ದೇಶದ ಅಭಿವೃದ್ಧಿ ರಕ್ಷಣೆಗೆ 140 ಕೋಟಿ ಮಂದಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಬಯಸಿದ್ದಾರೆ. ಸಮಗ್ರ ಅಭಿವೃದ್ದಿ ದೃಷ್ಟಿಯಿಂದ ಬಿಜೆಪಿ ಸರ್ಕಾರ ರಚಿಸಲು ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸಬೇಕು ಎಂದು ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಹೇಳಿದರು.
ರಾಯಚೂರು ನಗರದಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರನಾಯಕ ನಾಮಪತ್ರ ಸಲ್ಲಿಸಲು ಆಯೋಜಿಸಲಾಗಿದ್ದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
“ಬಿಜೆಪಿ ಅಭ್ಯರ್ಥಿಗಳು ಜಯಸಾಧಿಸಿದರೆ ನರೇಂದ್ರ ಮೋದಿ ಕೈ ಬಲಪಡಿಸಿದಂತೆ. ಪಕ್ಷದ ಅಭ್ಯರ್ಥಿ ರಾಜಾ ಅಮರೇಶ್ವರನಾಯಕ ಕಡಿಮೆ ಮಾತಾಡಿ ಹೆಚ್ಚು ಕೆಲಸ ಮಾಡುತ್ತಾರೆ. ಕಾಂಗ್ರೆಸ್ನವರು ಅತಿಹೆಚ್ಚು ಸ್ಥಾನಪಡೆಯುವ ಭ್ರಮೆಯಲ್ಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮೈಸೂರು ಗೆದ್ದರೆ ಸಾಕು ಎನ್ನುವ ಭಾವನೆ ಬಂದಿದೆ. ಡಿ ಕೆ ಶಿವುಕುಮಾರ್ ಅವರು ತಮ್ಮ ಸುರೇಶ್ ಗೆದ್ದರೆ ಸಾಕು ಎನ್ನುತ್ತಿದ್ದಾರೆ. ಜನರು ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದವರೇ ಮೋದಿ ಮೋದಿ ಎನ್ನುತ್ತಿದ್ದಾರೆ” ಎಂದರು.
“ರಾಯಚೂರು ಅಭಿವೃದ್ಧಿಗೆ ಏಮ್ಸ್ ಬರಬೇಕೆಂದರೆ ಅಮರೇಶ್ವರ ನಾಯಕ ಅವರನ್ನು ಗೆಲ್ಲಿಸಿ. ಎಲ್ಲ ನಾಯಕರು ಸೇರಿ ಅಭಿವೃದ್ಧಿ ಮಾಡುತ್ತೇವೆ” ಎಂದು ಹೆಳಿದರು.
ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, “ದೇಶ ಕಟ್ಟುವ ಚುನಾವಣೆ ಬಂದಿದೆ. ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ದಲಿತ ಸಮುದಾಯವನ್ನು ಜೀತಕ್ಕೆ ಇಟ್ಟುಕೊಂಡಿದೆ.
ಕಾಂಗ್ರೆಸ್ಗೆ ಜೋತು ಬಿದ್ದ ಪರಿಶಿಷ್ಟ ಜಾತಿ, ಪಂಗಡದ ಜನರಿಗೆ ಇದೀಗ ಜಾಗೃತಿ ಬಂದಿದೆ.
ದಲಿತರಿಗೆ ಅಲ್ಲಿ ಭವಿಷ್ಯ ಇಲ್ಲ ಕಾಂಗ್ರೆಸ್ಗೆ ಹೋಗಬೇಡಿ” ಎಂದರು.
“ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿದೆ. 60 ವರ್ಷ ಆಡಳಿತ ನಡೆಸಿದೆ. ದಲಿತರ ಬಗ್ಗೆ ಮಾತಾಡುತ್ತಾರೆ. ಆದರೆ ಪ್ರಧಾನಿ ಹೆಸರು ಘೋಷಣೆ ಶಕ್ತಿ ಇಲ್ಲ. ಪ್ರಧಾನ ಮಂತ್ರಿ ಅಭ್ಯರ್ಥಿ ಹೆಸರು ಇಲ್ಲ. ಸಿದ್ದರಾಮಯ್ಯ ಅವರು ಮಲ್ಲಿಕಾರ್ಜುನ ಖರ್ಗೆ ಒಪ್ಪಿಲ್ಲ, ರಾಹುಲ್ ಗಾಂಧಿ ಅವರನ್ನು ಒಪ್ಪಿದ್ದಾರೆ, ಸಂವಿಧಾನ ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಮೀಸಲಾತಿ ತೆಗೆಯುತ್ತಾರೆಂದು ಹೇಳಿದ್ದು, ನಾವು ತೆಗೆಯೋದಿಲ್ಲ” ಎಂದರು.
ವಿಧಾನ ಪರಿಷತ್ ಸದಸ್ಯ ಎನ್ ಶಂಕ್ರಪ್ಪ ಮಾತನಾಡಿ, “ಲೋಕಸಭಾ ಚುನಾವಣೆಯಲ್ಲಿ ಮಹಾಭಾರತದ ಯುದ್ಧ ನಡೆಯುತ್ತಿದೆ. ನಾವು ಪಾಂಡವರು ಅವರು ಕೌರವರು, ನಮ್ಮಿಬ್ಬರ ಮಧ್ಯೆ ಯುದ್ದ ನಡೆಯುತ್ತಿದೆ. ದುಷ್ಠ ಶಕ್ತಿ ಹತ್ತಿಕ್ಕಲು ಬಿಜೆಪಿಯ ಪ್ರಧಾನಿ ನರೇಂದ್ರ ಮೋದಿ ಅವರ ಕಹಳೆ ಮೊಳಗಿಸದ್ದಾರೆ, ಸಂಸದರಿಗೆ ಮತ ಹಾಕಿದರೆ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ಜೆಡಿಎಸ್ ಜತೆಗೆ ಸೇರಿ 3 ಲಕ್ಷ ಮತಗಳ ಅಂತರದಿಂದ ಜಯ ಗಳಿಸಲು ಕಾರ್ಯಕರ್ತರು, ಜನರು ಮುಂದಾಗಬೇಕು” ಎಂದರು.
ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಮಾತನಾಡಿ, “ಚುನಾವಣೆಯಲ್ಲಿ ಪ್ರತಿಯೊಬ್ಬರೂ ಬೆಂಬಲಿಸಿ ಬಿಜೆಪಿಗೆ ಆರ್ಶೀವಾದ ಮಾಡಬೇಕು. ಕೇಂದ್ರದ ಯೋಜನೆಗಳನ್ನು, ಜಿಲ್ಲೆಯಲ್ಲಿ ಅನುಷ್ಠಾನ ಮಾಡಿದ್ದು, ಪ್ರತಿಯೊಬ್ಬರೂ ಮತ ಹಾಕಬೇಕು. ಅಭಿವೃದ್ಧಿ ಕೆಲಸ ಮಾಡಿದ್ದು, ಮುಂದಿನ ದಿನಗಳಲ್ಲಿ ಅನೇಕ ಜನಪರ ಕೆಲಸ ಮಾಡಲು ಭರವಸೆ ನೀಡುತ್ತೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಒಕ್ಕಲಿಗರು ಒಗ್ಗೂಡಿ ಮುದ್ದಹನುಮೇಗೌಡರನ್ನು ಗೆಲ್ಲಿಸಬೇಕು: ಶಾಸಕ ಟಿ ಬಿ ಜಯಚಂದ್ರ
“ಜೆಡಿಎಸ್ ಬೆಂಬಲಿಸಿದ್ದು, ಜೊತೆಗೆಯಾಗಿದ್ದೇವೆ. ಒಟ್ಟಾಗಿ ಕೆಲಸ ಮಾಡಬೇಕಿದೆ. ಜೆಡಿಎಸ್ ಪ್ರಬಲವಾಗಿದೆ. ಹಿಂದಿನ ಚುನಾವಣೆಗಿಂತ ಈ ಬಾರಿ ಹೆಚ್ಚು ಶಕ್ತಿ ನೀಡಿದ್ದಾರೆ” ಎಂದರು.
ವೇದಿಕೆಯಲ್ಲಿ ಶಿವನಗೌಡ ನಾಯಕ್, ಮಹಾಂತೇಶ ಪಾಟೀಲ್ ಅತ್ತನೂರು, ಮಾಜಿ ಶಾಸಕ ತಿಪ್ಪರಾಜ ಹವಲ್ದಾರ, ಎ ಪಾಪಾರೆಡ್ಡಿ, ರಾಜಾ ವೆಂಟಕಪ್ಪ ನಾಯಕ, ಗಂಗಾಧರ ನಾಯಕ, ಜೆ ಶರಣಪ್ಪಗೌಡ, ಕೆ ಎಂ ಪಾಟೀಲ್, ಶರಣಮ್ಮ ಕಾಮರೆಡ್ಡಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಘಟಕಗಳ ಪದಾಧಿಕಾರಿಗಳು, ಪಕ್ಷದ ಮುಖಂಡರು ಇದ್ದರು.
ವರದಿ : ಹಫೀಜುಲ್ಲ
