ಮೈಸೂರು ಜಿಲ್ಲೆ, ಟಿ. ನರಸೀಪುರ ತಾಲ್ಲೂಕಿನ ರೈತರಿಗೆ ಕೃಷಿ ಇಲಾಖೆ ಖಾಸಗಿ ಕಂಪನಿಯ ಪ್ರಿಯಾ ಹೆಸರಿನ ಮುಸುಕಿನ ಜೋಳ ಬಿತ್ತನೆ ಬೀಜ ಪೂರೈಕೆ ಮಾಡಿದ್ದು. ಸಾವಿರಾರು ಎಕರೆ ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಬಿತ್ತನೆ ಬೀಜ ಮೊಳಕೆಯೊಡೆಯದೆ ರೈತರಿಗೆ ನಷ್ಟ ಉಂಟಾಗಿ, ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ನೀಡುವಲ್ಲಿ ವಿಫಲವಾಗಿದೆ.
ಮುಂಗಾರು ಮಳೆ ಆರಂಭದಲ್ಲಿ ಸರಿ ಸುಮಾರು 800 ರಿಂದ 900 ಹೆಕ್ಟೇರ್ ಪ್ರದೇಶದಲ್ಲಿ ರೈತರು ಪ್ರಿಯಾ ಮುಸುಕಿನ ಜೋಳ ಬಿತ್ತನೆ ಬೀಜ ಬಿತ್ತಿದ್ದರು. ತಾಲ್ಲೂಕಿನ ಬೂದಹಳ್ಳಿ, ನಾಗಲಗೇರೆ, ನೆರೆಗ್ಯಾತನ ಹಳ್ಳಿ, ಚಿಟಕಯ್ಯನ ಕೊಪ್ಪಲು, ಕೋಣಗನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಮೇ ತಿಂಗಳ ಆರಂಭದಲ್ಲಿ ಕೃಷಿ ಇಲಾಖೆಯಿಂದ ತಲಾ ನಾಲ್ಕು ಕೆಜಿ ತೂಕವುಳ್ಳ ಪ್ರಿಯಾ ಹೆಸರಿನ ಮುಸುಕಿನ ಜೋಳ ಬಿತ್ತನೆ ಬೀಜದ ಬ್ಯಾಗ್ ಗಳನ್ನು ಖರೀದಿಸಿದ್ದಾರೆ.
ಕೃಷಿ ಇಲಾಖೆಯವರು ನೇರವಾಗಿ ರೈತನಿಂದ ಪ್ಯಾಕೆಟ್ ಮೇಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಸಿ ಹಣ ಪಡೆದುಕೊಂಡಿದ್ದಾರೆ. ಯಾವುದೇ ರಶೀದಿ ನೀಡಿಲ್ಲ. ರೈತ ಭೂಮಿ ಹದ ಮಾಡಲು, ಉತ್ತು, ಬಿತ್ತು ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ್ದರು. ಆದರೇ, ತಿಂಗಳು ಕಳೆದರು ಸಹ ಮೊಳಕೆ ಮೂಡಲೇ ಇಲ್ಲ. ಕೆಲವರು ಮತ್ತೆ ಉಳುಮೆ ಮಾಡಿ, ಅದೇ ಬಿತ್ತನೆ ಬೀಜ ಮತ್ತೆ ಖರೀದಿ ಮಾಡಿ ಎರಡನೆಯ ಬಾರಿಗೆ ಬಿತ್ತರು ಸಹ ಜೋಳ ಮೊಳಕೆ ಕಾಣದೆ ರೈತನನ್ನು ಸಂಕಷ್ಟಕ್ಕೆ ದೂಡಿದೆ.

ಸಾಲ, ಸೋಲ ಮಾಡಿ ಎಕರೆಗೆ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿ, ಬೆಳೆ ಬಾರದೆ ಇದ್ದಾಗ ಪ್ರತಿ ಎಕರೆಗೆ ಕನಿಷ್ಠ ಅಂದರು 60 ಸಾವಿರದವರೆಗೆ ನಷ್ಟವಾಗಿದೆ. ಶ್ರಮ, ಉಳುಮೆ, ಬಿತ್ತನೆ ಬೀಜ, ಗೊಬ್ಬರ, ಗೋಡು ಹೀಗೆಲ್ಲಾ ನೋಡುವಾಗ ದುಬಾರಿ ಖರ್ಚಿನ ನಡುವೆ ಕೃಷಿ ಇಲಾಖೆ ನಂಬಿ ಬಿತ್ತನೆ ಮಾಡಿದ ಬೆಳೆ ಕೈಗೆ ಬಾರಲಿಲ್ಲ. ಇತ್ತಾಗೆ ಕೈನಲಿ ಹಣವು ಉಳಿಯಲಿಲ್ಲ, ಭೂಮಿಯಲಿ ಬಿತ್ತಿದ ಜೋಳವು ಬೆಳೆಯಲಿಲ್ಲ, ಇಲಾಖೆಯೂ ಸಹ ಪರಿಹಾರ ನೀಡಲಿಲ್ಲ. ಈ ವರ್ಷ ನಯಾಪೈಸೆ ಆದಾಯ ಕಾಣದೆ, ನಷ್ಟ ಅನುಭವಿಸಿ ಮುಂದೇನು ಮಾಡಬೇಕು ಎನ್ನುವುದು ತೋಚದೆ ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

ಕೃಷಿ ಇಲಾಖೆ ಖಾಸಗಿ ಕಂಪನಿಯ ಜೊತೆ ಸೇರಿಕೊಂಡು ಪ್ರಿಯಾ ಹೆಸರಿನ ಕಳಪೆ ಬಿತ್ತನೆ ಬೀಜ ಪೂರೈಕೆ ಮಾಡಿದೆ. ಕೃಷಿ ಇಲಾಖೆ ಮಾಡಿರುವ ತಪ್ಪಿಗೆ ರೈತರು ಶಿಕ್ಷೆ ಅನುಭವಿಸುವಂತೆ ಆಗಿದೆ. ಕಳಪೆ ಬಿತ್ತನೆ ಬೀಜ ನೀಡಿರುವ ಕಂಪನಿ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗೆಯೇ, ಕೃಷಿ ಇಲಾಖೆ ಈಗಾಗಿರುವ ನಷ್ಟಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ಮಾಡದೆ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಸುತ್ತಮುತ್ತಲಿನ ಗ್ರಾಮಸ್ಥರು ಎಕರೆಗಟ್ಟಲೆ ಬಿತ್ತನೆ ಮಾಡಿದ್ದು ಮೊಳಕೆ ಬಾರದೆ ಇರುವಾಗ ಪರ್ಯಾಯ ಬೆಳೆ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಹಲವು ರೈತರು ಸಿಲುಕಿದ್ದಾರೆ. ಮಳೆಯಾಧಾರಿತ ಪ್ರದೇಶವಾಗಿರುವುದರಿಂದ ಮಳೆ ಬರುವ ಸಂದರ್ಭದಲ್ಲಿ ವ್ಯವಸಾಯ ನಡೆಯಬೇಕು. ಒಮ್ಮೆ ಬಿತ್ತನೆ ಮಾಡಿ ಆ ಬೆಳೆ ಕೈಕೊಟ್ಟಾಗ ಮತ್ತೊಂದು ಬೆಳೆ ಮಾಡಲು ಸಮಯ, ಸಂದರ್ಭ ಪೂರಕವಾಗಿ ಇರುವುದಿಲ್ಲ. ಮಳೆ ಕಡಿಮೆಯಾದರೆ ನೀರಿನ ಕೊರತೆ. ಮಳೆ ಹೆಚ್ಚಾದರೆ ಅನಾವೃಷ್ಟಿ. ಈ ಎಲ್ಲಾ ವ್ಯತ್ಯಾಸ ರೈತನ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ.
ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕರೋಹಟ್ಟಿ ಕುಮಾರ ಸ್ವಾಮಿ ಅವರ ನೇತೃತ್ವದಲ್ಲಿ ಪಟ್ಟಣದ ಕೃಷಿ ಸಹಾಯಕ ನಿರ್ದೇಶಕರ ಕಚೇರಿ, ರೈತ ಸಂಪರ್ಕ ಕೇಂದ್ರ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ರೈತರಿಗೆ ಆಗಿರುವ ಸಂಪೂರ್ಣ ನಷ್ಟವನ್ನು ಭರಿಸಿಕೊಡುವಂತೆ ಮನವಿ ಸಲ್ಲಿಸಿದ್ದಾರೆ.

ಇದಕ್ಕೆ ಪೂರಕವಾಗಿ ತಾಲ್ಲೂಕು ಕೃಷಿ ತಾಂತ್ರಿಕ ಸಹಾಯಕ ರಾಘವೇಂದ್ರ ಪ್ರತಿಕ್ರಿಯಿಸಿ “ಇಲಾಖೆಯ ಉಪ ನಿರ್ದೇಶಕರ ನೇತೃತ್ವದಲ್ಲಿ ಬೇಸಾಯ ತಜ್ಞರು, ಬಿತ್ತನೆ ಬೀಜ ತಜ್ಞರು, ಅಧಿಕಾರಿಗಳು ನಷ್ಟಕ್ಕೊಳಗಾದ ರೈತರ ಭೂಮಿಗಳಿಗೆ ತೆರಳಿ ಪರಿಶೀಲನೆ ಮಾಡಿದ್ದಾರೆ. ಜರ್ಮನಿ ಟೆಸ್ಟ್ ಲ್ಯಾಬ್ ಗೆ ಪರೀಕ್ಷೆ ಮಾಡಲು ಕಳುಹಿಸಲಾಗಿದೆ. ವರದಿ ಬರಬೇಕಿದೆ. ಈ ಬಗ್ಗೆ ಕಂಪನಿಗೆ ಮಾಹಿತಿ ನೀಡಲಾಗಿದೆ. ತನಿಖಾ ವರದಿ ಅನುಸಾರ ಪರಿಹಾರ ನೀಡುವ ಭರವಸೆ ನೀಡಿದ್ದರು”.
ಸಹಾಯಕ ಕೃಷಿ ನಿರ್ದೇಶಕಿ ಕೆ. ಎಸ್. ಸಹಾಸಿನಿಯವರು ಪತ್ರಿಕಾ ಹೇಳಿಕೆಯಲ್ಲಿ “ಬಿತ್ತನೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಬೂದಹಳ್ಳಿ, ಕೊಣಗಹಳ್ಳಿ, ನೆರೆಗ್ಯಾತನಹಳ್ಳಿ, ನಾಗಲಗೆರೆ ಗ್ರಾಮಗಳಿಗೆ ಮಂಡ್ಯ ವಿ ಸಿ ಫಾರಂ ಕೃಷಿ ವಿಜ್ಞಾನಿಗಳು ಹಾಗೂ ಅಧಿಕಾರಿಗಳು ಭೇಟಿ ನೀಡಿ ಭೂ ಪ್ರದೇಶ, ಮಣ್ಣಿನ ಮಾದರಿ ಸಂಗ್ರಹಿಸಿ, ಬಿತ್ತನೆ ಮಾಡಿರುವ ರೈತರ ಜಮೀನುಗಳನ್ನು ಪರಿಶೀಲನೆ ಮಾಡಿದ್ದಾರೆ. ಬಿತ್ತನೆ ಬೀಜಗಳನ್ನು ಪರೀಕ್ಷೆಗೆ ತೆಗೆದುಕೊಂಡು ಪರೀಕ್ಷೆಯ ವರದಿ ಬಂದ ನಂತರ ವರದಿಯನ್ನು ಸಲ್ಲಿಸಲಾಗುತ್ತದೆ”.

ನಷ್ಟಕ್ಕೊಳಗಾದ ರೈತರ ಭೂಮಿ ಭೇಟಿ ಸಂದರ್ಭದಲ್ಲಿ ವಿ ಸಿ ಫಾರಂ ಕೃಷಿ ವಿಜ್ಞಾನಿ ಮಹದೇವು, ವ್ಯವಸಾಯ ತಜ್ಞ
ಸುನೀಲ್ ಕುಮಾರ್, ಮೈಸೂರು ಉಪ ವಿಭಾಗದ ಉಪ ಕೃಷಿ ನಿರ್ದೇಶಕ ಧನಂಜಯ, ಸೋಸಲೆ ಹೋಬಳಿ ರೈತ ಸಂಪರ್ಕ ಕೇಂದ್ರದ ಪ್ರಭಾರ ಕೃಷಿ ಅಧಿಕಾರಿ ಬಿ. ಪಿ. ರಾಘವೇಂದ್ರ, ಸಿಬ್ಬಂದಿಗಳು ಇದ್ದರು ಎನ್ನುವ ಮಾಹಿತಿ ನೀಡಿದ್ದಾರೆ.
ಆದರೇ, ಸ್ಥಳೀಯವಾಗಿ ರೈತರು ಹೇಳುವ ಮಾತು ಇಷ್ಟೆಲ್ಲಾ ಹೇಳುವ ಅಧಿಕಾರಿಗಳು ನಮ್ಮ ಭೂಮಿಗೆ ಯಾವಾಗ ಬಂದರು. ನಮ್ಮ ಗ್ರಾಮಕ್ಕೆ ಬಂದಿದ್ದು ಕಾಣೆ. ಒಂದಷ್ಟು ಕಡೆ ಹೋಗಿದ್ದಾರೆ ಎನ್ನುವ ಮಾತು ಕೇಳಿದ್ದೀನಿ ಹೊರತು ನಷ್ಟ ಆಗಿರುವ ರೈತರ ಭೂಮಿಗಳಿಗೆ ಇವರ್ಯಾರು ಬಂದೇ ಇಲ್ಲ. ಎಲ್ಲಾ ಕಾರಲ್ಲಿ ಬರ್ತಾರೆ. ದಾರಿಯಲ್ಲಿ ನಿಲ್ಲೋದು ಕಂಡಿದ ಕಡೆ ಹೋಗೋದು. ಒಂದಷ್ಟು ರೈತರ ಭೂಮಿಗೆ ಹೋಗಿ ಅಲ್ಲಿನ ಮಣ್ಣು, ಅವರ ಭೂಮಿ ಪರೀಕ್ಷೆ ಮಾಡಿದ್ದೇ ಎಲ್ಲರಿಗೂ ಅನ್ವಯ ಎನ್ನುವಂತೆ ಮಾತಾಡುತ್ತಾರೆ.

“ಅಧಿಕಾರಿಗಳಿಗೆ ತಿಳುವಳಿಕೆ ಇದ್ದಿದ್ದರೆ ರೈತ ಇಷ್ಟೆಲ್ಲ ಕಷ್ಟ ಪಡುವ ಅಗತ್ಯ ಇರುತ್ತಾ ಇರಲಿಲ್ಲ. ಕೃಷಿ ಇಲಾಖೆ ಕೊಟ್ಟಿರೋ ಬಿತ್ತನೆ ಬೀಜ ಅದು ಹುಟ್ಟಿಲ್ಲ. ಅದಕ್ಕೆ ಜವಾಬ್ದಾರರು ಯಾರು?. ನಾವು ಹೊರಗಡೆ ತಂದು ಹಾಕಿದ್ದರೆ ಇವರನ್ನ ಕೇಳುತ್ತಾ ಇರಲಿಲ್ಲ. ಇವರು ಕಮಿಷನ್ ಆಸೆಗೆ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡು ನಮಗೆ ಕಳಪೆ ಬಿತ್ತನೆ ಬೀಜ ಕೊಟ್ಟಿದ್ದಾರೆ. ಮುಸುಕಿನ ಜೋಳ ಮೊಳಕೆ ಕಡಿಯುತ್ತಾ? ಇಲ್ಲವಾ?, ಅದನ್ನ ರೈತರಿಗೆ ಕೊಡಬೇಕಾ? ಬೇಡವಾ?. ಇದೆಲ್ಲಾ, ಕೃಷಿ ಇಲಾಖೆ ಅಧಿಕಾರಿಗಳ ವಿವೇಚನೆಗೆ ಇರಬೇಕಿತ್ತು. ಇದ್ಯಾವುದು ಮಾಡದೆ ಬೀಜ ಕೊಟ್ಟರು. ನಾವು ಬಿತ್ತನೆ ಮಾಡಿದ್ವಿ. ಈಗ ಬೆಳೆ ಇಲ್ಲ. ಕೆಲವರು ಉಳುಮೆ ಮಾಡಿ ಬೇರೆ ಬೆಳೆ ಮಾಡಿದ್ದಾರೆ. ಇನ್ನ ಕೆಲವರು ಏನು ಮಾಡದೆ ಹಾಗೆ ಭೂಮಿ ಪಾಳು ಬಿಟ್ಟಿದ್ದಾರೆ. ಇದಕ್ಕೆಲ್ಲ ಹೊಣೆ ಕೃಷಿ ಇಲಾಖೆ” ಎಂದು ನೆರ ಆರೋಪ ಮಾಡಿದರು.

ರೈತ ರಘು ಈದಿನ.ಕಾಮ್ ಜೊತೆ ಮಾತನಾಡಿ “ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರದಲ್ಲಿ ಮೂರು ಎಕರೆಗೆ 9 ಬ್ಯಾಗ್ ಪ್ರಿಯಾ ಮುಸುಕಿನ ಜೋಳ ಬೀಜ ತಂದು ಬಿತ್ತನೆ ಮಾಡಿದೆ. ಜೋಳ ಮೊಳಕೆ ಕಡಿಯಲೇ ಇಲ್ಲ. ಮತ್ತೆ ಅದನ್ನ ಉತ್ತು, ಮತ್ತದೇ ಕೃಷಿ ಇಲಾಖೆಯಿಂದ 9 ಬ್ಯಾಗ್ ಜೋಳ ತಂದು ಬಿತ್ತನೆ ಮಾಡಿದ್ದೀನಿ. ನೀವೇ ನೋಡಿ ಇವತ್ತಿನವರೆಗೂ ಜೋಳ ಮೊಳಕೆ ಕಡೆಯಲಿಲ್ಲ. ಈಗಾಗಲೇ, ಮೂರು ಲಕ್ಷ ರೂಪಾಯಿ ಖರ್ಚು ಮಾಡಿದ್ದೀನಿ. ಒಂದು ರೂಪಾಯಿ ಆದಾಯ ಇಲ್ಲ. ಇನ್ನ ಬೇರೆ ಏನಾದರೂ ಮಾಡೋಣ ಎಂದರೇ ನನ್ನ ಬಳಿ ಹಣ ಇಲ್ಲ. ಇದ್ದಿದ್ದೆಲ್ಲಾ ಸಾಲ ಮಾಡಿ ಎರೆಡು ಸಲ ವ್ಯವಸಾಯಕ್ಕೆ ಖರ್ಚು ಮಾಡಿದ್ದೀನಿ. ಈಗೇನು ಮಾಡೋದಕ್ಕೂ ಶಕ್ತಿಯಿಲ್ಲ. ಕೃಷಿ ಇಲಾಖೆ ಕೊಟ್ಟಿರೋ ಬಿತ್ತನೆ ಬೀಜ. ಅವರಿಂದ ಲಕ್ಷಾಂತರ ರೂಪಾಯಿ ನಷ್ಟ ಆಗಿದೆ. ಕೃಷಿ ಇಲಾಖೆಯಿಂದ ಆಗಿರೋ ನಷ್ಟ ಕಟ್ಟಿಕೊಡಬೇಕು” ಎಂದು ಮನವಿ ಮಾಡಿದರು.

ತಾಲ್ಲೂಕು ಕಾರ್ಯದರ್ಶಿ ಶಂಕರ್ ಮಾತನಾಡಿ “ಈ ಬಾರಿ ಮುಂಗಾರು ಹಂಗಾಮು ಚೆನ್ನಾಗಿತ್ತು. ಕೃಷಿ ಇಲಾಖೆಯಿಂದ ನಮ್ಮ ಸೋಸಲೆ ಹೋಬಳಿ ರೈತರು ಪ್ರಿಯಾ ಮುಸುಕಿನ ಜೋಳದ ಬೀಜ ತಂದು ಬಿತ್ತನೆ ಮಾಡಿದರು. ಇದನ್ನ ಕೊಟ್ಟಿದ್ದು ಕೃಷಿ ಇಲಾಖೆ.ಈಗ ರೈತರಿಗೆ ಪ್ರತಿ ಎಕರೆಗೆ 60 ಸಾವಿರದಷ್ಟು ನಷ್ಟ ಉಂಟಾಗಿದೆ. ಯಾರು ಕಳಪೆ ಬಿತ್ತನೆ ಬೀಜ ಮಾರಾಟ ಮಾಡ್ತಾರೆ ಆ ಕಂಪನಿ ಮೇಲೆ ಎಫ್ಐಆರ್ ದಾಖಲು ಮಾಡಬೇಕು. ಕೃಷಿ ಇಲಾಖೆ ಕಂಪನಿಯ ಪರವಾನಿಗೆ ರದ್ದು ಮಾಡಬೇಕು. ಕೃಷಿ ಇಲಾಖೆಯವರೇ ಹೇಳ್ತಾರೆ ಕಳಪೆ ಬಿತ್ತನೆ ಬೀಜ ಮಾರಾಟ ಕಂಡು ಬಂದರೆ ತಿಳಿಸಿ ದೂರು ನೀಡಿ ಕಾನೂನು ಕ್ರಮ ಆಗುತ್ತೆ ಅಂತೆಲ್ಲಾ. ಇದೇ ಕೃಷಿ ಇಲಾಖೆ ಕಳಪೆ ಬಿತ್ತನೆ ಬೀಜ ಪೂರೈಕೆ ಮಾಡಿದೆ. ರೈತರಿಗೆ ನಷ್ಟ ಆಗುವಂತೆ ಮಾಡಿದೆ. ಈಗ ಕೇಳಿದರೆ ಕಂಪನಿ ಮೇಲೆ ಯಾವುದೇ ಕ್ರಮ ಆಗಿಲ್ಲ. ಯಾಕೆ ಆಗಿಲ್ಲ ಎಂದರೇ, ಕೃಷಿ ಇಲಾಖೆ ಈ ಕಂಪನಿ ಜೊತೆ ಶಾಮೀಲಾಗಿದೆ. ಅದೇ ರೈತರು ಜೋಳ ಬೆಳೆದು ಮಾರಾಟ ಮಾಡುವಾಗ ಕ್ವಿಂಟಾಲ್ ಬೆಲೆ ಎರಡು ಸಾವಿರ ಆಸುಪಾಸು, ಅದೇ ನಾವುಗಳು ಒಂದು ಬ್ಯಾಗ್ ತರಲು ಹೋದರೆ 600 ರೂಪಾಯಿ. ಹೀಗಿರುವಾಗ, ಇದರಲ್ಲಿ ಸಾಕಷ್ಟು ಹಣ ಮಾಡುವ ಅವಕಾಶ ಇರುವುದರಿಂದ, ರುಚಿಕಂಡಿರುವುದರಿಂದ ಇಂತಹ ಕಂಪನಿಗಳ ಜೊತೆ ಸೇರಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ” ಎಂದು ಆರೋಪ ಮಾಡಿದರು.

ಬೂದಹಳ್ಳಿ ಗ್ರಾಮದ ರೈತ ಮಹಿಳೆ ಸುಮತಿ ಮಾತನಾಡಿ “ನಾನು ಎಂ ಎ ಪದವೀದರೆ. ನನಗೆ ತಂದೆ ಇಲ್ಲ. ಮನೆಯ ಜವಾಬ್ದಾರಿ ನನ್ನ ಹೆಗಲ ಮೇಲಿದೆ. ನಾನು ಎಕನಾಮಿಕ್ಸ್ ಓದಿದ್ದರೂ ಸಹ ಸರ್ಕಾರಿ, ಖಾಸಗಿ ಉದ್ಯೋಗದ ಕಡೆಗೆ ಹೋಗಲಿಲ್ಲ. ಅಲ್ಲಿ ಎಲ್ಲೊ ಹೋಗಿ ಕಡಿಮೆ ಸಂಬಳಕ್ಕೆ ದುಡಿಯುವ ಬದಲು ನಮ್ಮೂರಲ್ಲಿ ನಮ್ಮ ಭೂಮಿಯಲ್ಲಿ ವ್ಯವಸಾಯ ಮಾಡಬೇಕು. ಮಾದರಿಯಾಗಿ ಕೃಷಿಕಳಾಗಿ ಬದುಕಬೇಕು ಎಂದು ಊರಿಗೆ ಬಂದು, ಮೂರು ಎಕರೆ ಭೂಮಿಯಲ್ಲಿ ಒಂದೂವರೆ ಲಕ್ಷ ಖರ್ಚು ಮಾಡಿ ಇದೇ ಸೋಸಲೆಯಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘದಿಂದ ಪ್ರಿಯಾ ಮುಸುಕಿನ ಜೋಳ ಬೀಜ ತಂದು ಬಿತ್ತನೆ ಮಾಡಿದೆ. ಆದರೇ, ಜೋಳ ಮೊಳಕೆ ಬರಲಿಲ್ಲ. ಬೆಳೆ ಬರಲಿಲ್ಲ. ಈಗ ಲಕ್ಷಾಂತರ ರೂಪಾಯಿ ಸಾಲ ಮಾಡಿದ ದುಡ್ಡು ಖರ್ಚುಗಿದೆ. ಇನ್ನ ಬೆಳೆಯೂ ಬರಲಿಲ್ಲ. ಈಗೇನು ಮಾಡಬೇಕು?. ಮನೆ ನಿರ್ವಹಣೆ, ಕುಟುಂಬ ಸಾಕೋದು, ಸಾಲ ತೀರಿಸೋದು ಹೇಗೆ?. ಆದಾಯ ಇಲ್ಲ. ಖರ್ಚು ಮಾಡಿ ಸಾಲಕ್ಕೆ ಆಳಾಗಿದ್ದೀವಿ. ಕೃಷಿ ಇಲಾಖೆ ಮಾಡಿರುವ ತಪ್ಪಿಗೆ ತೊಂದರೆ ನಾವು ಅನುಭವಿಸುತ್ತಾ ಇದ್ದೀವಿ. ನಮಗೆ ಕೃಷಿ ಇಲಾಖೆಯಿಂದ ಪರಿಹಾರ ಕೊಡಿಸಿಕೊಡಬೇಕು. ಈ ಬಗ್ಗೆ ಕೃಷಿ ಸಚಿವರಾದ ಎನ್. ಚೆಲುವರಾಯಾಸ್ವಾಮಿಯವರು ಗಮನ ಹರಿಸಿ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಕಂಪನಿ ಮೇಲೆ ಸೂಕ್ತ ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.

ರೈತ ರಾಜು ಮಾತನಾಡಿ “ಒಂದೂವರೆ ಎಕರೆಗೆ ರೈತ ಸಂಪರ್ಕ ಕೇಂದ್ರದಿಂದ ಮುಸುಕಿನ ಜೋಳ ಬೀಜ ತಂದು ಬಿತ್ತನೆ ಮಾಡಿದ್ದೇ. ಸುಮಾರು 45 ಸಾವಿರ ರೂಪಾಯಿ ಖರ್ಚು ಆಗಿದೆ. ತಿಂಗಳು ಕಳೆದರು ದಿನ ಕಳೆಯುತ್ತ ಹೋಯಿತೇ ಹೊರತು ಜೋಳ ಮಾತ್ರ ಮೊಳಕೆ ಕಡಿಯಲೇ ಇಲ್ಲ. ಬೇಸರದಿಂದ ಮತ್ತೆ ಅದೆಲ್ಲ ಉತ್ತಾಕಿ. ಪಟ್ಟಣದಿಂದ ಅಂಗಡಿನಲಿ ಒಂದು ಬ್ಯಾಗ್ ಗೆ ಒಂದು ಸಾವಿರ ರೂಪಾಯಿಯಂತೆ ಕೊಟ್ಟು ಕಾವೇರಿ ಜೋಳ ತಂದು ಹಾಕಿದ್ದೀನಿ. ಅದು ಚೆನ್ನಾಗಿ ಹುಟ್ಟಿದೆ. ಅದೇ ಕೃಷಿ ಇಲಾಖೆ ಕೊಟ್ಟ ಕಳಪೆ ಬಿತ್ತನೆ ಬೀಜ ನಷ್ಟ ಮಾಡಿದೆ. ಇದಕ್ಕೆಲ್ಲ ಕಾರಣ ಯಾರು?. ಗ್ಯಾರೆಂಟಿ ಕೊಡುವ ಸರ್ಕಾರಕ್ಕೆ ರೈತನಿಗೆ ಯಾವ ಗ್ಯಾರೆಂಟಿ ಕೊಡಲ್ಲ.
ಈಗ ನಷ್ಟ ಆಗಿದೆ. ಪರಿಹಾರ ಕೊಡಬೇಕಾದವರು ಯಾರು?. ಇಲಾಖೆಯೆಯವರಿಗೆ ಆದಾಯ ಇದೆ. ಕಂಪನಿ ಜೊತೆ ಸೇರಿ ಕಳಪೆ ಬಿತ್ತನೆ ಬೀಜ ಕೊಟ್ಟರು. ಈಗ ನಷ್ಟ ಆಗಿದೆ ರೈತರಿಗೆ. ಕಂಪನಿ ಮೇಲೆ ಕ್ರಮ ತಕೊಂಡ್ರ ಇಲ್ಲಾ. ಇಲಾಖೆಯೆಯವರು ರೈತರಿಗೆ ಪರಿಹಾರ ಕೊಟ್ಟರ ಅದು ಇಲ್ಲ. ಹೀಗಾದರೆ, ರೈತ ಕುಟುಂಬಗಳು ಉಳಿಯೋದು ಹೇಗೆ?” ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ನಾರಾಯಣಿ ಮಾತನಾಡಿ “ಕೃಷಿ ಇಲಾಖೆ ಕೊಟ್ಟಿರುವ ಬಿತ್ತನೆ ಬೀಜ ಕಳಪೆ. ಯಾರೆಲ್ಲಾ ಪ್ರಿಯಾ ಜೋಳ ತಂದು ಬಿತ್ತನೆ ಮಾಡಿದ್ದಾರೆ ಅವರೆಲ್ಲ ನಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಇಲಾಖೆ ಇದಕ್ಕೆಲ್ಲ ನೇರ ಹೊಣೆ. ನಾವು ಇಲಾಖೆ ಕೊಟ್ಟ ಬಿತ್ತನೆ ಬೀಜ ತಂದು ಬಿತ್ತನೆ ಮಾಡಿದ್ದು. ಈಗ ಬೆಳೆಯು ಇಲ್ಲ, ಇತ್ತ ಕಡೆ ಪರಿಹಾರವೂ ಇಲ್ಲ. ಆದರೇ, ಕೃಷಿ ಇಲಾಖೆ ಇರೋದು ಯಾಕೆ?. ಕೃಷಿ ಇಲಾಖೆ ಮಾಡಿರೋ ತಪ್ಪಿಗೆ ಏನು ಮಾಡಬೇಕು?” ಎಂದು ಕಿಡಿಕಾರಿದರು.

ರೈತ ಮುಖಂಡ ರಮೇಶ್ ಮಾತನಾಡಿ “ಕೃಷಿ ಇಲಾಖೆ ಎಂದರೇ ರೈತರಿಗೆ ನಂಬಿಕೆ. ಇಲಾಖೆ ಇರುವುದೇ ರೈತರಿಗಾಗಿ. ಸರ್ಕಾರ ರೈತರ ನೆರವಿಗೋಸ್ಕರ ಮಾಡಿರುವ ಇಲಾಖೆ. ಇದನ್ನಲ್ಲದೆ ಇನ್ಯಾರನ್ನ ನಂಬಬೇಕು ರೈತರು. ನಂಬಿದ ರೈತರಿಗೆ ಅದ್ಯಾವುದೋ ಕಂಪನಿ ಜೊತೆ ಕೃಷಿ ಅಧಿಕಾರಿಗಳು ಶಾಮೀಲಾಗಿ, ಕಳಪೆ ಬಿತ್ತನೆ ಬೀಜ ಕೊಟ್ಟು, ರೈತನಿಗೆ ಬೆಳೆ ಇಲ್ಲ, ಆದಾಯವು ಇಲ್ಲ. ಬದುಕು ಅಂದ್ರೆ ರೈತ ಬದುಕೋದು ಹೇಗೆ?. ರೈತನಿಗೂ ಕುಟುಂಬ ಇದೇ. ಮನೆ ನಡೆಸೋದು ಯಾವ ರೀತಿ?. ನಷ್ಟ ಮಾಡಿಕೊಂಡು ಇನ್ನೊಂದು ಬೆಳೆ ಬೆಳೆದರೆ ಆದಾಯ ಬರುತ್ತಾ. ಅಲ್ಲಿದ್ದು ಅಲ್ಲಿಗೆ ಸರಿ. ಇನ್ನ ಏನೂ ಮಾಡದೆ ಕೂತರೆ ಕಳೆದುಕೊಂಡ ನಷ್ಟ ಕೊಡೋರು ಯಾರು?. ಇದೆಲ್ಲಾ ಸರ್ಕಾರದ ಹೊಣೆ. ಕೃಷಿ ಇಲಾಖೆ ರೈತರ ಪರವಾಗಿ ಕೆಲಸ ಮಾಡಬೇಕಿತ್ತು. ಕಳಪೆ ಬಿತ್ತನೆ ಪೂರೈಕೆ ಮಾಡಿದ ಕಂಪನಿ ಮೇಲೆ ಕ್ರಮಕ್ಕೆ ಮುಂದಾಗಿಲ್ಲ ಎಂದರೇ ಎಲ್ಲರಿಗೂ ಸೇರಬೇಕಾದ ಪಾಲು ಸರಿಯಾಗಿ ಸೇರಿರುತ್ತೆ. ಅದಕ್ಕೆ ರೈತ ತೊಂದರೆ ಪಟ್ಟರು ಪರ್ವಾಗಿಲ್ಲ ಕಂಪನಿಗೆ ತೊಂದರೆ ಆಗಬಾರದು ಅಂತ ಸುಮ್ಮನೆ ಇರೋದು” ಎಂದು ಗುರುತರ ಆರೋಪ ಮಾಡಿದರು.

ರೈತ ಸುರೇಶ್ ಮಾತನಾಡಿ “ಮೂರೂವರೆ ಎಕರೆಗೆ 10 ಪ್ಯಾಕೆಟ್ ಮುಸಕಿನ ಜೋಳ ಬೀಜ ತಂದು ಬಿತ್ತನೆ ಮಾಡಿದೆ. ಜೋಳ ಹುಟ್ಟಿಲ್ಲ. ನಾನು ಬಡವ. ಇರೋ ಭೂಮಿಲಿ ಬೆಳೆ ಬೆಳೀಬೇಕು, ಮನೆ ನಡೀಬೇಕು. ಈಗ ಚಿನ್ನ ಅಡವಿಟ್ಟು, ಸಾಲ ಮಾಡಿ ವ್ಯವಸಾಯ ಮಾಡಿದೆ. ಬೆಳೆ ಬಂದಿಲ್ಲ. ಕೃಷಿ ಇಲಾಖೆ ಪರಿಹಾರ ಕೊಡಬೇಕು ” ಎಂದರು.

ರೈತ ಮಲ್ಲೇಶ್ ಮಾತನಾಡಿ “ಮೂರು ಎಕರೆಗೆ ಕೃಷಿ ಇಲಾಖೆಯಿಂದ ಜೋಳ ತಂದು ಹಾಕಿದೆ. ಒಂದು ಹುಟ್ಟಿಲ್ಲ ಈಗ ಏನ್ ಮಾಡಲಿ. ಇಲಾಖೆಯವರು ಉತ್ತರ ಕೊಡಬೇಕು. ಕಷ್ಟದಲ್ಲಿ ಇದ್ದೀವಿ. ಇಷ್ಟು ದಿನ ಆಯಿತು ಒಬ್ಬರೂ ತಿರುಗಿ ನೋಡಿಲ್ಲ. ಅಧಿಕಾರಿಗಳು ಬರ್ತಾ ಇಲ್ಲ. ಪರಿಹಾರ ಕೊಡುತ್ತಾರ? ಇಲ್ವಾ? ಏನೂ ಗೊತ್ತಾಗತ ಇಲ್ಲ. ರೈತರಿಗೆ ಹೀಗೆಲ್ಲ ಅನ್ಯಾಯ ಮಾಡಬಾರದು. ಓದಿದವರು
ಓದಿರದ ನಮ್ಮಂತವರಿಗೆ ಹಿಂಗೆಲ್ಲ ಮೋಸ ಮಾಡುತ್ತಾ ಇದ್ದಾರೆ. ಅನ್ನ ಹಾಕೋ ನಮಗೆ ಮೋಸ ಮಾಡಲು ಮನಸ್ಸಾದರೂ ಹೇಗೆ ಬರುತ್ತೋ” ಎಂದು ಬೇಸರ ವ್ಯಕ್ತ ಪಡಿಸಿದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರಪ್ಪ ಮಾತನಾಡಿ “ರೈತ ಸಂಘಟನೆಯಿಂದ ಪ್ರತಿಭಟನೆ ಮಾಡಿ, ಮನವಿ ಕೊಟ್ಟರು ಇದುವರೆಗೆ ಯಾವ ಕೆಲಸವೂ ಆಗಿಲ್ಲ. ಇದೇ ತಿಂಗಳ 4 ನೇ ತಾರೀಖು ಸಹ ಕೃಷಿ ಇಲಾಖೆ ಮುಂದೆ ಪ್ರತಿಭಟನೆ ಮಾಡಿದ್ದೀವಿ. ಆಗಸ್ಟ್. 15 ರ ತನಕ ಕಾಲಾವಕಾಶ ಕೋರಿದ್ದರು. ಆದರೇ, ಇದುವರೆಗೆ ಏನೂ ಪ್ರತಿಕ್ರಿಯೆ ಇಲ್ಲ. ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಕಂಪನಿ ಮೇಲೆ ಕೇಸ್ ಹಾಕಿ ಹೋರಾಟ ಮಾಡಿ ಅಂತೇಳಿ. ನಾವು ಹೊರಗಡೆ ಎಲ್ಲಾದರೂ ಮುಸುಕಿನ ಜೋಳ ಬೀಜ ತಂದು ಹಾಕಿದ್ದರೆ ಹಾಗೇ ಮಾಡುತ್ತಾ ಇದ್ವಿ. ಆದರೇ, ನಮಗೆ ಕೃಷಿ ಇಲಾಖೆ ಕಳಪೆ ಬಿತ್ತನೆ ಬೀಜ ಪೂರೈಕೆ ಮಾಡಿರೋದು. ನಾವು ದುಡ್ಡು ಕೊಟ್ಟಿರೋದು, ತಂದಿರೋದು ಕೃಷಿ ಇಲಾಖೆಯಿಂದ. ಕಂಪನಿ ಕೃಷಿ ಇಲಾಖೆ ಜೊತೆ ಒಪ್ಪಂದ ಮಾಡಿಕೊಂಡಿರೋದು. ಅದು ಹೇಗೆ ಕಂಪನಿ ಮೇಲೆ ಕೇಸ್ ಹಾಕಿ ಎನ್ನುತ್ತಾರೆ ಕೃಷಿ ಅಧಿಕಾರಿಗಳು. ಹಾಗೆ ನೋಡಿದರೆ ಕೃಷಿ ಅಧಿಕಾರಿಗಳ ಮೇಲೆ ನಾವು ಕೇಸ್ ಹಾಕಬೇಕಿದೆ. ಇದುವರೆಗೆ ಕಳಪೆ ಬಿತ್ತನೆ ಬೀಜ ಕೊಟ್ಟ ಕಂಪನಿ ಮೇಲೆ ಎಫ್ಐಆರ್ ಆಗಿಲ್ಲ. ಕ್ರಮ ಕೈಗೊಂಡಿಲ್ಲ, ಪರವಾನಿಗೆ ರದ್ದಾಗಿಲ್ಲ. ಅಂದರೇ, ಇದರ ಅರ್ಥ ಏನು?. ರೈತರಿಗಿಂತ ಕೃಷಿ ಇಲಾಖೆಗೆ ಕಂಪನಿ ಮುಖ್ಯ ಆಗಿದೆ. ಇದರಲ್ಲೇ ತಿಳಿಯುತ್ತೆ ಇವರೆಲ್ಲಾ ಶಾಮೀಲಾಗಿ ರೈತರಿಗೆ ಮೋಸ ಮಾಡಿದ್ದಾರೆ. ಕೂಡಲೇ ರೈತರಿಗೆ ಪರಿಹಾರ ನೀಡಬೇಕು. ಕಂಪನಿ ಮೇಲೆ ಸೂಕ್ತ ಕ್ರಮವಹಿಸಬೇಕು” ಎಂದು ಹೇಳಿದರು.
ಈ ವಿಶೇಷ ವರದಿ ಓದಿದ್ದೀರಾ? ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ
ಟಿ. ನರಸೀಪುರ ತಾಲ್ಲೂಕಿನಲ್ಲಿ ಕಳಪೆ ಮುಸುಕಿನ ಜೋಳ ಬೀಜ ವಿತರಣೆ ಮಾಡಿರುವ ಕೃಷಿ ಇಲಾಖೆ ರೈತರಿಗೆ ಅನ್ಯಾಯ ಮಾಡಿದೆ. ತಾವೇ ವಿತರಣೆ ಮಾಡಿ. ರೈತರಿಗೆ ನಷ್ಟ ಆಗಿದ್ದರು ಪರಿಹಾರ ನೀಡದೆ ವಿಳಂಬ ಮಾಡಿದೆ. ಜೊತೆಗೆ ಕಂಪನಿ ಮೇಲೆ ಕ್ರಮ ಕೈಗೊಂಡಿಲ್ಲ. ಇದೆಲ್ಲವನ್ನು ದಾಖಲೆ ಮೂಲಕ ಮುಂದಿನ ಸಂಚಿಕೆಯಲ್ಲಿ ಈದಿನ.ಕಾಮ್ ವರದಿ ಮಾಡಲಿದೆ.