ಪತ್ರಿಕಾ ರಂಗಕ್ಕೆ ಅತ್ಯುತ್ತಮ ಪತ್ರಕರ್ತರನ್ನು ನೀಡಿದ್ದ ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಈಗ ಪ್ರಾಧ್ಯಾಪಕರ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಹಲವು ವರ್ಷಗಳಿಂದ ಶೀತಲ ಸಮರದಂತಿದ್ದ ಪ್ರಧ್ಯಾಪಕರ ಮುನಿಸು, ಒಳಜಗಳ ಈಗ ಬೀದಿಗೆ ಬಂದಿದೆ. ಪರಿಣಾಮವಾಗಿ ವಿಭಾಗದ ವಿದ್ಯಾರ್ಥಿಗಳು ಕಾರಿಡಾರ್ನಲ್ಲಿ ಕುಳಿತು ಪಾಠ ಕೇಳುವಂತಾಗಿದೆ.
ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿ ಕ್ಯಾಂಪಸ್ನಲ್ಲಿರುವ ಮಾನವಿಕ ವಿಭಾಗಗಳ ಕಟ್ಟಡಲ್ಲಿ ಸುಮಾರು 50 ವರ್ಷಗಳಿಂದ ಪತ್ರಿಕೋದ್ಯಮ ವಿಭಾಗದ ತರಗತಿಗಳು ನಡೆಯುತ್ತಿದ್ದವು. ಇತ್ತೀಚೆಗೆ, ಪತ್ರಿಕೋದ್ಯಮ ವಿಭಾಗಕ್ಕೆ ಹೊಸ ಕಟ್ಟಡವನ್ನು ನೀಡಲಾಗಿದೆ. ವಿಭಾಗವನ್ನು ಆ ಕಟ್ಟಡಕ್ಕೆ ಸ್ಥಳಾಂತರಿಸುವ ವಿಷಯದಲ್ಲೂ ಪ್ರಾಧ್ಯಾಪಕರ ಪ್ರತಿಷ್ಠೆ ತೋರಿದ್ದಾರೆ. ಹೀಗಾಗಿ, ವಿದ್ಯಾರ್ಥಿಗಳು ನೆಲದಲ್ಲಿ ಕುಳಿತು ಪಾಠ ಕೇಳಿದ್ದಾರೆ ಎಂದು ಹೇಳಲಾಗಿದೆ.
ಪತ್ರಿಕೋದ್ಯಮ ವಿಭಾಗಕ್ಕೆ ನೀಡಲಾಗಿದ್ದ ಹೊಸ ಕಟ್ಟಡದಲ್ಲಿ ಇನ್ನೂ ಹಲವಾರು ಮೂಲಭೂತ ಸೌಕರ್ಯಗಳ ಕೊರತೆ ಇತ್ತು. ಹೀಗಾಗಿ, ಮತ್ತಷ್ಟು ಅನುದಾನದೊಂದಿಗೆ ಎಲ್ಲ ಸೌಲಭ್ಯಗಳನ್ನು ನೀಡಬೇಕೆಂದು ವಿಶ್ವವಿದ್ಯಾಲಯಕ್ಕೆ ಕೋರಲಾಗಿತ್ತು. ಹೊಸ ಕಟ್ಟಡದಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸುವವರೆ ವಿಭಾಗವನ್ನು ಸ್ಥಳಾಂತರಿಸದಂತೆ ಅಧ್ಯಾಪಕರು ಒತ್ತಾಯಿಸಿದ್ದರು ಎಂದು ಹೇಳಲಾಗಿದೆ.
ಆದರೆ, ಇದ್ದಕ್ಕಿದ್ದಂತೆ ಮಂಗಳವಾರ ಸಂಜೆ ವಿಭಾಗದ ಮುಖ್ಯಸ್ಥೆ ಡಾ. ಎಂ.ಎಸ್ ಸಪ್ನಾ ಅವರು ವಿಭಾಗವನ್ನು ಸ್ಥಳಾಂತರಿಸಲಾಗಿದೆ ಎಂದು ಬಾಗಿಲಿಗೆ ಚೀಟಿ ಅಂಟಿಸಿ ಹೋಗಿದ್ದಾರೆ. ವಿಭಾಗದ ಸ್ಥಳಾಂತರದ ಬಗ್ಗೆಯೂ ಇತರ ಪ್ರಾಧ್ಯಾಪಕರಿಗೆ ತಿಳಿಸಿರಲಿಲ್ಲ. ಬುಧವಾರ ಬೆಳಗ್ಗೆ ವಿದ್ಯಾರ್ಥಿಗಳು ವಿಭಾಗಕ್ಕೆ ಬಂದಾಗ, ಸ್ಥಳಾಂತರ ವಿಷಯ ಗೊತ್ತಾಗಿದೆ ಎಂದು ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ?: ರಾಜ್ಯ ರಾಜ್ಯಗಳ ನಡುವೆ ಅಸಮತೆ ಜೋಕಾಲಿ-ದೇವನೂರ ಮಹಾದೇವ
ವಿದ್ಯಾರ್ಥಿಗಳಿಗೆ ಕಾರಿಡಾರ್ನಲ್ಲೇ ಪಾಠ ಮಾಡಿರುವ ಪ್ರಾಧ್ಯಾಪಕ ಪುಟ್ಟಸ್ವಾಮಿ ಮತ್ತು ಪ್ರಾಧ್ಯಾಪಕಿ ಎನ್ ಮಮತಾ, “ವಿಭಾಗವನ್ನು ರಾತ್ರೋರಾತ್ರಿ ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ. ಈ ಬಗ್ಗೆ ನಮಗೆ ಮಾಹಿತಿಯೇ ಇಲ್ಲ. ವಿಭಾಗ ಸ್ಥಳಾಂತರದ ಬಗ್ಗೆ ಮೈಸೂರು ವಿಶ್ವವಿದ್ಯಾಲಯದಿಂದ ಅಧಿಕೃತ ಆದೇಶ ಬಂದಿಲ್ಲ. ಇದರಿಂದ ನಾವು ಇಲ್ಲಿಯೇ ಪಾಠ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ.
“ವಿಭಾಗವನ್ನು ವಿಶ್ವವಿದ್ಯಾಲಯದ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳಾಂತರ ಮಾಡಬೇಕಾಗಿತ್ತು. 50 ವರ್ಷಗಳ ಹಳೆಯ ದಾಖಲಾತಿಗಳು ಇಲ್ಲಿಯೇ ಇವೆ. ದಾಖಲಾತಿಗಳ ಪಂಚನಾಮೆ ಮಾಡಿದ ಬಳಿಕ ವಿಭಾಗವನ್ನು ಸ್ಥಳಾಂತರ ಮಾಡಬೇಕಿತ್ತು. ಅದಾವುದನ್ನೂ ಮಾಡಲಾಗಿಲ್ಲ” ಎಂದು ಅವರು ಹೇಳಿದ್ದಾರೆ.
ವಿವಾದದ ಬಗ್ಗೆ ಸ್ಪಷ್ಟನೆ ನೀಡಿರುವ ವಿಭಾಗದ ಮುಖ್ಯಸ್ಥೆ ಫ್ರೊ. ಸಪ್ನಾ, “ಇದು ನನ್ನ ವೈಯಕ್ತಿಕ ನಿರ್ಧಾರವಲ್ಲ. ವಿಶ್ವವಿದ್ಯಾನಿಲಯದ ಸೂಚನೆಯಂತೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎಲ್ಲರಿಗೂ ತಿಳಿಸಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದಲೇ ಇದನ್ನೆಲ್ಲಾ ಮಾಡಲಾಗಿದೆಯೇ ಹೊರತು ಬೇರೆನೂ ಇಲ್ಲ” ಎಂದು ಹೇಳಿದ್ದಾರೆ.