ರಾಜ್ಯದಲ್ಲಿನ ಮೂರು ಕ್ಷೇತ್ರಗಳಲ್ಲಿನ ಗೆಲುವು ಸಿದ್ದರಾಮಯ್ಯ ಅವರ ನಾಯಕತ್ವದ ಕಿರೀಟಕ್ಕೆ ಮತ್ತೊಂದು ಗರಿ ಆಗಿದ್ದು, ಈ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಅನಗತ್ಯ ಆರೋಪ ಮಾಡುತ್ತಿದ್ದವರಿಗೆ ಜನರೇ ಉತ್ತರ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಚುನಾವಣೆ ಗೆಲುವನ್ನು ವಿಶ್ಲೇಷಿಸಿದರು.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, “ಸಿದ್ದರಾಮಯ್ಯ ನಾಡು ಕಂಡ ಅಪರೂಪದ ನಾಯಕ. 40 ವರ್ಷ ನಿಷ್ಕಳಂಕ ರಾಜಕಾರಣ ಮಾಡಿದ ಮುತ್ಸದ್ಧಿ. ಅಹಿಂದ ವರ್ಗದ ಹಿತ ಸದಾ ಬಯಸುವ ಸಿದ್ದರಾಮಯ್ಯ, ಎಲ್ಲ ಸಮುದಾಯದ ಹಿತಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಯಶಸ್ಸು ಕಂಡಿದ್ದಾರೆ. ಅವರ ಹೆಸರಿಗೆ ಅನಗತ್ಯವಾಗಿ ಮಸಿ ಬಳಿಯುವ ಯತ್ನಕ್ಕೆ ಮುಡಾ ವಿಷಯ ಮುನ್ನೆಲೆಗೆ ತಂದ ಪ್ರತಿಪಕ್ಷಗಳ ನಡೆಗೆ ಜನಾಕ್ರೋಶ ಮೂರು ಉಪ ಚುನಾವಣೆಯಲ್ಲಿ ಹೊರಬಿದ್ದಿದೆ” ಎಂದು ಹೇಳಿದರು.
“ಸಿದ್ದರಾಮಯ್ಯನವರ ಜನಪರ ಆಡಳಿತಕ್ಕೆ ಜನಮನ್ನಣೆಯಿಂದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮೂರೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ” ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹರ್ಷ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಅಮೆರಿಕದಲ್ಲಿ ಯಾವುದೇ ನಿರ್ಧಾರ ಮಾಡುವುದು ಮೋದಿಯವರನ್ನು ಕೇಳಿ: ಬಿಜೆಪಿ ಶಾಸಕ ಹರೀಶ್ ಪೂಂಜಾ ಹೇಳಿಕೆ ವೈರಲ್
“ಅಹಿಂದ ಮತಗಳು ಸಿದ್ದರಾಮಯ್ಯ ಬೆನ್ನಿಗೆ ಗಟ್ಟಿಯಾಗಿ ನಿಂತುಕೊಂಡಿವೆ. ಇದರೊಂದಿಗೆ ಒಕ್ಕಲಿಗ, ವೀರಶೈವ ಲಿಂಗಾಯಿತ ಮತಗಳನ್ನು ಕೂಡ ಪಕ್ಷ ಪಡೆದುಕೊಳ್ಳುವಲ್ಲಿ ಯಶಸ್ಸು ಕಂಡಿದೆ. ಜತೆಗೆ ಶಿಗ್ಗಾವಿ, ಸಂಡೂರಲ್ಲಿ ಹೆಚ್ಚು ಸಂಖ್ಯೆಯಲ್ಲಿರುವ ಮಾದಿಗ ಸಮುದಾಯವು ಕೂಡ ಕೈಹಿಡಿದಿರುವುದು ಪಕ್ಷದ ಗೆಲುವಿಗೆ ಸಹಕಾರಿ ಆಗಿದೆ. ಈ ಗೆಲುವಿನ ಮೆರವಣಿಗೆ ಮುಂಬರುವ ಬಿಬಿಎಂಪಿ, ಜಿಲ್ಲಾ, ತಾಲೂಕು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮುಂದುವರಿಯಲಿದೆ. ಪ್ರತಿಪಕ್ಷಗಳು ಈಗಲಾದರೂ ಸೋಲು ಒಪ್ಪಿಕೊಂಡು, ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡಬೇಕು” ಎಂದು ತಿಳಿಸಿದರು.
