ಕಾರಂಜಾ ಸಂತ್ರಸ್ತರ ಬೇಡಿಕೆಯ ಬಗ್ಗೆ ಉಪ ಮುಖ್ಯಮಂತ್ರಿಗಳು ಭರವಸೆ ನೀಡಿರುವಂತೆ ಕಾಲಮಿತಿಯಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಿ ದೀರ್ಘ ಕಾಲದಿಂದ ನಡೆದಿರುವ ನ್ಯಾಯಯುತವಾದ ಬೇಡಿಕೆ ಈಡೇರಿಸಲು ಬಲವಾದ ರಾಜಕೀಯ ಇಚ್ಛಾಶಕ್ತಿ ವ್ಯಕ್ತಪಡಿಸಬೇಕೆಂದು ಕಲ್ಯಾಣ ಕರ್ನಾಟಕದ ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಬೀದರ್ ನಗರದ ಪ್ರವಾಸಿ ಮಂದಿರದಲ್ಲಿ ಕಾರಂಜಾ ಸಂತ್ರಸ್ತರೊಂದಿಗೆ ನಡೆದ ಮಹತ್ವದ ಸಭೆಯಲ್ಲಿ ಮಾತನಾಡಿದ ಅವರು, “ಬೆಳಗಾವಿ ಅಧಿವೇಶನದ ವೇಳೆ ಕಾರಂಜಾ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ನೀಡುವ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಅಧ್ಯಕ್ಷತೆಯಲ್ಲಿ ಬೀದರ ಜಿಲ್ಲೆಯ ಸಚಿವರು ಶಾಸಕರು ಮತ್ತು ಸಂತ್ರಸ್ತರ ಮುಖಂಡರ ಉಪಸ್ಥಿತಿಯಲ್ಲಿ ಸಭೆ ನಡೆಸಿ ಕಾರಂಜಾ ಸಂತ್ರಸ್ತರಿಗೆ ಸಮರ್ಪಕ ವೈಜ್ಞಾನಿಕ ಮಾನದಂಡದ ಆದರದ ಮೇಲೆ ಪರಿಹಾರ ನೀಡುವ ಬಗ್ಗೆ ಬೆಂಗಳೂರಿನಲ್ಲಿ ಸಭೆ ನಡೆಸಿ ಬೇಡಿಕೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
“ಸಭೆಯಲ್ಲಿ ಭರವಸೆ ನೀಡಿದಂತೆ ಸಂತ್ರಸ್ತರ ಬೇಡಿಕೆ ಈಡೇರಿಕೆಗೆ ಉಪ ಮುಖ್ಯಮಂತ್ರಿಗಳು ಮುಂದಾಗಬೇಕು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಸಚಿವ ರಹೀಂ ಖಾನ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ವಿಶೇಷ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿ ಸಮಾರೋಪಾದಿಯ ಕ್ರಮಕೈಗೊಳ್ಳಲು ಮುಂದಾಗಬೇಕು” ಎಂದು ಆಗ್ರಹಿಸಿದರು.
“ಹಿಂದಿನ ಸಭೆಯಲ್ಲಿ ನಿರ್ಣಯ ಕೈಗೊಂಡಂತೆ ಬೆಂಗಳೂರಲ್ಲಿ ಸಭೆ ನಡೆಸಲು ಕಾರಂಜಾ ಮುಳುಗಡೆ ಸಂತ್ರಸ್ತರ ಸಮಿತಿಯ ನಡೆ ಜಿಲ್ಲೆಯ ಸಚಿವರು, ಶಾಸಕರಗಳ ಮನೆ ಕಡೆ ಅಭಿಯಾನ ಕಾಲಮಿತಿಯಲ್ಲಿ ಆರಂಭಿಸಲಾಗುವುದು” ಎಂದು ಸಂತ್ರಸ್ತರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹುಚಕನಳ್ಳಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಳ; ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಏನು ಮಾಡುತ್ತಿವೆ?
ಸಭೆಯಲ್ಲಿ ಉಚ್ಚ ನ್ಯಾಯಾಲಯದ ನ್ಯಾಯವಾದಿ ಎಸ್.ಜಿ.ಮಠ ಸೇರಿದಂತೆ ಸಮಿತಿಯ ಪ್ರಮುಖರಾದ ನಾಗರಾಜ್ ಕರ್ಪೂರ, ಚಂದ್ರಶೇಖರ ವಡ್ಡೆ, ಸುಧಾಕರ, ಬಸವರಾಜ ಹಿಂದಾ, ರಾಜಪ್ಪಾ ಕೋಸಂ, ಈರಯ್ಯಾ ಸ್ವಾಮಿ, ಮಡೆಪ್ಪಾ, ರಾಮರೆಡ್ಡಿ ಪಾಟೀಲ ಇದ್ದರು.