- ಕೋವಿಡ್ ಹಗರಣದ ಬಗ್ಗೆ ಸರ್ಕಾರದಿಂದ ವಿಚಾರಣಾ ಆಯೋಗ ರಚನೆ
- ‘ನೆಹರು ಕಾಲದಿಂದ ಹಿಡಿದು ಭ್ರಷ್ಟಾಚಾರ ಮಾಡಿರುವುದು ಕಾಂಗ್ರೆಸ್’
ಕಾಂಗ್ರೆಸ್ನವರು ಉದ್ದೇಶಪೂರ್ವಕವಾಗಿ ಬಿಜೆಪಿ ವಿರೋಧಿ ನಿಲುವುಳ್ಳ ನಿವೃತ್ತ ನ್ಯಾಯಾಧೀಶರನ್ನು ಇಟ್ಟು ಬಿಜೆಪಿಗೆ ಬೈಯಿಸುವ ಕೆಲಸ ಮಾಡುತ್ತಿದ್ದಾರೆ. ಜನರು ಕೂಡ ಇದನ್ನೆಲ್ಲ ನೋಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿ ಕಾರಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊರೋನಾ ಸೋಂಕು ಅಬ್ಬರದ ವೇಳೆ, ಔಷಧ ಹಾಗೂ ಉಪಕರಣಗಳ ಖರೀದಿಯಲ್ಲಿನ ಭ್ರಷ್ಟಾಚಾರ ಆರೋಪದ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ನೇತೃತ್ವದ ತನಿಖಾ ಆಯೋಗ ರಚಿಸಿರುವ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದರು.
“ವಿಚಾರಣಾ ಆಯೋಗದ ಮುಖ್ಯಸ್ಥ ನಿವೃತ್ತ ನ್ಯಾಯಮೂರ್ತಿಗಳಿದ್ದಾರೆ. ದಿನ ಬೆಳಗಾದರೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಬೈಯುವುದೇ ಅವರ ಕೆಲಸ”ಎಂದು ಹರಿಹಾಯ್ದರು.
“ಕಾಂಗ್ರೆಸ್ ಭ್ರಷ್ಟಾಚಾರದ ರಕ್ತ ಬೀಜಾಸುರರಿದ್ದಂತೆ. ಇಡೀ ದೇಶದಲ್ಲಿ ನೆಹರು ಕಾಲದಿಂದ ಹಿಡಿದು ಭ್ರಷ್ಟಾಚಾರ ಮಾಡಿದಂತಹವರು ಕಾಂಗ್ರೆಸ್ನವರು. ಇದನ್ನು ನಾವು ಹೇಳುತ್ತಿಲ್ಲ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ವರ್ಗಾವಣೆಯಿಂದ ಹಿಡಿದು ಎಲ್ಲದರಲ್ಲೂ ಭ್ರಷ್ಟಾಚಾರ ಇದೆ ಅಂತ ಅವರೇ ಹೇಳಿದ್ದಾರೆ”ಎಂದರು.
ಈ ಸುದ್ದಿ ಓದಿದ್ದೀರಾ? ಪ್ರಧಾನಿ ಮೋದಿ ಬಳಿಗೆ ಕರೆದೊಯ್ಯುವಂತೆ ಬಿಜೆಪಿ ನಾಯಕರ ಬಳಿ ಬೇಡಿಕೆ ಇಟ್ಟ ಸೌಜನ್ಯ ತಾಯಿ
ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ಹೆಸರನ್ನು ಯು.ಪಿ.ಎ ಎಂದು ಬದಲಿಸಿದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, “ಕಾಂಗ್ರೆಸ್ ನಾಯಕರು UPA ಮೈತ್ರಿ ಕೂಟದ ಹೆಸರನ್ನು ಯಾಕೆ ಚೇಂಜ್ ಮಾಡಿದರು ಅಂತ ಲೆಕ್ಕ ಹಾಕ್ತಾ ಇದ್ವಿ. ಅಂಗಡಿ, ಫ್ಯಾಕ್ಟರಿಗಳಲ್ಲಿ ಪ್ರೊಡಕ್ಟ್ ಅದೇ ಇರುತ್ತೆ ಆದರೆ ಕೆಟ್ಟ ಬ್ರಾಂಡ್ ಎಂಬ ಹಣೆಪಟ್ಟಿ ಬಂದ ಮೇಲೆ ಅದೇ ಪ್ರಾಡಕ್ಟ್, ಹೆಸರು ಮಾತ್ರ ಬದಲಾಯಿಸುತ್ತಾರೆ. ಈಗ ಕಾಂಗ್ರೆಸ್ ನಾಯಕರು ಯುಪಿಎ ಮೈತ್ರಿಕೂಟದ ಹೆಸರು ಬದಲಿಸಿರೋದು ಕೂಡ ಇದೇ ರೀತಿ ಆಗಿದೆ” ಎಂದು ಲೇವಡಿ ಮಾಡಿದರು.
ಚಂದ್ರಯಾನದ ಯಶಸ್ಸಿನ ಬಗ್ಗೆ ಮಾತನಾಡಿದ ಅವರು, “ಚಂದ್ರಯಾನದ ಯಶಸ್ಸು ದೇಶದ ಯುವಜನರ ಉತ್ಸಾಹ ಇಮ್ಮಡಿಗೊಳಿಸಿದೆ. ಈಗ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಾಲಿನಲ್ಲಿರುವ ಭಾರತ 2047ರ ಹೊತ್ತಿಗೆ ಸ್ವಾತಂತ್ರ್ಯ ಬಂದು ನೂರು ವರ್ಷ ಆಗುವ ಸಂದರ್ಭದಲ್ಲಿ ವಿಕಾಸಿತ ದೇಶವಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.