ಕಲ್ಯಾಣ ಕರ್ನಾಟಕ ಭಾಗವು ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶವೆಂದು ಗುರುತಿಸಲಾಗಿದ್ದು, ಈ ಹಣೆಪಟ್ಟಿ ತೊಲಗಿಸಲು ಯುವಕರು ಸಾಧನೆ ಮಾಡುವುದು ಅತ್ಯವಶ್ಯಕ. ವಿದ್ಯಾರ್ಥಿಗಳು ನಿರಂತರ ಪರಿಶ್ರಮದಿಂದ ಓದಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಿದರೆ ಮಾತ್ರ ನಾವು ಶೈಕ್ಷಣಿಕ ಪ್ರಗತಿಯತ್ತ ಹೆಜ್ಜೆ ಇಡಬಹುದು ಎಂದು ಸಂಸದ ಕುಮಾರ ನಾಯಕರ ಅಭಿಪ್ರಾಯಪಟ್ಟರು.
ನಗರದ ಜಂಬಲದಿನ್ನಿ ಸಿದ್ದರಾಮ ರಂಗಮಂದಿರದಲ್ಲಿ ಎಸ್ ಕೆ ಎಸ್ ಗ್ರೂಪ್ ಆಫ್ ಎಜುಕೇಶನ್ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು ಎಂಬ ಕುರಿತು ಒಂದು ದಿನದ ಉಚಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಸ್ಪರ್ಧಾತ್ಮ ಪರೀಕ್ಷೆಗಳನ್ನು ಎದುರಿಸಲು ಕಾರ್ಯಾಗಾರಗಳು ಧೈರ್ಯ, ಛಲ, ಮಾರ್ಗದರ್ಶನ ಪಡೆಯುವ ಅವಕಾಶವನ್ನು ಒದಗಿಸುತ್ತವೆ. ವಿದ್ಯಾರ್ಥಿಗಳಿಗೆ ಇವು ಸ್ಪೂರ್ತಿದಾಯಕ ವೇದಿಕೆಯಾಗಬೇಕು. ಸದಾ ಮುನ್ನಡೆಯುವ ಮನೋಭಾವನೆ ಮತ್ತು ದೃಢ ಸಂಕಲ್ಪವೇ ಯಶಸ್ಸಿನ ಮಾರ್ಗ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಗಾಳಿ ಮಳೆಗೆ ಬೆಳೆ ಹಾನಿ; ಪರಿಹಾರ ನೀಡಲು ಒತ್ತಾಯ
ನಂತರ ಮಾತನಾಡಿದ ಭೌತಶಾಸ್ತ್ರದ ಜೇಮ್ಸ್ ಬಾಂಡ್ ಖ್ಯಾತಿಯ ನೀಲಮಣಿ ಶ್ರೀವಾಸ್ತವ್, “ವಿದ್ಯಾರ್ಥಿಗಳು ಉನ್ನತ ದರ್ಜೆಯ ಕನಸು ಕಾಣಬೇಕು. ಕನಸಿನ ಪ್ರಕಾರ ಗುರಿ ಸಾಧಿಸಲು ಸಾಧನೆ ಮಾಡಬೇಕು. ಸಾಧಿಸುವ ಛಲ ಪ್ರತಿಯೊಬ್ಬರಲ್ಲಿಯೂ ಮೂಡಬೇಕಿದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಯಶಸ್ಸು ದೊರೆಯುತ್ತದೆ” ಎಂದರು.
ಕಾರ್ಯಕ್ರಮದಲ್ಲಿ ರಾಯಚೂರು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಮುಖ್ಯಸ್ಥ ಪ್ರೊ. ಹರೀಶ ಕುಮಾರ ಸರದಾನಾ, ಎಸ್‌ಕೆಇಎಸ್ ಪ್ಯಾರಾಮೆಡಿಕಲ್, ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಬಾಬುರಾವ್ ಶೇಗುಣಸಿ ಸೇರಿದಂತೆ ಇತರರಿದ್ದರು.
