ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಕಲಿಸಿಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಭಾಲ್ಕಿ ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ಆಡಿಟೋರಿಯಂ ಹಾಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಪಾಲಕರ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
“ಮಕ್ಕಳ ಸರ್ವತೋಮುಖ ಬೆಳವಣಿಗೆ ಶಿಕ್ಷಣದಲ್ಲಿ ಅಡಗಿದೆ. ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ, ಸಂಸ್ಕಾರ ಮತ್ತು ಪ್ರಸಾದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆ ಕಾರಣಕ್ಕಾಗಿಯೇ 40 ಮಕ್ಕಳಿಂದ ಶುರುವಾದ ಶಿಕ್ಷಣ ಸಂಸ್ಥೆಯಲ್ಲಿಂದು ಸಾವಿರಾರೂ ವಿದ್ಯಾರ್ಥಿಗಳು ಸುಸ್ಸಜಿತ ಕಟ್ಟಡಗಳಲ್ಲಿ ಅಗತ್ಯ ಸೌಲಭ್ಯಗಳೊಂದಿಗೆ ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ರ‍್ಯಾಂಕ್ ಪಡೆಯುತ್ತಿರುವುದು ಇಲ್ಲಿಯ ಗುಣಾತ್ಮಕ ಶಿಕ್ಷಣಕ್ಕೆ ಹಿಡಿದ ಕೈಗನ್ನಡಿ. ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದ ಪರೀಕ್ಷೆಯಲ್ಲಿ ನಮ್ಮ ಸಂಸ್ಥೆಯಿಂದ ಟಾಪ್ 10 ಒಳಗೆ ರ‍್ಯಾಂಕ್ ತರುವ ಗುರಿ ಹೊಂದಲಾಗಿದೆ” ಎಂದು ತಿಳಿಸಿದರು.
ನೇತೃತ್ವ ವಹಿಸಿದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, “ಪಾಲಕರ ನಿರೀಕ್ಷೆಯಂತೆ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಪಾಲಕರು ಕೋರ್ಸ್ ಆಯ್ಕೆಗೆ ಮಕ್ಕಳಿಗೆ ಮುಕ್ತ ಅವಕಾಶ ನೀಡಬೇಕು ಇದರಿಂದ ಮಕ್ಕಳು ಆಸಕ್ತಿಯಿಂದ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಬಸವಣ್ಣನವರು ಆಚರವೇ ಸ್ವರ್ಗ ಎಂದಿದ್ದಾರೆ. ಅದರಂತೆ ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ನಡುವಳಿಕೆ, ಮನಸ್ಸು, ಶರೀರ ಉತ್ತಮವಾಗಿರಿಸಿಕೊಂಡರೇ ಸಾಧನೆಯ ಶಿಖರನೇರಲು ಸಾಧ್ಯವಾಗುತ್ತದೆ” ಎಂದು ಹೇಳಿದರು.
ಇದೇ ವೇಳೆ ಪಿಯುಸಿ, ಸಿಇಟಿ ಮತ್ತು ನೀಟ್‌ನಲ್ಲಿ ಉತ್ತಮ ರ‍್ಯಾಂಕ್ ಪಡೆದು ಕಾಲೇಜಿಗೆ ಟಾಪರ್ ಆಗಿ ಹೊರಹೊಮ್ಮಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನೀಟ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ 720ಕ್ಕೆ 691 ಅಂಕ ಪಡೆದ ಸಂಜನಾ ದಶವಂತ, ಸಿಇಟಿಯಲ್ಲಿ ರಾಜ್ಯಕ್ಕೆ 38ನೇ ರ‍್ಯಾಂಕ್ ಪಡೆದ ಮಹೇಶ ಚನ್ನಬಸವರಾಜ ಮತ್ತು ಪಿಯುಸಿಯಲ್ಲಿ 600ಕ್ಕೆ 593 ಅಂಕ ಪಡೆದ ರಕ್ಷಿತಾ ಸಂಜೀವಕುಮಾರ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.
ಹಿರಿಯ ಪತ್ರಕರ್ತ ದೇವಯ್ಯ ಗುತ್ತೇದಾರ ಮಾತನಾಡಿದರು. ಪ್ರಾಚಾರ್ಯ ಬಸವರಾಜ ಮೊಳಕೀರೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದುಬಾರಿ ಚುನಾವಣೆಗಳು, ಸಾಮಾನ್ಯರ ಸ್ಪರ್ಧೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ
ಈ ಸಂದರ್ಭದಲ್ಲಿ ನಿವೃತ್ತ ಎಂಜಿನಿಯರ್ ವಿಲಾಸ ಮಾಶೆಟ್ಟೆ, ಉಪಪ್ರಾಚಾರ್ಯ ಸಿದ್ರಾಮ ಗೊಗ್ಗಾ, ರಾಜಕುಮಾರ ಸಿರ್ಗಾಪೂರೆ, ಕಚೇರಿ ಅಧೀಕ್ಷಕ ಗಣಪತಿ ಭೂರೆ, ಉಪನ್ಯಾಸಕರಾದ ಶ್ರೀನಿವಾಸ ರೆಡ್ಡಿ, ಗೋಪಿನಾಥ, ರಾಘವೇಂದ್ರ, ಅಜಿಮೋದ್ದಿನ್, ಆಂಜನೇಯವೇಲು, ನೀರಾ ಷರೀಫ್, ಸದಾ ವಿಜಯ, ನಿರಜ್ ಶ್ರೀಕಾಂತ, ಓಂಕಾರ, ಸೋಮನಾಥ ಅಕ್ಕಣ್ಣ, ಶಶಿಧರ ಕುಲಕರ್ಣಿ, ಪರೀಕ್ಷಾ ಕಾರ್ಯದರ್ಶಿ ಶಿವಪ್ರಕಾಶ ಕುಂಬಾರ, ವಸತಿ ನಿಲಯದ ಮೇಲ್ವಿಚಾರಕ ಮನೋಹರ ಕಾಡೋದೆ, ಪ್ರೇಮಾ ಸೇರಿದಂತೆ ಹಲವರು ಇದ್ದರು. ವಿದ್ಯಾರ್ಥಿನಿ ಸಮೀಕ್ಷಾ ಗುತ್ತೇದಾರ ಸಂಗಡಿಗರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ಲಚಮ್ಮಾ ರೆಡ್ಡಿ ನಿರೂಪಿಸಿ, ವಂದಿಸಿದರು.