ದೇಶಕ್ಕೆ ಸಂವಿಧಾನ ಸಮರ್ಪಣೆಯೊಂದಿಗೆ ಪ್ರತಿಯೊಬ್ಬ ವ್ಯಕ್ತಿಗೂ ಸಮಾನತೆ ದೊರಕಿದ ದಿನವೆಂದು ವೈಧ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದರು.
ರಾಯಚೂರು ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ 75ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿದ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಜಗತ್ತಿನ ವಿವಿಧ ದೇಶಗಳಿಗೆ ತೆರಳಿ ಅಲ್ಲಿಯ ಸಂವಿಧಾನ ಅಧ್ಯಯನ ನಡೆಸಿದ ಡಾ. ಬಿ.ಆರ್. ಅಂಬೇಡ್ಕರ್ ದೇಶದ ವೈವಿಧ್ಯತೆ, ವಿವಿಧ ಭಾಷೆ, ಸಂಸ್ಕೃತಿಗಳುಳ್ಳ ದೇಶಕ್ಕೆ ವಿಶ್ವವೇ ಬೆರಗಾಗುವ ಸಂವಿಧಾನ ರಚಿಸಿ ಕೊಟ್ಟಿದ್ದಾರೆ.
ವಿವಿಧ ರಾಜರು, ಬ್ರಿಟಿಷರು ದೇಶವನ್ನಾಳಿದರು. ಪ್ರತಿಯೊಬ್ಬ ವ್ಯಕ್ತಿಯೂ ಸಂವಿಧಾನದ ಮೂಲಕ ಸ್ವಾತಂತ್ರ್ಯ, ಸಮಾನತೆಯನ್ನು ಒದಗಿಸಿಕೊಡುವ ಮೂಲಕ ಸ್ಮರಣೀಯರಾಗಿದ್ದಾರೆ. ಸಂವಿಧಾನವನ್ನು ಎಲ್ಲರೂ ಒಪ್ಪದೇ ಇದ್ದರೂ ಪ್ರತಿಯೊಂದು ಶಬ್ದಕ್ಕೂ ಅರ್ಥವನ್ನು ನೀಡುವ ಮೂಲಕ ಬಾಬಾಸಾಹೇಬರು ದೇಶದ ಪ್ರಗತಿಯ ಬುನಾದಿಯನ್ನುಹಾಕಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ ದೂರದೃಷ್ಟಿಯಿಂದ ಸಂವಿಧಾನದಲ್ಲಿಯೇ ಹಿಂದುಳಿದ ಪ್ರದೇಶದ ಅಭಿವೃದ್ದಿಗೆ ವಿಶೇಷ ಸ್ಥಾನ ಮಾನ ಒದಗಿಸುವ ಕೆಲಸ ಮಾಡಿದ್ದಾರೆ. 371ಕಲಂನಲ್ಲಿ ಅವಕಾಶ ನೀಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆಯವರ ಪ್ರಯತ್ನದ ಫಲವಾಗಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 371(ಜೆ) ದೊರಕಿದೆ. ಎಲ್ಲಾ ಪ್ರಾಥಮಿಕ, ಪ್ರೌಢಶಾಲೆಗಳ ಮಕ್ಕಳಿಗೆ ಶಿಕ್ಷಕರು 371(ಜೆ) ವಿಶೇಷ ಕಾಯ್ದೆ ಕುರಿತು ಮಾಹಿತಿ ನೀಡಬೇಕಿದೆ. ಶೈಕ್ಷಣಿಕ ಮತ್ತು ಉದ್ಯೋಗ ಮೀಸಲಾತಿ ನೀಡಿದ್ದರಿಂದ ಪ್ರತೀ ವರ್ಷ 900 ವೈದ್ಯಕೀಯ, ಸಾವಿರಾರು ಇಂಜಿನಿಯಿರಿಂಗ್ ಅಭ್ಯಾಸ ಮಾಡಲು ಈ ಭಾಗದ ವಿದ್ಯಾರ್ಥಿಗಳಿಗೆ ಅವಕಾಶ ದೊರೆತಂತಾಗಿದೆ.
ಸಿದ್ದರಾಮಯ್ಯ ನೇತೃತ್ವದಲ್ಲಿ 30 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವ ಕೆಲಸವಾಗಿದೆ. ಈ ಬಾರಿ ಖಾಲಿಯಿರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವ ಸಂಕಲ್ಪ ಮಾಡಿ ಐದು ವರ್ಷದ ಅವಧಿಯಲ್ಲಿ 50 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದರು.
ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಗೆ ಐದು ಸಾವಿರ ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಅಲ್ಲದೇ ಜನರಿಗೆ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ನುಡಿದದಂತೆ ನಡೆದಿದ್ದೇವೆ ಎಂದರು.
ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪನೆಗೆ ಕೇಂದ್ರಕ್ಕೆ ನಿಯೋಗ ತೆರಳಿ ಮನವಿಮಾಡಲಾಗಿದೆ. ಎಲ್ಲಾ ರಾಜ್ಯಗಳಿಗೆ ಏಮ್ಸ್ ನೀಡಲಾಗಿದ್ದು, ಈ ಬಾರಿ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಬೇಕೆಂದರು. ವಿಮಾನ ನಿಲ್ದಾಣಕ್ಕೆ ಪರಿಸರ ಇಲಾಖೆ ಅನುಮತಿ ಪಡೆಯುವ ಕೆಲಸ ನಡೆಯುತ್ತಿದೆ. ತುಂಗಭದ್ರ ಎಡದಂಡೆ ಕಾಲುವೆ ಕೊನೆಭಾಗಕ್ಕೆ ನೀರು ಒದಗಿಸಲ ನವಲಿ ಜಲಾಶಯ ನಿರ್ಮಾಣ ಕಾರ್ಯಕ್ಕೆ ಉಪ ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರ ಕಾರ್ಯಪ್ರವೃತ್ತರಾಗಿದ್ದಾರೆ. ರಾಜ್ಯ ಸರ್ಕಾರದ ಯೋಜನೆಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ಬರುವ ಜನರಿಗೆ ಅನಗತ್ಯ ವಿಳಂಭ ಮಾಡದೇ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ವಿವಿಧ ತಂಡಗಳಿಂದ ಗೌರವವಂಧನೆ ಸ್ವೀಕರಿಸಿದ ಸಚಿವರು, ಆರೋಗ್ಯ ಇಲಾಖೆಯಿಂದ ನೀಡಲಾಗುವ ಆಯುಷ್ಮಾನ ಭಾರತ ಯೋಜನೆ ಯಶಸ್ವಿಗೆ ಶ್ರಮಿಸಿದ ವೈದ್ಯರನ್ನು ಸನ್ಮಾನಿಸಿಗೌರವಿಸಿದರು. ಪಥ ಸಂಚಲನದಲ್ಲಿ ಪ್ರಥಮ ಸ್ಥಾನ ಪಡೆದ ಜಹೀರಬಾದ ಸರ್ಕಾರಿ ಪ್ರೌಢಶಾಲೆ ಗೈಡ್ಸ್ ತಂಡಕ್ಕೆ ಐದು ಸಾವಿರ ರೂ.ನಗದು ಬಹುಮಾನ ನೀಡಿದರು. ದ್ವಿತೀಯ ಬಹುಮಾನ ಪೊಲೀಸ್ ಕಾಲೋನಿಯ ಭಾರತ ಸೇವಾ ದಳ ಮತ್ತು ತೃತೀಯ ಸ್ಥಾನವನ್ನು ಸಿಯಾತಲಾಬ್ ಸರ್ಕಾರಿ ಪ್ರೌಢಶಾಲೆ ಗೈಡ್ಸ್ ತಂಡಕ್ಕೆ ನೀಡಲಾಯಿತು. ವಿವಿಧ ಶಾಲಾ ಮಕ್ಕಳು ಆಕರ್ಷಕ ಸಾಮೂಹಿಕ ನೃತ್ಯ ಮಾಡಿದರು.
ವೇದಿಕೆಯಲ್ಲಿ ಗ್ರಾಮೀಣ ಶಾಸಕ ದದ್ದಲ ಬಸನಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಬಸವರಾಜ ಪಾಟೀಲ್ ಇಟಗಿ, ಎ. ವಸಂತಕುಮಾರ, ಕೆ.ಶಾಂತಪ್ಪ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ, ಉಪಾಧ್ಯಕ್ಷ ಬಷೀರುದ್ದೀನ್, ಜಿಲ್ಲಾಧಿಕಾರಿ ಚಂದ್ರಶೇಖರನಾಯಕ, ಜಿ.ಪಂ ಸಿಇಒ ರಾಹುಲ ತುಕಾರಂ ಪಾಂಡ್ವೆ, ಎಸ್‌ಪಿ ನಿಖಿಲ್, ಎಡಿಸಿ ದುರಗೇಶ, ಎಸಿ ಮಹಿಬೂಬಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಮುಖಂಡರುಗಳು ಭಾಗವಹಿಸಿದ್ದರು.