ಗ್ರಾಹಕರೊಬ್ಬರು ಠೇವಣಿ ಇರಿಸಿದ್ದ ಹಣವನ್ನು, ಅವಧಿ ಮುಗಿದರೂ ಹಿಂದಿರುಗಿಸದೆ ನಿರ್ಲಕ್ಷ್ಯ ಧೋರಣೆ ಪ್ರದರ್ಶಿಸಿದ್ದ ಧಾರವಾಡದ ವಿಕಾಸ್ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸೊಸೈಟಿಗೆ ಗ್ರಾಹಕ ಆಯೋಗ ದಂಡ ವಿಶಿದಿದೆ. ಠೇವಣಿ ಹಣ ಮತ್ತು ಅದಕ್ಕೆ 13.5% ಬಡ್ಡಿ ಸೇರಿಸಿ ಕೊಡುವಂತೆ ಆದೇಶಿಸಿದೆ.
ಧಾರವಾಡದ ಕಮಲಾಪುರ ನಿವಾಸಿ ಅನ್ನಪೂರ್ಣಾಹುಲ್ಲಮನಿ ಎಂಬವರು ಸೊಸೈಟಿಯಲ್ಲಿ 2020ರಲ್ಲಿ 1.5 ಲಕ್ಷ ರೂ. ಮತ್ತು 2021ರಲ್ಲಿ 1 ಲಕ್ಷ ರೂ. ಹಣವನ್ನು ಒಂದು ವರ್ಷದ ಅವಧಿಗೆ ಠೇವಣಿ ಇಟ್ಟಿದ್ದರು. ಎರಡೂ ಠೇವಣಿಗಳ ಅವಧಿ ಮುಗಿದ ಬಳಿಕ, ಹಣ ಮತ್ತು ಬಡ್ಡಿಯ ಕೊತ್ತವನ್ನು ನೀಡುವಂತೆ ಸೊಸೈಟಿಗೆ ಕೇಳಿದ್ದರು. ಆದರೆ, ಸೊಸೈಟಿ ಹಣ ನೀಡಿರಲಿಲ್ಲ. ಹೀಗಾಗಿ, ಅನ್ನಪೂರ್ಣ ಅವರು ಸೊಸೈಟಿ ವಿರುದಧ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ನೀಡಿದ್ದರು.
ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು ಪ್ರಕರಣದ ವಿಚಾರಣೆ ನಡೆಸಿದ್ದು, ಸೊಸೈಟಿಗೆ ದಂಡ ವಿಧಿಸಿದ್ದಾರೆ. “ಕರಾರಿನಂತೆ ಬಡ್ಡಿ ಸಮೇತ ಠೇವಣಿ ಹಣವನ್ನು ಹಿಂದಿರುಗಿಸುವುದು ಸೊಸೈಟಿ ಕರ್ತವ್ಯ. ಆದರೆ, ಅವಧಿ ಮುಗಿದು ಎರಡು ವರ್ಷಗಳೇ ಕಳೆದಿದ್ದರೂ ಹಣ ನೀಡದೇ ಇರುವುದು ಅಕ್ಷಮ್ಯವಾಗಿದೆ” ಎಂದು ಹೇಳಿದ್ದಾರೆ.
“ಸೊಸೈಟಿಯು ಎರಡೂ ಠೇವಣಿಗಳ ಒಟ್ಟು 2.5 ಲಕ್ಷ ರೂ. ಮತ್ತು ಠೇವಣಿ ಇಟ್ಟಾಗಿನಿಂದ ಇಂದಿನವರೆಗೆ 13.5% ಬಡ್ಡಿದರದಲ್ಲಿ ಬಡ್ಡಿಯನ್ನೂ ದೂರುದಾರ ಗ್ರಾಹಕಿಗೆ ನೀಡಬೇಕು. ಅಲ್ಲದೆ, ಆಕೆಯ ಅನುಭವಿಸಿರುವ ಮಾನಸಿಕ ಹಿಂಸೆಗೆ ಪರಿಹಾರವಾಗಿ 25,000 ರೂ. ಹಾಗೂ ಪ್ರಕರಣದ ವೆಚ್ಚಕ್ಕಾಗಿ 10,000 ರೂ. ನೀಡಬೇಕು” ಎಂದು ಆದೇಶ ಹೊರಡಿಸಿದ್ದಾರೆ.