ಜಿಲ್ಲಾದ್ಯಂತ ಕಳೆದ ನಾಲ್ಕೈದು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಹಲವೆಡೆ ಮನೆಯ ಗೋಡೆಗಳು ಕುಸಿಯುತ್ತಿವೆ. ಇನ್ನು ಹಳ್ಳಿಗಳಲ್ಲಿ ಸೂಕ್ತ ಚರಂಡಿ, ಸಿಸಿ ರಸ್ತೆ ಸೇರಿದಂತೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಈ ಬಗ್ಗೆ ಈದಿನ.ಕಾಮ್ ಬೀದರ್ ಸಹಾಯವಾಣಿ ನಂಬರ್‌ಗೆ ಕಳುಹಿಸಿದ ಸಾರ್ವಜನಿಕರ ಕುಂದು ಕೊರತೆ ಇಲ್ಲಿವೆ.
ಭಾಲ್ಕಿ : ಎರಡು ದಶಗಳಿಂದ ಸಿಸಿ ರಸ್ತೆ, ಚರಂಡಿ ಕಾಣದ ಓಣಿ
ತಾಲೂಕಿನ ಗ್ರಾಮ ಪಂಚಾಯತ್ ಕೇಂದ್ರ ಸ್ಥಾನ ಹೊಂದಿರುವ ಬೀರಿ(ಬಿ) ಗ್ರಾಮದ ಎರಡನೇ ವಾರ್ಡ್‌ನ ಜನರು ಸೂಕ್ತ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದಾರೆ.
ಗ್ರಾಮ ಪಂಚಾಯತ್ ಕಟ್ಟಡದ ಪಕ್ಕದಲ್ಲೇ ಇರುವ ಮರಾಠಾ ಬಡಾವಣೆಯಲ್ಲಿ ಕಳೆದ ಎರಡು ದಶಕಗಳ ಹಿಂದೆ ನಿರ್ಮಿಸಿದ ಸಿಸಿ ರಸ್ತೆ, ಚರಂಡಿ ಸಂಪೂರ್ಣ ಕಿತ್ತು ಹೋಗಿದೆ. ಹೀಗಾಗಿ ಮನೆಗಳಿಂದ ಬರುವ ಕೊಳಚೆ ನೀರು, ಮಳೆ ನೀರು ರಸ್ತೆ ಮೇಲೆಯೇ ಸಂಗ್ರಹವಾಗುತ್ತಿದೆ.

ಜೆಜೆಎಂ ಕಾಮಗಾರಿಗಾಗಿ ಅಗೆದ ತೆಗ್ಗು ಹಾಗೇ ಮುಚ್ಚಿದ್ದಾರೆ. ಇದರಿಂದ ಓಣಿಯ ಜನರು ಓಡಾಡಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಮಧ್ಯೆ ನೀರು ಸಂಗ್ರಹವಾದ ಕಾರಣ ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಇದೆ. ಜನರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಕಾಡುತ್ತಿದೆ.
ʼಸಾರ್ವಜನಿಕರ ಹಿತದೃಷ್ಟಿಯಿಂದ ಗ್ರಾಮ ಪಂಚಾಯತ್ ಅಧಿಕಾರಿಗಳು ತಕ್ಷಣವೇ ಎಚ್ಚೆತುಕೊಂಡು 2ನೇ ವಾರ್ಡ್ ನಲ್ಲಿ ರಸ್ತೆ, ಚರಂಡಿ ಸ್ವಚ್ಛಗೊಳಿಸಲು ಮುಂದಾಗಬೇಕು. ಹೊಸ ಸಿಸಿ ರಸ್ತೆ, ಚರಂಡಿ ನಿರ್ಮಿಸಲು ಯೋಜನೆ ರೂಪಿಸಬೇಕು ʼ ಎಂದು ಓಣಿಯ ನಿವಾಸಿ ಜೀವನ ಬಿರಾದರ್ ಆಗ್ರಹಿಸಿದ್ದಾರೆ.
ಬೀದರ್ : ಗೋರನಳ್ಳಿ(ಬಿ) ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಿ
ಬೀದರ ತಾಲೂಕಿನ ಅಮಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಗೋರನಳ್ಳಿ (ಬಿ) ಗ್ರಾಮದ ಚರ್ಚ್ ಪಕ್ಕದ ಓಣಿಯಲ್ಲಿ ಸಮರ್ಪಕ ರಸ್ತೆ, ಚರಂಡಿ ಇಲ್ಲದೆ ಮನೆಗಳ ಹೊಲಸು ನೀರು ರಸ್ತೆ ಮೇಲೆ ಹರಿದು ದುರ್ನಾತ ಬೀರುತ್ತಿದೆ.
ಸ್ವಲ್ಪ ಮಳೆಯಾದರೆ ಸಾಕು ರಸ್ತೆ ಕೆಸರು ಗದ್ದೆಯಂತಾಗುತ್ತಿದೆ. ಇದರಿಂದ ಪುಟ್ಟ ಮಕ್ಕಳು, ವೃದ್ಧರಿಗೆ ಓಡಾಡಲು ತುಂಬಾ ತೊಂದರೆ ಆಗುತ್ತಿದೆ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತು ಈ ಓಣಿಯ ಜನರಿಗೆ ಮೂಲ ಸೌಕರ್ಯ ಕಲ್ಪಿಸಿ ಸ್ಚಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಬೇಕು ಎಂದು ಸ್ಥಳೀಯ ನಿವಾಸಿಗಳು ಮನವಿ ಮಾಡಿದ್ದಾರೆ.
ಕಮಲನಗರ : ಕೆಸರು ಗದ್ದೆಯಂತಾದ ರಸ್ತೆ; ಪರದಾಟ
ಸತತವಾಗಿ ಸುರಿಯುತ್ತಿರುವ ಮಳೆಗೆ ಕಮಲನಗರ ತಾಲೂಕಿನ ಡಿಗ್ಗಿ ಗ್ರಾಮದ ಪರಿಶಿಷ್ಟ ಜಾತಿಯ ಓಣಿಯ ರಸ್ತೆ ಕೆಸರಿನ ಗದ್ದೆಯಂತಾಗಿದೆ.
ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿದ್ದರೂ ಜನರಿಗೆ ಸೂಕ್ತ ರಸ್ತೆ, ಚರಂಡಿ ಸೇರಿ ಮೂಲ ಸೌಕರ್ಯ ವ್ಯವಸ್ಥೆ ಕಲ್ಪಿಸುವಲ್ಲಿ ಗ್ರಾಮಾಡಳಿತ ವಿಫಲವಾಗಿದೆ. ಇದರಿಂದ ಸ್ಥಳೀಯ ಶಾಲಾ ಮಕ್ಕಳು, ಓಣಿಯ ನಿವಾಸಿಗಳ ಓಡಾಡಕ್ಕೆ ಸಮಸ್ಯೆ ಆಗುತ್ತಿದೆ.

ಈ ಬಗ್ಗೆ ಗ್ರಾಮ ಪಂಚಾಯತ್ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ಎಚ್ಚೆತ್ತುಕೊಂಡು ರಸ್ತೆ ದುರಸ್ತಿಗೊಳಿಸಿ ಸ್ವಚ್ಛತೆ ಕಾಪಾಡಬೇಕು ಎಂದು ಸ್ಥಳೀಯ ನಿವಾಸಿ ವಕೀಲರಾದ ಕಿರಣಕುಮಾರ್ ಆಗ್ರಹಿಸಿದ್ದಾರೆ.
ಔರಾದ್ : ಹೊಲಕ್ಕೆ ಹೋಗುವ ದಾರಿ ಯಾವುದಯ್ಯ?
ಔರಾದ ತಾಲೂಕಿನ ಗಡಿಕುಶನೂರ ಗ್ರಾಮದಿಂದ ಕೌಠಾ(ಬಿ) ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಚ್ಚಾ ರಸ್ತೆ ಭಾರೀ ಮಳೆಯಿಂದಾಗಿ ಕೆಸರು ಗದ್ದೆಯಾಗಿದೆ. ಎರಡೂ ಗ್ರಾಮದ ರೈತರು , ಕೃಷಿ ಕಾರ್ಮಿಕರು ಮಳೆ ಬಂದರೆ ಸಾಕು ಜಮೀನಿಗೆ ಹೋಗಲು ಪರದಾಡುತ್ತಿದ್ದಾರೆ.

ಹಿಂದಿನಿಂದಲೂ ಗ್ರಾಮಸ್ಥರು ಎತ್ತಿನ ಬಂಡಿ, ಟ್ರಾಕ್ಟರ್ ಸೇರಿದಂತೆ ರೈತರ ಓಡಾಟಕ್ಕೆ ಇದೊಂದೇ ದಾರಿಯಿದೆ. ಆದರೆ, ಒಮ್ಮೆಯೂ ಡಾಂಬರು ಕಾಣದ ಕಾರಣಕ್ಕೆ ರಸ್ತೆಯಲ್ಲಿ ಮೊಳಕಾಲುದ್ದ ಕೆಸರು ಸಂಗ್ರಹವಾದ ಪರಿಣಾಮ ರೈತರು ಹೊಲಗಳಿಗೆ ತೆರಳಲು ಹೈರಾಣಾಗುತ್ತಿದ್ದಾರೆ.
ಹೊಲದ ಹಾದಿ ದುರಸ್ತಿ ಬಗ್ಗೆ ಸ್ಥಳೀಯ ಶಾಸಕರಿಗೆ ಗಡಿಕುಶನೂರು ಗ್ರಾಮಸ್ಥರು ಮನವಿ ಮಾಡಿದರೂ ಅನುದಾನದ ಕೊರತೆಯ ನೆಪವೊಡ್ಡಿ ನಿರ್ಲಕ್ಷಿಸಿದ್ದಾರೆ ಎಂದು ಗ್ರಾಮದ ರೈತ ಜಗದೀಶ್ವರ ಬಿರಾದಾರ್ ಹೇಳುತ್ತಾರೆ.
– ನಿಮ್ಮ ಊರು, ನಗರ, ಪಟ್ಟಣದ ಕುಂದು ಕೊರತೆಗಳ ಪೋಟೋ, ವಿಡಿಯೋ ಮಾಹಿತಿಯನ್ನು
ಈದಿನ.ಕಾಮ್ ನ್ಯೂಸ್ ಬೀದರ್ ಸಹಾಯವಾಣಿ 9035053805 ವಾಟ್ಸಪ್ ನಂಬರ್‌ಗೆ ಕಳುಹಿಸಿ.