ವಿಜಯಪುರ ನಗರದಲ್ಲಿ ಕಾರ್ಮಿಕರ ಮೇಲೆ ನಡೆದ ದೌರ್ಜನ್ಯ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಹದ್ದು. ಘಟನೆಗೆ ಕಾರಣರಾದ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಿ ಗಡಿಪಾರು ಮಾಡಬೇಕು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ದೇವದುರ್ಗ ತಹಶೀಲ್ದಾರ್ ಮುಖಾಂತರ ಗೃಹ ಸಚಿವ ಪರಮೇಶ್ವರ್ ಅವರಿಗೆ ಹಕ್ಕೊತ್ತಾಯ ಸಲ್ಲಿಸಲಾಯಿತು.
ಜಿಲ್ಲೆಯ ಗಾಂಧಿನಗರ ಬಳಿ ಇರುವ ಇಟ್ಟಿಗೆ ಭಟ್ಟಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮೂವರು ಅಮಾಯಕ ಕಾರ್ಮಿಕರನ್ನು ಮನಬಂದಂತೆ ಕಟ್ಟಿಹಾಕಿ ಥಳಿಸಲಾಗಿದೆ. ಭಟ್ಟಿ ಮಾಲೀಕ ಖೇಮು ರಾಠೋಡ ಹಾಗೂ ಆತನ ಬೆಂಬಲಿಗರಿಂದ ಈ ಕೃತ್ಯ ಎಸಗಲಾಗಿದೆ. ಕೂಡಲೇ ಸರ್ಕಾರ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ಕಾರ್ಮಿಕರಿಗೆ ಭದ್ರತೆ ಒದಗಿಸಬೇಕು ಎಂದು ಸಮಿತಿಯ ಮುಖಂಡರು ಒತ್ತಾಯಿಸಿದರು.
ಸದಾಶಿವ ಮಾದರ, ಸದಾಶಿವ ಬಬಲಾದಿ, ಉಮೇಶ ಮಾದರ ಎಂಬ ಮೂವರು ಕಾರ್ಮಿಕರು ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಹೋಗಿ ವಾಪಸ್ ಬರುವುದು ವಿಳಂಬವಾದ ಹಿನ್ನಲೆ ಮಾಲೀಕ ಕೋಪಗೊಂಡು ಕಾರ್ಮಿಕರ ಕಾಲುಗಳನ್ನು ಕಟ್ಟಿಹಾಕಿ ಪೈಪ್‌ನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ ವಿಡಿಯೋ ನೋಡಿ ಇಡೀ ರಾಜ್ಯವೇ ಬೆಚ್ಚಿ ಬಿದ್ದರೂ ಜಿಲ್ಲೆಯ ಸಂಸದ ರಮೇಶ್ ಜಿಗಜಿಣಿಗಿ ಪ್ರಕರಣ ಕುರಿತು ಹೇಳಿಕೆ ನೀಡದಿರುವುದು ಖಂಡನೀಯ. ಬಿಜಾಪುರ ಜಿಲ್ಲೆ ಉಸ್ತುವಾರಿ ಸಚಿವ ಎಮ್ ಬಿ ಪಾಟೀಲ್ ಈ ಘಟನೆ ಬಗ್ಗೆ ಕ್ರಮ ವಹಿಸಬೇಕು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 78 ವರ್ಷ ಗತಿಸಿದರೂ ಇನ್ನುವರೆಗೆ ಶೋಷಿತರ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆಯುತ್ತಾಲೇ ಇವೆ. ತಕ್ಷಣ ಕಾರ್ಮಿಕರನ್ನು ಭೇಟಿ ಮಾಡಿ ಆರೋಪಿಗಳಿಗೆ ಕಾನೂನು ಶಿಕ್ಷೆ ವಿಧಿಸಬೇಕು ಎಂದರು.
ಘಟನೆ ಆದಾಗ ಆ ವ್ಯಾಪ್ತಿಗೆ ಬರುವ ಸಿ ಪಿ ಐ ಮಲ್ಲಯ್ಯ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿ ತೋರಿದ್ದು ಅವರನ್ನು ತಕ್ಷಣ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಟೈರ್ ಸ್ಪೋಟದಿಂದ ಕ್ರೂಸರ್ ಪಲ್ಟಿ : ಮೂವರು ವಿದ್ಯಾರ್ಥಿಗಳು ಸೇರಿ ನಾಲ್ವರ ಸಾವು
ಈ ವೇಳೆ ಎಂಆರ್‌ಎಚ್‌ಎಸ್ ಜಿಲ್ಲಾಧ್ಯಕ್ಷ ಹನುಮಂತ ಮನ್ನಾಪುರಿ, ಲಿಂಗಪ್ಪ ಗೌಡೂರು, ಬಸವರಾಜ್ ಜಯಂ ವೆಂಕಟೇಶ್ ಜಾಲಹಳ್ಳಿ, ಕ್ರಾಂತಿ ಕುಮಾರ್, ಅಬ್ರಹಾಂ ಕಮಲ ದಿನ್ನಿ, ರವಿಚಂದ್ರ ಗುಂಟ್ರಾಳ, ಲಕ್ಷ್ಮಣ್ ಮಸರಕಲ್, ಕರಿಯಪ್ಪ ಮಸರಕಲ್, ಮಹದೇವ್ ಗೋರಂಪೇಟೆ ಇನ್ನಿತರರು ಹಾಜರಿದ್ದರು.
