ಯಾದಗಿರಿ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಪರಶುರಾಮ ಅವರ ಸಾವಿಗೆ ಕಾರಣರಾದ ಶಾಸಕ ಚನ್ನಾರೆಡ್ಡಿ ಪಾಟೀಲ್ ಮತ್ತು ಅವರ ಪುತ್ರನನ್ನು ಕೂಡಲೇ ಬಂಧಿಸಬೇಕು ಹಾಗ ಪಿಎಸ್‌ಐ ಕುಟುಂಬಕ್ಕೆ ಸರಕಾರವು ಪರಿಹಾರ ನೀಡುವಂತೆ ದಲಿತ ಸಂಘರ್ಷ ಸಮಿತಿಯ ಗುರಮಿಠಕಲ್ ಘಟಕ ಆಗ್ರಹಿಸಿದೆ.
ಈ ಬಗ್ಗೆ ಗುರಮಿಠಕಲ್‌ನಲ್ಲಿ ಪ್ರತಿಭಟನೆ ನಡೆಸಿದ ದಸಂಸ ಮುಖಂಡರು, ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ದಸಂಸ ಸಂಚಾಲಕ ಲಾಲಪ್ಪ ತಲಾರಿ, “ತುಂಬಾ ಕಡು ಬಡತನದ ಕುಟುಂಬದಲ್ಲಿ ಜನಿಸಿ ಉನ್ನತ ಪೋಲಿಸ್ ಇಲಾಖೆಯಲ್ಲಿ ಪಿ.ಎಸ್.ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಪರಶುರಾಮ ಅವರು ಠಾಣೆಯಲ್ಲಿ ಕಾರ್ಯನಿರ್ವಹಿಸಲು ಇನ್ನೂ ಮೂರು ತಿಂಗಳು ಅವಕಾಶವಿತ್ತು. ವರ್ಗಾವಣೆಗೆ ಅವಧಿ ಇದ್ದರೂ ಕೂಡ ಅವರಿಗೆ ಆ ಠಾಣೆಯಿಂದ ಬೇರೆ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಯಾದಗಿರಿಯಲ್ಲೇ ಕೆಲಸ ಮಾಡಬೇಕಾದರೆ ಶಾಸಕರ ಕುಟುಂಬ 30 ಲಕ್ಷ ರೂಪಾಯಿಗಳು ನೀಡಬೇಕು ಎಂದು ನಿರಂತರವಾಗಿ ಪಿ.ಎಸ್.ಐ ಪರುಶುರಾಮ ಅವರಿಗೆ ಕಿರುಕುಳ ನೀಡುತ್ತಿದ್ದರು. ಇದರಿಂದಾಗಿ ಅವರಿಗೆ ಮಾನಸಿಕ ಒತ್ತಡ ಹೆಚ್ಚಾಗಿ ಹೃದಯಾಘಾತದಿಂದ ನಿಧನರಾಗಿದ್ದಾರೆ” ಎಂದರು.
ಈ ಸಂಬಂಧ ಯಾದಗಿರಿ ಠಾಣೆಯಲ್ಲಿ ಎಫ್.ಐ.ಆರ್ ದಾಖಲೆಯಾಗಿದೆ. ಆದರೂ ಕೂಡ ಶಾಸಕ ಮತ್ತು ಶಾಸಕನ ಪುತ್ರರನ್ನು ಇಲ್ಲಿಯವರೆಗೆ ಬಂಧನ ಮಾಡಿಲ್ಲ. ಪಿ.ಎಸ್.ಐ ಸಾವಿಗೆ ಕಾರಣರಾದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಸರಕಾರದಿಂದ ಅವರ ಪತ್ನಿಗೆ ಉದ್ಯೋಗ ನೀಡಬೇಕು. ಶಾಸಕ ಸ್ಥಾನಕ್ಕೆ ಚನ್ನಾರೆಡ್ಡಿ ಪಾಟೀಲ್ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು.
ಒಂದು ವೇಳೆ ವಿಳಂಬ ನೀತಿ ಅನುಸರಿಸಿದ್ದಲ್ಲಿ ಮುಂಬರುವ ದಿನಗಳಲ್ಲಿ ದಲಿತ ಸಂಘರ್ಷ ಸಮಿತಿ ಮತ್ತು ಸರ್ವ ಸಂಘಟನೆಗಳ ವತಿಯಿಂದ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ದಸಂಸ ಎಚ್ಚರಿಕೆ ನೀಡಿದೆ.
ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಸೈದಾಪೋಳ್, ಭೀಮಶಪ್ಪ ಕೆಳಮನಿ, ಶ್ರೀಕಾಂತ ತಲಾರಿ, ಹನುಮಂತು ಶನಿವಾರ, ಕೃಷ್ಣಪ್ಪ ಸೈದಾಪೋಳ್, ಮುಖಂಡರಾದ ವೀರಪ್ಪ ಪ್ಯಾಟಿ, ಮಾಣಿಕಪ್ಪ ಮುಕಿಡಿ, ಗುರುನಾಥ ತಲಾರಿ, ಹನಮಂತ ಮುಕಿಡಿ, ಭೀಮು ಗುಡುಸೆ, ರವಿ ರಾಠೋಡ್, ಗುರು ಕುಂಬಾರ, ಶರಣಪ್ಪ ಲಿಕ್ಕಿ, ರಾಕೇಶ್ ಸೈದಾಪೋಳ್, ಅಶೋಕ್ ಲಿಕ್ಕಿ, ಭೀಮಶೆಪ್ಪ ದಂತಪುರ್, ಕೃಷ್ಣ ದಾಸರಿ, ಸಾಯಿಬಣ್ಣ ಬೇಗರಿ ಇನ್ನಿತರರು ಉಪಸ್ಥಿತರಿದ್ದರು.
