ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಲೈಂಗಿಕ ಹಗರಣ ಸಂಬಂಧ ಪೆನ್‌ಡ್ರೈವ್‌ಗಳನ್ನು ಹಂಚಿದ ಪ್ರಕರಣದಲ್ಲಿ ಪ್ರಜ್ವಲ್ ಅವರ ಕಾರು ಚಾಲಕ ಕಾರ್ತಿಕ್ ಸೇರಿ ನಾಲ್ವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಲು ಹಾಸನ ಜಿಲ್ಲಾ ನ್ಯಾಯಾಲಯ ನಿರಾಕರಿಸಿದೆ.
ಕಾರ್ತಿಕ್, ಬೇಲೂರಿನ ಕಾಂಗ್ರೆಸ್ ಕಾರ್ಯಕರ್ತ ಚೇತನ್, ನವೀನ್ ಗೌಡ ಅಲಿಯಾಸ್ ನವೀನ್ ಕುಮಾರ್ ಎನ್.ಆರ್ ಹಾಗೂ ಪುಟ್ಟರಾಜು ಅಲಿಯಾಸ್ ಪುಟ್ಟಿ – ನಾಲ್ವರೂ ನಿರೀಕ್ಷಣಾ ಜಾಮೀನು ಕೋರಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಅರ್ಜಿಗಳ ವಿಚಾರಣೆ ನಡೆಸಿದ ಹಾಸನದ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆನಂದ ಅರ್ಜಿಯನ್ನು ವಜಾಗೊಳಿಸಿದ್ದಾರೆ. ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ್ದಾರೆ.
“ಮಹಿಳೆಯರ ಘನತೆ, ರಕ್ಷಣೆ ಹಾಗೂ ಹಾನಿಯನ್ನು ತಡೆಯುವ ನಿಟ್ಟಿನಲ್ಲಿ ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನೀಡುವುದು ಸೂಕ್ತವಲ್ಲ. ಇಂಥವರಿಗೆ ಜಾಮೀನು ನೀಡುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ಮುರಿದು ಬೀಳುತ್ತದೆ. ಮಾತ್ರವಲ್ಲ, ಮಹಿಳೆಯರ ಘನತೆಗೆ ಹಾನಿಯಾಗಲಿದೆ” ಎಂದು ನ್ಯಾಯಾಲಯ ಹೇಳಿದೆ.
“ಸ್ಥಾಪಿತ ಹಿತಾಸಕ್ತಿಗಳಿಂದ ಆರೋಪಿಗಳು ಮಾಡದ ತಪ್ಪಿಗೆ ಸಂತ್ರಸ್ತೆಯರನ್ನು ಶಾಶ್ವತವಾಗಿ ಸಮಾಜದಲ್ಲಿ ಅಂಚಿಗೆ ನೂಕುವ ಸಾಧ್ಯತೆ ಇದೆ. ಈ ಕೃತ್ಯವು ಮಹಿಳೆಯರ ಚಾರಿತ್ರ್ಯಹರಣಕ್ಕೆ ಸಮನವಾಗಿದೆ. ವಾಸ್ತವವಾಗಿ, ಆರೋಪಿಗಳ ಕಸ್ಟಡಿ ವಿಚಾರಣೆ ಅಗತ್ಯವಾಗಿದೆ” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.
ಪೊಲೀಸ್ ಇಲಾಖೆ ಪರವಾಗಿ ವಾದ ಮಂಡಿಸಿದ ಸರ್ಕಾರಿ ಅಭಿಯೋಜಕರು, “ಆರೋಪಿ ಅರ್ಜಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ, ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆ ಇದೆ. ವಿಡಿಯೊಗಳನ್ನು ದೇಶಾದ್ಯಂತ ಪ್ರಸಾರ ಮಾಡಲಾಗಿದ್ದು, ಅವುಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪಡೆಯಬೇಕಿದೆ. ಅವರಿಗೆ ನಿರೀಕ್ಷಣಾ ಜಾಮೀನು ನೀಡಿದರೆ, ಅವರು ತನಿಖೆಗೆ ಸಹಕರಿಸದೇ ಇರುವ ಸಾಧ್ಯತೆ ಇದೆ. ತುರ್ತಾಗಿ ಪ್ರಕರಣವನ್ನು ಇತ್ಯರ್ಥಪಡಿಸಲು ಅಡ್ಡಿಯಾಗಲಿದೆ” ಎಂದು ಹೇಳಿದ್ದಾರೆ.