ರಾಯಚೂರು ತಾಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಅನುಷ್ಠಾನ ಮಾಡಲಾಗುತ್ತಿದ್ದ ನಾಲಾ ಅಭಿವೃದ್ಧಿ ಕೆಲಸಗಳಲ್ಲಿ ಕೂಲಿಕಾರರು ಇಲ್ಲದೆ ಬೋಗಸ್ ಹಾಜರಾತಿ ಮಾಡುತ್ತಿರುವ ಜೆಇ, ಪಿಡಿಓ ಮೇಲೆ ಕ್ರಮಕ್ಕೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆಯಿಂದ ತಾಲೂಕು ಪಂಚಾಯತ್ ಸಹಾಯ ನಿರ್ದೇಶಕ ಅಣ್ಣರಾವ್ ಅವರಿಗೆ ಮನವಿ ಸಲ್ಲಿಸಲಾಯಿತು.
ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಬಯಸಿ ಅರ್ಜಿ ಸಲ್ಲಿಸಿದ ಕೂಲಿಕಾರರಿಗೆ ತಕ್ಷಣ ಕೆಲಸ ನೀಡಬೇಕು, ಕೆಲಸದಲ್ಲಿ ಇರುವ ಕೂಲಿಕಾರರಿಗೆ ಸರಿಯಾದ ಹಾಜರಿ ಸಮರ್ಪಕ ಕೂಲಿ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಕೆಲಸ ಮಾಡದೇ ಮನೆಯಲ್ಲಿ ಇರುವ ಕೂಲಿಕಾರರ ಹೆಸರಲ್ಲಿ ಬೋಗಸ್ ಹಾಜರಾತಿ ಹಾಕಿ ಲಕ್ಷಾಂತರ ರೂಪಾಯಿ ವಂಚನೆ ಮಾಡಲಾಗುತ್ತಿದೆ. ಬೋಗಸ್ ಹಾಜರಾತಿಗೆ ಕಡಿವಾಣ ಮಾಡುವಂತೆ ಅನೇಕ ಬಾರಿ ಪಿಡಿಓ ಮತ್ತು ಜೆಇ ಅವರ ಗಮನಕ್ಕೆ ತರಲಾಗಿದೆ. ಆದರೆ ಈ ಬಗ್ಗೆ ಎಚ್ಚೆತ್ತುಕೊಳ್ಳದೇ ಮನಬಂದಂತೆ ಎನ್ಎಂಎಂಎಸ್ ಹಾಜರಾತಿ ಮಾಡಲು ಮುಂದಾಗಿದ್ದರಿಂದ ಬೋಗಸ್ ಹಾಜರಾತಿ ಪ್ರತಿಗಳೊಂದಿಗೆ ಉದ್ಯೋಗ ಖಾತ್ರಿ ನಿರ್ವಹಣೆಯ ಸಹಾಯ ನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಮನಗರ | ರೈಲ್ವೆ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಆದ್ಯತೆ: ಪ್ರಗತಿಪರ ಸಂಘಟನೆಗಳಿಂದ ಸ್ವಾಗತ
ಇಡೀ ತಾಲೂಕಿನಲ್ಲಿ ಜಾಲಹಳ್ಳಿ ಗ್ರಾಮ ಪಂಚಾಯತಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ಕೂಲಿಕಾರರ ಸಂಖ್ಯೆಯೂ ಹೆಚ್ಚಾಗಿದೆ. ಪಿಡಿಓ ಮತ್ತು ನರೇಗಾ ಸಿಬ್ಬಂದಿಗಳ ಬೇಜವಬ್ದಾರಿಯಿಂದ ಉದ್ಯೋಗ ಖಾತ್ರಿ ಯೋಜನೆಯ ಹಣ ದುರ್ಬಳಕೆ ಮಾಡಲಾಗುತ್ತಿದ್ದರೂ ನಿಯಂತ್ರಿಸಲಾಗದ ಪಿಡಿಓ ಮತ್ತು ಎನ್ಎಂಎಂಎಸ್ ಬೋಗಸ್ ಹಾಜರಾತಿ ಮಾಡುತ್ತಿರುವ ಜೆಇ ಮೇಲೆ ಸೂಕ್ತ ಕ್ರಮ ತೆಗೆದುಕೊಂಡು ದುಡಿಯುವ ಕೂಲಿಕಾರರಿಗೆ ಕೆಲಸ ಕೂಲಿ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಇದೇ ಸಂದರ್ಭದಲ್ಲಿ ತಾಲೂಕು ಸಮಿತಿ ಅಧ್ಯಕ್ಷ ಲಿಂಗಣ್ಣ ಮಕಾಶಿ, ಕಾರ್ಯದರ್ಶಿ ಬಸವರಾಜ, ಶಿವರಾಜ ಇದ್ದರು.
ವರದಿ : ಶಿವರಾಮ ಕಟ್ಟಿಮನಿ
