ರಾಯಚೂರು ನಗರಕ್ಕೆ ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡುವುದಾಗಿ ನಗರಸಭೆ ಪೌರಾಯುಕ್ತರು ಹೇಳಿದ್ದಾರೆ. ಅವರ ನಿರ್ಧಾರವು ಜನರು ನೀರಿಯಾಗಿ ಪರದಾಡುವಂತೆ ಮಾಡಿದೆ. ಪ್ರತಿ ದಿನ ಸಮರ್ಪಕವಾಗಿ ನೀರು ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿ ಅಂಬೇಡ್ಕರ್ ಸೇನೆ ಕಾರ್ಯಕರ್ತರು ಮತ್ತು ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಎದುರು ಖಾಲಿ ಕೊಡ ಹಿಡಿದು, ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ನಗರಸಭೆ ಪೌರಾಯುಕ್ತರ ವಿರುದ್ಧ ಘೋಷಣೆ ಕೂಗಿದ್ದಾರೆ.
“ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಎರಡು ನದಿಗಳಿದ್ದರೂ ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸುವಲ್ಲಿ ನಗರಸಭೆ ಪೌರಾಯುಕ್ತರು ವಿಫಲರಾಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಜಿಲ್ಲಾಧಿಕಾರಿಗಳು ಕೂಡಲೇ ಸಭೆ ನಡೆಸಿ ನಗರಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು. ನಗರದ 35 ವಾರ್ಡ್‌ಗಳಿಗೆ ಕುಡಿಯುವ ನೀರು ಸರಬರಾಜು ಆಗುವಂತೆ ಕ್ರಮ ವಹಿಸಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ವಿಶ್ವನಾಥ ಪಟ್ಟಿ, ಮಹೇಶ, ಕುಮಾರಸ್ವಾಮಿ, ಸೇರಿದಂತೆ ಅನೇಕರು ಇದ್ದರು.
ವರದಿ : ಹಫೀಜುಲ್ಲ