ರಾಯಚೂರು ನಗರಸಭೆಯ ಎಲೆಕ್ಟ್ರಿಕಲ್ ವಿಭಾಗದ ಕಾರ್ಯವನ್ನು ಸ್ಥಗಿತಗೊಳಿಸಿ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರಸೇವಾ ನೌಕರರ ಸಂಘ ಪ್ರತಿಭಟನೆ ನಡೆಸಿದೆ.
ಗುತ್ತಿಗೆದಾರರ ನಡೆಯನ್ನು ಖಂಡಿಸಿ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಸಂಘಟನೆಗಳ ಕಾರ್ಯಕರ್ತರು ಮತ್ತು ಕೆಲಸದಿಂದ ವಜಾಗೊಂಡ ನೌಕರರು ಪ್ರತಿಭಟನೆ ನಡೆಸಿದ್ದಾರೆ. “ನಗರಸಭೆ ವ್ಯಾಪ್ತಿಯಲ್ಲಿರುವ ವಿದ್ಯುತ್ ಕಂಬಗಳ ಸಂಖ್ಯೆಗೆ ಅನುಗುಣವಾಗಿ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸಬೇಕು. ಜುಲೈ12 ರಿಂದ ನಗರಸಭೆ ಎಲೆಕ್ಟ್ರಿಕಲ್ ವಿಭಾಗದ ಕೆಲಸವನ್ನು ದುರುದ್ದೇಶದಿಂದ ಸ್ಥಗಿತಗೊಳಿಸಲಾಗಿದೆ. ನೌಕರರನ್ನು ಕೆಲಸದಿಂದ ವಜಾಗೊಳಿಸಿದ ಹೆಚ್‌ಕೆಎಲ್ ಎಲೆಕ್ಟಿಕಲ್ಸ್ ಗುತ್ತಿಗೆದಾರ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
“ಎಲೆಕ್ಟಿಕಲ್ ವಿಭಾಗದ ಕಾರ್ಮಿಕರಿಗೆ ಏಪ್ರಿಲ್ ತಿಂಗಳಿನಿಂದ ಜಾರಿಗೆ ಬರುವಂತೆ ಕನಿಷ್ಠ ವೇತನ ನಿಗದಿ ಮಾಡಬೇಕು. ಮೇ, ಜೂನ್ ತಿಂಗಳಿನ ವೇತನ ಪಾವತಿ ಬಾಕಿ ಉಳಿದಿದ್ದು, ಕೂಡಲೇ ಪಾವತಿಸಬೇಕು. ಕಾರ್ಮಿಕರಿಗೆ ಪಿಎಫ್ ಮತ್ತು ಇಎಸ್‌ಐ ಸೌಲಭ್ಯಗಳನ್ನು ಒದಗಿಸಬೇಕು” ಎಂದು ಆಗ್ರಹಿಸಿದ್ದಾರೆ.
“ಕಾರ್ಮಿಕರಿಗೆ ಸಮವಸ್ತ್ರ, ಲೆದರ್ ಕೋಟ್, ಲೆದರ್ ಗ್ಲೋಸ್, ಬೂಟ್ ಮತ್ತು ಸುರಕ್ಷಿತ ಸಲಕರಣೆಗಳನ್ನು ಒದಗಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡ ಎಸ್ ಮಾರೆಪ್ಪ, ಕಾರ್ಯಾಧ್ಯಕ್ಷ ಬಿ.ಎ ಕೇಶವಮೂರ್ತಿ ಸೇರಿದಂತೆ ಹಲವು ಕಾರ್ಮಿಕರು ಭಾಗವಹಿಸಿದ್ದರು.