ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕೃಷಿ ಉಪ ನಿರ್ದೇಶಕರ-2 ಕಚೇರಿ ಸಿಂಧನೂರಿಗೆ ಸ್ಥಳಾಂತರ ಮಾಡುವಂತೆ ಸರ್ಕಾರದ ಅಧೀನ ಕಾರ್ಯದರ್ಶಿ ಕೃಷಿ ಇಲಾಖೆಯವರಿಗೆ ಪತ್ರ ಬರೆದಿದ್ದಾರೆ. ತಾಲೂಕಿನ ರೈತರಿಗೆ ಹಾಗೂ ಲಿಂಗಸುಗೂರು ಜಿಲ್ಲೆಯಾಗಬೇಕೆಂಬ ಕನಸಿಗೆ ತಣ್ಣೀರೆರಚಿದಂತಾಗಿದ್ದು, ಸಾರ್ವಜನಿಕ ವಲಯದಿಂದ ವಿರೋಧ ವ್ಯಕ್ತವಾಗಿದೆ.
ಇಷ್ಟೆಲ್ಲ ಬೆಳವಣಿಗೆಯಾಗಿದ್ದರೂ ಲಿಂಗಸುಗೂರು ತಾಲೂಕಿನ ಜನಪ್ರತಿನಿಧಿಗಳು ಮಾತ್ರ ಇದ್ಯಾವುದೂ ತಮಗೆ ಸಂಬಂದವಿಲ್ಲದಂತೆ ಕಣ್ಮುಚ್ಚಿಕೊಂಡು ಕುಳಿತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬ್ರಿಟಿಷರ ಕಾಲದಲ್ಲಿ ಜಿಲ್ಲೆಯಾಗಿದ್ದ ಛಾವಣಿ, ಸ್ವಾತ್ರಂತ್ಯದ ನಂತರ ಜಿಲ್ಲಾ ಕೇಂದ್ರವನ್ನು ರಾಯಚೂರಿಗೆ ಸ್ಥಳಾಂತರ ಮಾಡಿ ಉಪ ವಿಭಾಗವಾಗಿ ಮಾರ್ಪಡು ಮಾಡಲಾಗಿತ್ತು. ಅಂದಿನಿಂದ ಇಂದಿನವರೆಗೆ ಹಲವಾರು ಕಚೇರಿಗಳನ್ನು ಸಿಂಧನೂರಿಗೆ ಸ್ಥಳಾಂತರ ಮಾಡುವ ಹುನ್ನಾರ ನಡೆಯುತ್ತಿದೆ ಎಂಬ ಆರೋಪಗಳು ಚಾಲ್ತಿಯಲ್ಲಿರುವಾಗಲೇ, ಈಗ ಗಾಯದ ಮೇಲೆ ಬರೆ ಎಂಬಂತೆ ಕೃಷಿ ಉಪ ನಿರ್ದೇಶಕರ-2 ಕಚೇರಿಯ ಸ್ಥಳಾಂತರಕ್ಕೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಕೃಷಿ ಇಲಾಖೆಯವರು ಹುದ್ದೆಗಳ ಸಹಿತ ಕಚೇರಿಯನ್ನು ಸ್ಥಳಾಂತರ ಮಾಡಬೇಕೆಂದು ಪತ್ರ ಬರೆದಿದ್ದಾರೆ.
ಸುಳ್ಳು ಮಾಹಿತಿ ನೀಡಿದ ಅಧಿಕಾರಿಗಳು!
ಸಿಂಧನೂರು ನಗರ ಲಿಂಗಸುಗೂರು ನಗರದಿಂದ ಕೇವಲ 55 ಕಿ.ಮೀ ದೂರದಲ್ಲಿದೆ. ಆದರೆ 90 ಕಿ.ಮೀ. ದೂರವಿದೆ ಎಂದು ಅಧಿಕಾರಿಗಳು ಸುಳ್ಳು ಮಾಹಿತಿಯನ್ನು ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ಅಲ್ಲದೇ, ಮಸ್ಕಿ ತಾಲೂಕು ಘೋಷಣೆ ಆಗುವ ಮುಂಚೆ ಲಿಂಗಸುಗೂರು ತಾಲೂಕಿನ ಪಟ್ಟಣವಾಗಿತ್ತು. ಮಸ್ಕಿಯ ಕೆಲವು ಕಚೇರಿಗಳು ಲಿಂಗಸುಗೂರಿನಿಂದ ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿಯೂ ಕೃಷಿ ಇಲಾಖೆ ಕಚೇರಿ ಕೂಡ ಲಿಂಗಸುಗೂರ ಕಚೇರಿಯಿಂದ ಕಾರ್ಯ ನಿರ್ವಹಿಸುತ್ತಿವೆ.
ಲಿಂಗಸುಗೂರು ಮಸ್ಕಿ ಸೇರಿ ಸಾಗುವಳಿ ಕ್ಷೇತ್ರ 180,805 ಹೇಕ್ಟರ್ ಪ್ರದೇಶವಾಗಿದೆ. ಇನ್ನು ನೀರಾವರಿ 38,893 ಹೆಕ್ಟೇರ್ ಹಾಗೂ ಖುಷ್ಕಿ 141,912 ಹೆಕ್ಟೇರ್ ಪ್ರದೇಶವಿದೆ. ಆದರೆ ಸಿಂಧನೂರಿಗೆ ಸ್ಥಳಾಂತರಿಸಬೇಕೆಂಬ ಉದ್ದೇಶದಿಂದ ಲಿಂಗಸುಗೂರು ಮತ್ತು ಮಸ್ಕಿ ಪ್ರತ್ಯೇಕವಾಗಿ ತೋರಿಸಿ, ಸಿಂಧನೂರಿನಲ್ಲಿ ಹೆಚ್ಚು ಕೃಷಿ ಪ್ರದೇಶವಿದೆ ಎಂದು ಸುಳ್ಳು ಮಾಹಿತಿ ನೀಡಿ ಕೃಷಿ ನಿರ್ದೇಶಕ ಕಚೇರಿಯನ್ನು ಅಧಿಕಾರಿಗಳು ಸ್ಥಳಾಂತರಿಸಬೇಕು ಎಂದು ಹುನ್ನಾರ ಮಾಡಿದ್ದಾರೆ. ಇದಕ್ಕೆ ಮೇಲಾಧಿಕಾರಿಗಳು ಸಾಥ್ ನೀಡಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದ್ದು, ಇಷ್ಟೆಲ್ಲ ಬೆಳವಣಿಗೆ ನಡೆದಿದ್ದರೂ ಕ್ಯಾರೇ ಎನ್ನದ ಜನಪ್ರತಿನಿಧಿಗಳ ವಿರುದ್ಧ ಲಿಂಗಸುಗೂರಿನ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ದಕ್ಷಿಣ ಕನ್ನಡ | ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿತ: ನಾಲ್ವರು ಮಕ್ಕಳಿಗೆ ಗಾಯ
ಲಿಂಗಸುಗೂರು ಕ್ಷೇತ್ರ ರಾಜಕೀಯ ಕಾರ್ಖಾನೆ ಎಂಬ ಹೆಸರು ಪಡೆದಿದೆ. ಘಟಾನುಘಟಿ ನಾಯಕರು ಈ ಕ್ಷೇತ್ರದಿಂದಲೇ ಆಯ್ಕೆಯಾಗಿದ್ದಾರೆ. ಹಾಲಿ ಶಾಸಕರಾದ ಮಾನಪ್ಪ ವಜ್ಜಲ್, ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ, ಮಾಜಿ ಶಾಸಕ ಡಿಎಸ್ ಹೊಲಗೇರಿಯವರು ಈ ಕ್ಷೇತ್ರದಲ್ಲಿ ಇದ್ದಾರೋ ಅಥವಾ ಇಲ್ಲವೋ ಎಂಬ ಸಂಶಯ ಮೂಡುತ್ತಿದೆ. ಯಾಕೆಂದರೆ ಹಲವಾರು ಕಚೇರಿಗಳು ಸಿಂಧನೂರಿಗೆ ಸ್ಥಳಾಂತರಗೊಂಡರೂ, ಇವರಾರು ಮಾತಾಡದೇ ಮೌನವಾಗಿ ಕಣ್ಮುಚ್ಚಿಕೊಂಡು ಕುಳಿತಿದ್ದಾರೆ. ಕಾಣುತ್ತಿಲ್ಲವೇ ಎಂದು ಸ್ಥಳೀಯ ಮುಖಂಡರು ಪ್ರಶ್ನಿಸಿದ್ದಾರೆ.

ತಾಲೂಕಿನಲ್ಲಿ ಏನು ನಡೆಯುತ್ತಿದೆ ಎಂಬ ಪರಿಜ್ಞಾನ ಇವರಿಗೆ ಇದೆಯೋ ಇಲ್ಲವೋ ತಿಳಿಯದಂತಾಗಿದೆ. ಈ ಕ್ಷೇತ್ರದ ಜನತೆ ಋಣ ತೀರಿಸುವ ಕಾಲ ಸನ್ನಿಹಿತವಾಗಿದೆ. ಕೂಡಲೇ ಹಾಲಿ ಮಾಜಿ ಶಾಸಕರುಗಳು ಎಚ್ಚೆತ್ತುಕೊಂಡು ತಾಲೂಕಿನಿಂದ ಸ್ಥಳಾಂತರವಾಗುತ್ತಿರುವ ಕೃಷಿ ಉಪ ನಿರ್ದೇಶಕರ ಕಚೇರಿಯನ್ನು ಉಳಿಸಿಕೊಳ್ಳುತ್ತಾರೋ ಎಂದು ಕಾದು ನೋಡಬೇಕಿದೆ. ಈ ನಡುವೆ ಹಲವಾರು ಸಂಘಟನೆಗಳು ಕೂಡ, ಸ್ಥಳಾಂತರ ಮಾಡದಂತೆ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದೆ.
