‘ನಮ್ಮ ಮೆಟ್ರೋ’ ದರ ಏರಿಕೆಯ ವಿರುದ್ಧ ಸಾಮಾಜಿಕ ಹೋರಾಟಗಾರರು ನಡೆಸುತ್ತಿದ್ದ ಸಹಿ ಸಂಗ್ರಹ ಅಭಿಯಾನಕ್ಕೆ ಬೆಂಗಳೂರು ನಗರ ಪೊಲೀಸರು ತಡೆಯೊಡ್ಡಿದ ಘಟನೆ ಶುಕ್ರವಾರ ಸಂಜೆ ಎಂ ಜಿ ರೋಡ್ ಮೆಟ್ರೋ ಸ್ಟೇಷನ್ ಬಳಿ ನಡೆದಿದೆ.
ಬೆಂಗಳೂರು ನಾಗರಿಕ ಹೋರಾಟಗಾರರೇ ಸೇರಿಕೊಂಡು ‘ಬೆಂಗಳೂರು ಉಳಿಸಿ’ ಎಂಬ ಸಮಿತಿ ರಚಿಸಿದ್ದು, ಇದರ ನೇತೃತ್ವದಲ್ಲಿ ಫ್ರೀಡಂ ಪಾರ್ಕಿನಲ್ಲಿ ಶನಿವಾರ ಸಂಜೆ 4.30ಕ್ಕೆ ಮೆಟ್ರೋ ದರ ಏರಿಕೆಯ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಹೋರಾಟ ಸಮಿತಿಯ ಮುಖಂಡರು ಬೆಂಗಳೂರಿನ ಮೆಟ್ರೋ ನಿಲ್ದಾಣಗಳಿಗೆ ತೆರಳಿ ಸಾರ್ವಜನಿಕರಿಂದ ಸಹಿ ಸಂಗ್ರಹ ಅಭಿಯಾನವನ್ನು ನಡೆಸುತ್ತಿದ್ದಾರೆ.
ನಮ್ಮ ಮೆಟ್ರೋ ದರ ಏರಿಕೆಯ ವಿರುದ್ಧ ಸಾಮಾಜಿಕ ಹೋರಾಟಗಾರರು ನಡೆಸುತ್ತಿದ್ದ ಸಹಿ ಸಂಗ್ರಹ ಅಭಿಯಾನಕ್ಕೆ ಬೆಂಗಳೂರು ನಗರ ಪೊಲೀಸರು ತಡೆಯೊಡ್ಡಿದ ಘಟನೆ ಶುಕ್ರವಾರ ಸಂಜೆ ಎಂ ಜಿ ರೋಡ್ ಮೆಟ್ರೋ ಸ್ಟೇಷನ್ ಬಳಿಯ ಚರ್ಚ್ ಸ್ಟ್ರೀಟ್‌ನಲ್ಲಿ ನಡೆದಿದೆ. ಈ ವೇಳೆ ಜನರು ಹೋರಾಟಗಾರರ ಬೆಂಬಲಕ್ಕೆ ನಿಂತಾಗ ಪೊಲೀಸರೊಂದಿಗೆ ವಾಗ್ವಾದ ಕೂಡ ನಡೆದಿದೆ. pic.twitter.com/DaNCaXqg6X
— eedina.com ಈ ದಿನ.ಕಾಮ್ (@eedinanews) February 14, 2025
ಇಂದು(ಶುಕ್ರವಾರ) ಎಂ ಜಿ ರೋಡ್ ಮೆಟ್ರೋ ಸ್ಟೇಷನ್ ಬಳಿ ಇರುವ ಚರ್ಚ್ ಸ್ಟ್ರೀಟ್‌ನಲ್ಲಿ ನಾಗರಿಕ ಸಮಿತಿ ವತಿಯಿಂದ ಸಹಿ ಸಂಗ್ರಹ ನಡೆಸುತ್ತಿದ್ದಾಗ ಸ್ಥಳಕ್ಕೆ ಬಂದ ಕಬ್ಬನ್ ಪಾರ್ಕ್ ಸ್ಟೇಷನ್‌ನ ಪೊಲೀಸ್ ಅಧಿಕಾರಿಗಳು, ಸಹಿ ಸಂಗ್ರಹ ನಡೆಸಲು ಅನುಮತಿ ಪಡೆದಿಲ್ಲ ಎಂಬ ನೆಪವೊಡ್ಡಿ ತಡೆಯಲು ಯತ್ನಿಸಿದ್ದಾರೆ.
ಪೊಲೀಸರು ತಡೆಯೊಡ್ಡಿದಾಗ ಹೋರಾಟಗಾರರ ಬೆಂಬಲಕ್ಕೆ ಮೆಟ್ರೋದಿಂದ ಕೆಳಗಿಳಿಯುತ್ತಿದ್ದ ಪ್ರಯಾಣಿಕರು ಬೆಂಬಲ ಸೂಚಿಸಿದ್ದಾರೆ. ಜನರು ಬೆಂಬಲಕ್ಕೆ ನಿಲ್ಲುತ್ತಿದ್ದಂತೆಯೇ ಪೊಲೀಸರೊಂದಿಗೆ ವಾಗ್ವಾದ ಕೂಡ ನಡೆದಿರುವುದಾಗಿ ವರದಿಯಾಗಿದೆ.
ಘಟನೆಯ ಬಗ್ಗೆ ಈದಿನ ಡಾಟ್ ಕಾಮ್ ಜೊತೆಗೆ ಮಾಹಿತಿ ನೀಡಿರುವ ಎಸ್‌ಯುಸಿಎಲ್ ಸಂಘಟನೆಯ ಮುಖಂಡರಾದ ಶಿವಪ್ರಕಾಶ್, “ಮೆಟ್ರೋ ದಿಢೀರ್ ದರ ಏರಿಕೆಯ ವಿರುದ್ಧ ನಾವು ಕಳೆದ ಕೆಲವು ದಿನಗಳಿಂದ ನಾನಾ ಮೆಟ್ರೋ ಸ್ಟೇಷನ್‌ಗೆ ತೆರಳಿ ಜನರಿಂದ ಸಹಿ ಸಂಗ್ರಹ ಮಾಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಇಂದು ಮಹಾತ್ಮ ಗಾಂಧಿ(ಎಂ ಜಿ ರೋಡ್) ಮೆಟ್ರೋ ಸ್ಟೇಷನ್‌ನ ನಿಲ್ದಾಣಕ್ಕೂ ತೆರಳಿದ್ದೆವು. ಈ ವೇಳೆ ಜನರ ಕೂಡ ಸಹಕಾರ ನೀಡುತ್ತಿದ್ದರು. ಈ ವೇಳೆ ಸಂಜೆ 7.30ರ ಸುಮಾರಿಗೆ ಸ್ಥಳಕ್ಕೆ ಬಂದ ಪೊಲೀಸರು, ಪರ್ಮಿಷನ್ ತಗೊಂಡಿಲ್ಲ ಎಂದು ವಾದಕ್ಕೆ ನಿಂತರು. ಈ ವೇಳೆ ಬೆಲೆ ಏರಿಕೆಯಿಂದ ಆಕ್ರೋಶಗೊಂಡಿದ್ದ ಜನರು ನಮ್ಮ ಪರ ನಿಂತರು. ಪೊಲೀಸರ ವಿರುದ್ಧವೇ ಸಿಡಿದೆದ್ದರು” ಎಂದು ತಿಳಿಸಿದರು.

ವಾದ ವಿವಾದ ನಡೆಯುತ್ತಿದ್ದಂತೆಯೇ, ಮೆಟ್ರೋದವರು ಬೆಲೆ ಏರಿಕೆ ಮಾಡುವಾಗ ಜನತೆಯಿಂದ ಒಂದು ಅಭಿಪ್ರಾಯನೂ ಪಡೆದಿಲ್ಲ. ಏಕಾಏಕಿ ಏರಿಸಿ ನಮ್ಮನ್ನು ಕಷ್ಟಕ್ಕೆ ದೂಡಿದ್ದಾರೆ. ಇದಕ್ಕೆ ಮೊದಲು ಉತ್ತರಿಸಬೇಕು ಎಂದು ಪಟ್ಟು ಹಿಡಿದು ನೂರಾರು ಜನ ಸೇರಿಕೊಂಡಾಗ ಕೊನೆಗೆ ಪೊಲೀಸರೇ ಸುಮ್ಮನಾಗಿ, ‘ಘೋಷಣೆ ಕೂಗುವ ಹಾಗಿಲ್ಲ’ ಎಂದು ತಿಳಿಸಿದರು. ಆ ಬಳಿಕ ಅಲ್ಲಿ ಸಹಿ ಸಂಗ್ರಹ ಅಭಿಯಾನ ಮುಗಿಸಿ, ಹಲಸೂರು, ಮಂತ್ರಿ ಮಾಲ್, ಮೆಜೆಸ್ಟಿಕ್, ರಾಜಾಜಿ ನಗರ ಮೆಟ್ರೋ ಸ್ಟೇಷನ್ ಬಳಿ ತೆರಳಿ ಸಹಿ ಸಂಗ್ರಹಿಸಿದೆವು ಎಂದು ತಿಳಿಸಿದರು.

“ಜನತೆ ಮೆಟ್ರೋ ದರ ಏರಿಕೆಯಿಂದ ಆಕ್ರೋಶಗೊಂಡಿದ್ದಾರೆ. ಸರ್ಕಾರಗಳು ಈ ರೀತಿಯಲ್ಲಿ ಜನರ ಸುಲಿಗೆ ಮಾಡುವುದನ್ನು ನಿಲ್ಲಿಸಬೇಕು. ಮೆಟ್ರೋ ದರ ಏರಿಕೆ ಮಾಡಿರುವುದನ್ನು ಖಂಡಿಸುತ್ತೇವೆ. ದರ ಇಳಿಸುವಂತೆ ಒತ್ತಾಯಿಸಿ ‘ಬೆಂಗಳೂರು ಉಳಿಸಿ’ ಎಂಬ ಸಮಿತಿ ರಚಿಸಿ, ಇದರ ನೇತೃತ್ವದಲ್ಲಿ ಫ್ರೀಡಂ ಪಾರ್ಕಿನಲ್ಲಿ ಶನಿವಾರ ಸಂಜೆ 4.30ಕ್ಕೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಸಾರ್ವಜನಿಕರು ಭಾಗವಹಿಸಬೇಕು” ಎಂದು ‘ಬೆಂಗಳೂರು ಉಳಿಸಿ’ ಸಮಿತಿಯ ಪರವಾಗಿ ಶಿವಪ್ರಕಾಶ್ ವಿನಂತಿಸಿದ್ದಾರೆ.


