ಪೋಕ್ಸೋ ಪ್ರಕರಣದ ಆರೋಪ ಹೊತ್ತಿದ್ದ ತುಮಕೂರು ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ಮಲ್ಲಿಕಾರ್ಜುನ್ ಅವರನ್ನು ಆರೋಪ ಮುಕ್ತಗೊಳಿಸಿ ನ್ಯಾಯಾಲಯ ಆದೇಶ ನೀಡಿದೆ.
2022ರ ಡಿಸೆಂಬರ್‌ನಲ್ಲಿ ವಿವಿಯ ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಪಿಎಚ್‌ಡಿ ವಿದ್ಯಾರ್ಥಿ ಮಲ್ಲಿಕಾರ್ಜುನ ಎಂಬುವವರ ಮೇಲೆ ತುಮಕೂರಿನ ಎನ್.ಆರ್. ಕಾಲೋನಿಯ ವಾಸಿಯಾಗಿರುವ ನೊಂದ ಬಾಲಕಿಯ ತಂದೆ ಆರೋಪ ಹೊರಿಸಿ ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸುವಾಗ ಸಂತ್ರಸ್ತ ಬಾಲಕಿ ಏಳು ತಿಂಗಳ ಗರ್ಭಿಣಿಯಾಗಿದ್ದಳು. ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಲ್ಲಿಕಾರ್ಜುನನ್ನು ಆರು ತಿಂಗಳ ನಂತರ ಬಂಧಿಸಿ, ನ್ಯಾಯಲಯದ ಕಸ್ಟಡಿಗೆ ನೀಡಲಾಗಿತ್ತು.
ಈ ವೇಳೆಗೆ ಆ ಬಾಲಕಿಗೆ ಹೆಣ್ಣು ಮಗುವು ಜನಿಸಿತ್ತು. ಈ ಎಲ್ಲ ಅಂಶಗಳನ್ನು ಉಲ್ಲೇಖಿಸಿ ಮಹಿಳಾ ಠಾಣೆಯ ಪೊಲೀಸರು ಸ್ಥಳ ಮಹಜರು ಮಾಡಿ ದಾಖಲೆಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಇದನ್ನು ಓದಿದ್ದೀರಾ? ಕೋಲಾರ | ಕಾಲೇಜಿನ ಶೌಚಾಲಯದಲ್ಲೇ ಮಗುವಿಗೆ ಜನ್ಮವಿತ್ತ ಅಪ್ರಾಪ್ತ ವಿದ್ಯಾರ್ಥಿನಿ!
ನ್ಯಾಯಾಲಯಕ್ಕೆ ಸಂತ್ರಸ್ತ ಬಾಲಕಿಯ ದಿನದ ನಿಖರ ಮಾಹಿತಿ ಲಭ್ಯವಾಗದಿರುವುದು ಮತ್ತು ನಮ್ಮಿಬ್ಬರದು ಸಮ್ಮತಿ ಲೈಂಗಿಕತೆ ಎಂಬ ಆಕೆಯ ಹೇಳಿಕೆ ಆಧರಿಸಿ ತೀರ್ಪು ನೀಡಲಾಗಿದೆ ಹಾಗೂ ಆಕೆಗೆ ಜನಿಸಿದ ಮಗುವಿಗೆ ಮಲ್ಲಿಕಾರ್ಜುನ್ ಜೈವಿಕ ತಂದೆಯಲ್ಲ ಎಂಬುದು ಸಾಬೀತಾದ ಹಿನ್ನಲೆಯಲ್ಲಿ ನ್ಯಾಯಾಲಯವು ಆರೋಪಿಯನ್ನು ಪೋಕ್ಸೋ ಪ್ರಕರಣದಿಂದ ಆರೋಪ ಮುಕ್ತಗೊಳಿಸಿದೆ.
