ಶಿವಮೊಗ್ಗ ಗ್ರಾಮಾಂತರದ ಅನುಪಿನಕಟ್ಟೆ ಗ್ರಾಮದ ಸೇತುವೆಯ ಸಮೀಪದ ರಸ್ತೆ ಗುಂಡಿಮಯವಾಗಿದ್ದು, ಸಂಪೂರ್ಣ ಹಾಳಾಗಿದೆ. ಅಧಿಕಾರಿಗಳೇ ಈ ರಸ್ತೆಯಾಗಿ ಓಡಾಡುತ್ತಿದ್ದರೂ ಕೂಡ ಏನೂ ತಿಳಿಯದವರಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ರಸ್ತೆಯಲ್ಲಿ ಅವ್ಯವಸ್ಥೆ ಉಂಟಾಗಿರುವುದಾಗಿ ಸ್ಥಳೀಯರು ಆರೋಪಿಸುತ್ತಿದ್ದು, ಈ ರಸ್ತೆಯಲ್ಲಿ ಬೀದಿ ದೀಪ ಕೂಡ ಇಲ್ಲ. ಇದರಿಂದ ಬಹಳಷ್ಟು ಅಪಾಯ ಆಗುತ್ತಿದೆ.
ರಾತ್ರಿ ವೇಳೆಯಲ್ಲಿ ಅಂತೂ ಇಲ್ಲಿ ಓಡಾಡುವುದು ತುಂಬಾನೇ ಕಷ್ಟವಾಗಿದೆ ಎಂದು ದೂರಿದ್ದಾರೆ. ದಿನ ನಿತ್ಯ ವಾಹನ ಸವಾರರು ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದು, ಈ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ವಾಹನ ಸವಾರರು ಓಡಾಡಬೇಕಾದ ಪರಿಸ್ಥಿತಿ ಇದೆ.
ಅಲ್ಲದೇ, ಈ ರಸ್ತೆಯ ಬದಿಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಕೂಡ ಇಲ್ಲದಿರುವ ಕಾರಣ ಕೊಳಚೆ ನೀರು ರಸ್ತೆಯಲ್ಲೇ ಹರಿದಾಡುತ್ತಿದೆ. ಮಣ್ಣು ತುಂಬಿದ ಲಾರಿಗಳ ಓಡಾಟವಿರುವ ಕಾರಣ ಈಗ ಇರುವ ಚರಂಡಿಯಲ್ಲೂ ಮಣ್ಣು ತುಂಬಿರುವುದರಿಂದ ನೀರು ಹರಿದು ಹೋಗಲು ಎಲ್ಲೂ ಜಾಗ ಇಲ್ಲ. ಈ ಎಲ್ಲ ಕಾರಣದಿಂದಾಗಿ ನೀರು ರಸ್ತೆಯಲ್ಲೇ ಶೇಖರಣೆಯಾಗಿ ಈ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ದಿನ ನಿತ್ಯ ಶಿವಮೊಗ್ಗ ಮಹಾನಗರ ಪಾಲಿಕೆ ಕಸ ವಿಲೇವಾರಿ ವಾಹನ ಹಾಗೂ ಸರ್ಕಾರಿ ವಾಹನಗಳು ಸಹ ಓಡಾಡುತ್ತಿದ್ದರೂ ಕೂಡ ಯಾರು ಈ ಸಮಸ್ಯೆಗೆ ಪರಿಹಾರ ಕಲ್ಪಿಸುವ ಗೋಜಿಗೆ ಹೋಗಿಲ್ಲ ಎನ್ನುವುದು ಮಾತ್ರ ವಾಸ್ತವ.
“ಈ ವರ್ಷ ಮಾತ್ರವಲ್ಲ ಇದು ಪ್ರತಿವರ್ಷವೂ ಕಾಣುವ ಸಮಸ್ಯೆ. ಇದಕ್ಕೆ ಈವರೆಗೆ ಸಂಬಂಧಪಟ್ಟ ಅಧಿಕಾರಿಗಳು ಈವರೆಗೆ ಶಾಶ್ವತ ಪರಿಹಾರ ಕಲ್ಪಿಸಿಲ್ಲ” ಎಂದು ಸ್ಥಳೀಯರು ದೂರಿದ್ದಾರೆ.
ಈ ರಸ್ತೆಯ ಸುತ್ತಮುತ್ತಲಿನಲ್ಲಿ ಮಂದಾರ ಶಾಲೆ ಹಾಗೂ ರಾಮಕೃಷ್ಣ ಗುರುಕುಲ ವಸತಿ ಶಾಲೆ ಇದೆ. ದಿನ ನಿತ್ಯ ಮಕ್ಕಳು ಹಾಗೂ ಸಾರ್ವಜನಿಕರು ಓಡಾಡುವಾಗ ಹಿಂದೆ ಮುಂದೆ ಬರುವ ವಾಹನಗಳಿಂದಾಗಿ ಕೆಸರು ಮೈಮೇಲೆ ಕೂಡ ಬಿದ್ದ ಸಾಕಷ್ಟು ಉದಾಹರಣೆಗಳಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಗ್ರಾಮದಲ್ಲಿ ಸರ್ಕಾರಿ ವಸತಿ ಕೇಂದ್ರದ ಕಾಮಗಾರಿ ಕೂಡ ನಡೆಯುತ್ತಿದೆ. ಪುರದಾಳು ಊರಿನಲ್ಲಿ ಸರ್ಕಾರಿ ಶಾಲೆ ಸಹ ಇದ್ದು ಇಲ್ಲಿಗೆ ಶಿಕ್ಷಕರು ಮಕ್ಕಳು ಎಲ್ಲಾ ಸಹ ಇದೆ ರಸ್ತೆಯಿಂದ ಓಡಾಡಬೇಕಿದೆ. ಸುತ್ತಮುತ್ತಲಿನ ಮೂರು ನಾಲ್ಕು ಊರುಗಳಾದ ಗೋವಿಂದಪುರ, ಪುರಾದಾಳ್, ಹೊಸೂರ್, ಚಿತ್ರ ಶೆಟ್ಟಿಹಳ್ಳಿ ಮತ್ತು ಶೆಟ್ಟಿಹಳ್ಳಿಯವರಿಗೂ ಕೂಡ ಇದೇ ದಾರಿ ಆಶ್ರಯವಾಗಿದೆ.
ರಾತ್ರಿ ವೇಳೆಯಲ್ಲಿ ಕೂಡ ಈ ಭಾಗದಲ್ಲಿ ಜನರು ಓಡಾಡುತ್ತಾರೆ. ಆದರೆ ಇಲ್ಲಿ ಯಾವುದೇ ಒಂದು ಬೀದಿ ದೀಪದ ವ್ಯವಸ್ಥೆಯನ್ನು ಅಧಿಕಾರಿಗಳು ಕಲ್ಪಿಸಿಲ್ಲ. ಇದೇ ರಸ್ತೆಯ ಬದಿಯಲ್ಲಿ ಕಸವನ್ನು ಎಸೆಯಲಾಗಿತ್ತಿದ್ದರೂ, ಸಂಬಂಧಪಟ್ಟವರು ಈವರೆಗೆ ಗಮನಹರಿಸಿಲ್ಲ ಎನ್ನುವುದು ಸ್ಥಳೀಯರ ದೂರು.
“ಅನುಪಿನಕಟ್ಟೆ ರಸ್ತೆಯ ಸಮಸ್ಯೆಯ ಸಂಬಂಧ ಮಂಡಲ ಪಂಚಾಯತ್‌ಗೆ ಸಹ ದೂರು ನೀಡಿದ್ದೇವೆ. ಆದರೂ ಕೂಡ ಏನೂ ಪ್ರಯೋಜನ ಆಗಿಲ್ಲ. ಅಧಿಕಾರಿಗಳು ಈ ಬಗ್ಗೆ ತಲೆಯೇ ಕೆಡಿಸಿಕೊಂಡಿಲ್ಲ” ಎಂದು ಸ್ಥಳೀಯ ನಿವಾಸಿಗಳಾದ ಪರ್ವೇಝ್ ಹಾಗೂ ಶ್ರೀನಿವಾಸ್ ಮೂರ್ತಿ ಈ ದಿನ.ಕಾಮ್‌ನೊಂದಿಗೆ ಮಾತನಾಡುತ್ತಾ ತಿಳಿಸಿದರು.