತಿಗಳನ್ನು ಸಂಗ್ರಹಿಸಿ, ಸ್ಥಳೀಯ ಕಾಮಗಾರಿಗಳನ್ನು ಖುದ್ದು ವೀಕ್ಷಣೆಯನ್ನು ನಡೆಸಿದ್ದಾರೆ. ಮಾನವ ಸಂಪನ್ಮೂಲವನ್ನು ಬಳಸದೆ, ಯಂತ್ರಗಳನ್ನು ಬಳಸಿ ಕಾಮಗಾರಿಗಳನ್ನು ಮುಗಿಸುತ್ತಿರುವ ಅಂಶಗಳು ಕಂಡುಬಂದಿದೆ. ಅದೆಲ್ಲವೂ ನರೇಗಾ ಯೋಜನೆ ನಿಯಮಗಳ ವಿರುದ್ಧವಾಗಿದೆ.
ಇದನ್ನು ಓದಿದ್ದೀರಾ? ಮಂಡ್ಯ | ಕನ್ನಡ ಸಾಹಿತ್ಯ ಸಮ್ಮೇಳನ: ಒಂದು ದಿನದ ವೇತನ ನೀಡಲು ಸರ್ಕಾರಿ ನೌಕರರಿಗೆ ಜಿಲ್ಲಾಧಿಕಾರಿ ಮನವಿ
ನಕಲಿ ಹಾಜರಾತಿಗಳ ಮೂಲಕ, ನಕಲಿ ಕೂಲಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ. ಈ ದಂಧೆಯಲ್ಲಿ ಪಿಡಿಓ, ನರೇಗಾ ಇಂಜಿನಿಯರ್ ಮತ್ತು ಸಹಾಯಕ ನಿರ್ದೇಶಕರು ಸೇರಿದಂತೆ ಸ್ಥಳೀಯ ಅಧಿಕಾರಿಗಳು ಭಾಗವಹಿಸಿದ್ದಾರೆ ಎಂದು ಕ.ರಾ.ಮಾ.ಹ.ವೇ ಅನೇಕ ಬಾರಿ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಫಲಕಾರಿಯಾಗಿಲ್ಲ.
ನರೇಗಾ ಯೋಜನೆಯ ಪಾರದರ್ಶಕತೆಯನ್ನು ಕಾಪಾಡಲು ಸರಕಾರ 2023ರ ಜನವರಿಯಿಂದ NMMS ಅಪ್ಲಿಕೇಶನ್ ಮೂಲಕ ಕೂಲಿಕಾರ್ಮಿಕರ ಜಿಯೋ-ಟ್ಯಾಗ್ ಛಾಯಾಚಿತ್ರಗಳನ್ನು ಪ್ರತಿದಿನ ಎರಡು ಬಾರಿ ಸೆರೆಹಿಡಿಯುವ ಮತ್ತು ಅಪ್ಲೋಡ್ ಮಾಡುವ ನಿಯಮವನ್ನು ಮಾಡಿದೆ.
ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳು ಈ ಜವಾಬ್ದಾರಿಯನ್ನು ನಿರ್ಲಕ್ಷಿಸಿದ್ದು, ಛಾಯಾಚಿತ್ರಗಳಲ್ಲಿ ಕಾರ್ಮಿಕರ ಮುಖ ಎದ್ದು ಕಾಣುವಂತೆ ಸರಿಯಾಗಿ ಸೆರೆಹಿಡಿಯದೆ, ಸುಳ್ಳು ದಾಖಲೆಗಳನ್ನು ರಚಿಸುತ್ತಿದ್ದಾರೆ ಎಂಬ ಆರೋಪವಿದೆ. ಕೆ.ಬೆಟ್ಟಹಳ್ಳಿ, ನಾರಾಯಣಪುರ, ಸುಂಕತಣ್ಣೂರು, ತಿರುಮಲಸಾಗರ, ಕಟ್ಟೇರಿ ಮತ್ತು ಕನಗನಮರಡಿ ಗ್ರಾಮ ಪಂಚಾಯಿತಿಗಳಲ್ಲಿ ಹಲವಾರು ಕಾಮಗಾರಿಗಳನ್ನು ಗುತ್ತಿಗೆದಾರರು ಯಂತ್ರೋಪಯೋಗದ ಮೂಲಕ ಕಾಮಗಾರಿ ಮಾಡಿರುವುದು ಬಹಿರಂಗವಾಗಿದೆ. ನರೇಗಾ ಯೋಜನೆಯ ಕಾಮಗಾರಿಗಳು ಕಳಪೆಯಾಗಿವೆ ಎನ್ನಲಾಗಿದೆ.
ಪಂಚಾಯತ್ ರಾಜ್ ಇಲಾಖೆಯ ಪಿಡಿಓಗಳು, ಇಂಜಿನಿಯರ್, ಗುತ್ತಿಗೆದಾರರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಆರ್‌ಟಿಐ ಹೋರಾಟಗಾರಿಗೆ ಫೋನ್ ಕರೆಗಳ ಮೂಲಕ ಕೊಲೆ ಬೆದರಿಕೆ ಹಾಕಿ ದಬ್ಬಾಳಿಕೆಗೆ ಮಾಡುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆ ಇಂತಹ ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಹೋರಾಟ ಮಾಡುವ ಭ್ರಷ್ಟ ಅಧಿಕಾರಿಗಳನ್ನು ಬಯಲಿಗೆ ತರುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ದೂರಿರುವ ಕಾಮಗಾರಿಯನ್ನು ಸ್ಥಗಿತಗೊಳಿಸಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಅಮಾನತು ಮಾಡಿ ಸೂಕ್ತ ತನಿಖೆ ಮಾಡಿ ಕಾನೂನು ಶಿಸ್ತಿನ ಕ್ರಮ ಕೈಗೊಳ್ಳಬೇಕು. ತಾಲೂಕಿನ ಎಲ್ಲಾ ನರೇಗಾ ಕಾಮಗಾರಿಯ ಭ್ರಷ್ಟಾಚಾರದ ವಿರುದ್ಧ ತನಿಖೆ ಕೈಗೊಳ್ಳಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಪಾರದರ್ಶಕವಾಗಿ ಅನುಸರಿಸಿ ಅರ್ಹ ಜನರಿಗೆ ಕೆಲಸ ಕೊಡಬೇಕು. ಗುತ್ತಿಗೆದಾರರು ಹಾಗೂ ಭ್ರಷ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
