- ಬೆಳ್ತಂಗಡಿಯಲ್ಲಿ ರಾಜ್ಯಮಟ್ಟದ ಬೃಹತ್ ಹೋರಾಟ ನಡೆಯಲಿದೆ : ಮಹೇಶ್ ಶೆಟ್ಟಿ ತಿಮರೋಡಿ
- 22 ಕಿ.ಮೀವರೆಗೆ ಸಾಗಿದ ವಾಹನ ಜಾಥಾ : ಸುಳ್ಯದಲ್ಲಿ ಬೃಹತ್ ಸಭೆ
ಧರ್ಮಸ್ಥಳದ ಸೌಜನ್ಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣ ಸದ್ಯ ರಾಜ್ಯಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ನಡುವೆ ಪ್ರಕರಣದ ಮರು ತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಬೃಹತ್ ಪ್ರತಿಭಟನೆ ಇಂದು ನಡೆಯಿತು.
ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಸೌಜನ್ಯಳ ತಾಯಿ ಕುಸುಮಾವತಿ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು.
ಮುರುಳ್ಯ ಗ್ರಾಮದ ನಿಂತಿಕಲ್ಲಿನಿಂದ ಸುಳ್ಯದವರೆಗೆ ಸುಮಾರು 22 ಕಿ.ಮೀವರೆಗೆ ವಾಹನ ಜಾಥಾ ಆರಂಭಗೊಂಡು, ಸುಳ್ಯ ಬಸ್ ನಿಲ್ದಾಣದ ಸಮೀಪ ಸಮಾವೇಶಗೊಂಡಿತು.

ಈ ವೇಳೆ ಮಾತನಾಡಿದ ಸೌಜನ್ಯಳ ತಾಯಿ ಕುಸುಮಾವತಿ, ‘ನನ್ನ ಮಗಳಿಗೆ ಕಳೆದ 11 ವರ್ಷದಿಂದ ನ್ಯಾಯ ಕೇಳುತ್ತಿದ್ದೇವೆ. ಆದರೆ ಈವರೆಗೂ ಸಿಕ್ಕಿಲ್ಲ. ಜನರ ಬೆಂಬಲದಿಂದ ಮರು ತನಿಖೆಯ ಹೋರಾಟಕ್ಕೆ ಇಳಿದಿದ್ದೇವೆ. ನಾವು ಕೇಳುತ್ತಿರುವುದು ನಮ್ಮ ಮಗಳನ್ನು ಅತ್ಯಾಚಾರಗೈದು ಕೊಲೆಗೈದವರು ಯಾರು ಎಂಬುದಷ್ಟೇ. ನನ್ನ ಮಗಳಿಗಾದ ಅನ್ಯಾಯ ಇನ್ನು ಯಾರಿಗೂ ಆಗಬಾರದು. ಅದುವೇ ಕೊನೆಯಾಗಬೇಕು’ ಎಂದರು.
ಬಳಿಕ ಮಾತನಾಡಿದ ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯ ಅತ್ಯಾಚಾರಿ ಧರ್ಮಾಧಿಕಾರಿಯಾಗಿರಲೀ ಸಾಮಾನ್ಯನೇ ಆಗಿರಲಿ. ಅವರಿಗೆ ಶಿಕ್ಷೆಯಾಗಬೇಕು. ನಾವು ಯಾರ ವಿರುದ್ಧವೂ ಹೋರಾಟ ಮಾಡುತ್ತಿಲ್ಲ. ನ್ಯಾಯಕ್ಕಾಗಿ ಮಾತ್ರ ನಮ್ಮ ಹೋರಾಟ’ ಎಂದು ಸ್ಪಷ್ಟಪಡಿಸಿದರು.
ಅತ್ಯಾಚಾರಿಗಳು ಈ ಮಣ್ಣಲ್ಲಿ ಬದುಕಬಾರದು ಎಂಬುದು ನಮ್ಮ ಘೋಷಣೆಯಾಗಬೇಕು. ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಿಂದ ಇಂದು ನ್ಯಾಯಕ್ಕಾಗಿ ಮತ್ತೆ ಪ್ರತಿಭಟನೆ ಆರಂಭಗೊಂಡಿದೆ. ಈ ಹೋರಾಟ ನ್ಯಾಯ ಸಿಗುವವರೆಗೂ ನಿಲ್ಲಲ್ಲ. ಎಲ್ಲ ಸತ್ಯವೂ ಒಂದಲ್ಲ ಒಂದು ದಿನ ಹೊರಬರಲಿದೆ ಎಂದು ತಿಳಿಸಿದರು.

ರಾಜ್ಯದ ಎಲ್ಲ ಜಿಲ್ಲೆಗಳ ತಾಲೂಕು ಕೇಂದ್ರಗಳಲ್ಲಿ ಸೌಜನ್ಯಳ ನ್ಯಾಯಕ್ಕಾಗಿ ಹೋರಾಟ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಬೆಳ್ತಂಗಡಿಯಲ್ಲಿ ರಾಜ್ಯಮಟ್ಟದ ಬೃಹತ್ ಹೋರಾಟ ನಡೆಯಲಿದೆ. ಅದಕ್ಕೆ ದಿನಾಂಕ ನಿಗದಿ ಮಾಡಿಲ್ಲ ಎಂದು ಮಹೇಶ್ ಶೆಟ್ಟಿ ತಿಮರೋಡಿ ತಿಳಿಸಿದರು.
ಸ್ಥಳಕ್ಕೆ ಬಂದ ಉಪ ತಹಶೀಲ್ದಾರ್ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ಮೈಸೂರು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಪರಶುರಾಮ್, ಹೋರಾಟ ಸಮಿತಿಯ ಡಿ ಬಿ ಬಾಲಕೃಷ್ಣ, ಸುಳ್ಯ ಗೌಡ ಸಂಘದ ಅಧ್ಯಕ್ಷ ಚಂದ್ರ ಕೊಲ್ಚಾರ್, ಗಿರೀಶ್ ಮಟ್ಟನವರ್ ಸೇರಿದಂತೆ ಸಾವಿರಾರು ಮಂದಿ ಭಾಗಿಯಾಗಿದ್ದರು.