ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ ಖಾಕಿ ಪಡೆ ಸುತ್ತುವರಿದಿದೆ. ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಸಂಬಂಧ ನೋಟಿಸ್ ನೀಡಿದ್ದರೂ ವಿಚಾರಣೆಗೆ ಠಾಣೆಗೆ ಹಾಜರಾಗದ ಹಿನ್ನೆಲೆ ಯೂಟ್ಯೂಬರ್ ಸಮೀರ್.ಎಮ್.ಡಿ ಬಂಧನ ಮಾಡಲು ವಾರೆಂಟ್ ಜತೆಗೆ ಧರ್ಮಸ್ಥಳ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅನಂದ್.ಎಮ್ ರವರ ನೇತೃತ್ವದ ತಂಡ ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಯೂಟ್ಯೂಬರ್ ಸಮೀರ್.ಎಮ್.ಡಿ ಬಾಡಿಗೆ ಮನೆಗೆ ಆ.21 ರಂದು ಸುತ್ತುವರಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸ್ವತಃ ಹೋರಾಟಗಾರ ಗಿರೀಶ್ ಮಟ್ಟಣ್ಣಣವರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಹಾಕಿದ್ದಾರೆ.
ಸಮೀರ್ ತಾಯಿಯ ವಿಚಾರಣೆ
ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದಿದ್ದ ಖಾಕಿ ಪಡೆ ಕೊನೆಗೂ ಮನೆಯನ್ನು ಕಂಡುಹಿಡಿದು ಸಮೀರ್ ತಾಯಿಯನ್ನು ವಿಚಾರಣೆ ಮಾಡಿ ಮಾಹಿತಿ ಪಡೆದಿದ್ದಾರೆ. ಸಮೀರ್ ಬೇರೊಂದು ಪ್ರಕರಣದ ನಿಮಿತ್ತ ಹಿರಿಯ ವಕೀಲರನ್ನು ಕಾಣುವ ಸಲುವಾಗಿ ಬೆಳಿಗ್ಗೆಯೆ ಮನೆಯಿಂದ ತೆರಳಿದ್ದರು ಅಂತ ಅವರ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸಮೀರ್ ಪರ ವಕೀಲರ ಸಮ್ಮುಖದಲ್ಲಿ ಪೊಲೀಸರು ಸಮೀರ್ ತಾಯಿಯವರನ್ನು ವಿಚಾರಿಸಿದ್ದು, ಸಮೀರ್ ತಾಯಿ ಸಕಾರಾತ್ಮಕವಾಗಿ ಸ್ಪಂದಿಸಿ ಮನೆಯೆಲ್ಲ ತೋರಿಸಿದ್ದಾರೆ. ಮುಂದುವರೆದು, ಮಗ ಬಂದ ಕೂಡಲೇ ಪೊಲೀಸರ ಬಳಿಗೆ ವಕೀಲರೊಂದಿಗೆ ಕಳುಹಿಸುವುದಾಗಿ ಸಮೀರ್ ತಾಯಿ ಹೇಳಿದ್ದರಿಂದ ಪೊಲೀಸರು ಸ್ಥಳದಿಂದ ನಿರ್ಗಮಿಸಿದ್ದಾರೆ.
ಸಮಿರ್ ಮನೆ ಮುಂದೆ ಬೆಳಿಗ್ಗೆಯಿಂದಲೇ ಜಮಾಯಿಸಿದ್ದ ಪೊಲೀಸರ ಬಳಿ ಆತನ ಮನೆ ಶೋಧಿಸಲು ಸರ್ಚ್ ವಾರೆಂಟ್ ಇರಲಿಲ್ಲ. ಅಲ್ಲದೆ, ಸಮೀರ್‌ನನ್ನು ಬಂಧಿಸಲು ಅರೆಸ್ಟ್ ವಾರೆಂಟ್ ಕೂಡ ಪೊಲೀಸರ ಬಳಿ ಇರಲಿಲ್ಲ ಎಂಬುದಾಗಿ ಸಮೀರ್ ತಾಯಿ ಮತ್ತು ಸಮೀರ್ ಪರ ವಕೀಲರು ಈದಿನ.ಕಾಂಗೆ ತಿಳಿಸಿದ್ದಾರೆ.
