ನೂತನ ಅರಕೇರಾ ತಾಲ್ಲೂಕಿಗೆ ರಾಮದುರ್ಗ, ಪಲಕನಮರಡಿ, ಮುಂಡರಗಿ, ಹೋಸರು, ಸಿದ್ದಾಪೂರು, ಗಾಣಧಾಳ, ಮಲದಕಲ್ ಸೇರಿ ಹಲವು ಗ್ರಾಮಗಳನ್ನು ಅವೈಜ್ಞಾನಿಕವಾಗಿ ಸೇರಿಸಲಾಗಿದೆ. ಕೂಡಲೇ ರದ್ದುಪಡಿಸಬೇಕು ಎಂದು ಸಂಬಂಧಿತ ಗ್ರಾಮದ ಮುಖಂಡರು ಜಿಲ್ಲಾಧಿಕಾರಿ ನಿತೀಶ್ ಕೆ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮಾಜಿ ಸಚಿವ ಶಿವನಗೌಡ ನಾಯಕ ಅವರು ಅಧಿಕಾರ ದುರ್ಬಳಕೆ ಮಾಡಿ, ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದು, ಸುಳ್ಳು ದಾಖಲೆಗಳ ಆಧಾರದಲ್ಲಿ ಮತ್ತು ಅನಿಯಮಿತ ಅಂತರ ನೀಡುವ ಮೂಲಕ ಗ್ರಾಮಗಳನ್ನು ಅರಕೇರಾ ತಾಲ್ಲೂಕಿಗೆ ಸೇರಿಸಿದ್ದಾರೆ. ಇದರಿಂದ ಗ್ರಾಮದ ಜನರಿಗೆ ಸಮಸ್ಯೆ ಎದುರಾಗಿದೆಂದು ಗ್ರಾಮದ ಮುಖಂಡರು ಆರೋಪಿಸಿದರು.
ಸಾರ್ವಜನಿಕ ಚರ್ಚೆಯಿಲ್ಲದೆ ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ಪಾಲಿಸದೆ ತೀವ್ರ ಆತುರದಲ್ಲಿ ಅರಕೇರಾ ತಾಲ್ಲೂಕಿಗೆ ಸೇರಿಸಲಾಗಿದೆ. ಹೆಸರಿಸಿರುವ ಗ್ರಾಮಗಳಿಂದ ಅರಕೇರಾ ತಾಲ್ಲೂಕಿಗೆ ತೆರಳಬೇಕಾದರೆ ಸರಿಸುಮಾರು 60 ಕಿಮೀ ಅಂತರವಾಗಿದೆ ಹಾಗೂ ನೂತನ ತಾಲ್ಲೂಕು ಕೇಂದ್ರದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದೇ ರೈತರು ಪಹಣಿ, ಇನ್ನಿತರ ಕೆಲಸಗಳಿಗೆ ಅಲೆದಾಡುವಂತಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದರು.
ಗ್ರಾಮಗಳಿಂದ ತಾಲ್ಲೂಕಿಗೆ ಹೋಗಲು ಸರಿಯಾಗಿ ಸಾರಿಗೆ ವ್ಯವಸ್ಥೆಯಿಲ್ಲದೆ ಬಸ್ ನಿಲ್ದಾಣದಲ್ಲೇ ಕಾಲ ಕಳೆಯುವಂತಾಗಿದೆ. ಈ ಗ್ರಾಮ ಪಂಚಾಯತ ವ್ಯಾಪ್ತಿಯ ಹಳ್ಳಿಗಳನ್ನು ನೂತನ ಅರಕೇರಾ ತಾಲೂಕಿನಿಂದ ಬೇರ್ಪಡಿಸಿ ಈ ಕೂಡಲೇ ಮೊದಲಿನಂತೆ ದೇವದುರ್ಗ ತಾಲೂಕಿನಲ್ಲಿ ಮುಂದುವರೆಸಬೇಕು ಎಂದು ಒತ್ತಾಯಿಸಿದರು.
ಹೀಗೆ ನಿರ್ಲಕ್ಷ್ಯ ಮುಂದುವರಿದರೆ ಎಲ್ಲಾ ಗ್ರಾಮದ ಜನರು ಸೇರಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಆಟೋ ಪಲ್ಟಿ ಹಲವರಿಗೆ ಗಾಯ
ಈ ಸಂದರ್ಭದಲ್ಲಿ ಮುಖಂಡರಾದ ಸಿದ್ದನಗೌಡ ಮೂಡಲಗುಂಡ, ಶರಣಗೌಡ ಸುಂಕೇಶ್ವರಹಾಳ, ಶಿವು ಪಾಟೀಲ್ ಗಾಣಧಾಳ, ಅಯ್ಯನಗೌಡ, ಶಾಂತಪ್ಪ, ಇಸಾಕ್ ಮೇಸ್ತೀ ರಾಮದುರ್ಗ, ಆಂಜನೇಯ ಬಡಿಗೇರ, ಶಂಕರಲಿಂಗ, ಶಾಂತಪ್ಪ ಗಾಣದಾಳ, ಮೌನೇಶ ಗಾಣಧಾಳ, ಶಿವರಾಜ ಮುಂಡರಗಿ, ಸೇರಿದಂತೆ ವಿವಿಧ ಗ್ರಾಮ ಪಂಚಾಯತಿ ಮುಖಂಡರು, ರೈತರು ಉಪಸ್ಥಿತರಿದ್ದರು
.
