ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ(ಮನರೇಗಾ) ಯೋಜನೆಯಡಿ ಕೇಂದ್ರ ಸರ್ಕಾರದ ಹೊಸ ನೀತಿ ನಿಯಮಗಳ ಬದಲಾವಣೆಯಿಂದಾಗಿ 100 ದಿನಗಳ ಕೆಲಸ ಸಿಗದೆ ಸಾವಿರಾರು ಜನರು ವಲಸೆ ಹೋಗುತ್ತಿದ್ದಾರೆ. ನಮ್ಮ ಕೆಲಸದ ಹಕ್ಕನ್ನು ಕೇಂದ್ರ ಸರ್ಕಾರ ಕಿತ್ತುಕೊಳ್ಳುತ್ತಿದ್ದುದ್ದನ್ನು ಖಂಡಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ(ಗ್ರಾಕೂಸ)ಯಿಂದ ಪ್ರತಿಭಟನೆ ನಡೆಸಿದರು.
ರಾಯಚೂರು ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಿದರು.
“ಮನರೇಗಾ ಕಾನೂನು ಅಡಿಯಲ್ಲಿ ಗ್ರಾಮೀಣ ಭಾಗದ ಕಾರ್ಮಿಕರಿಗೆ ನೂರು ದಿನಗಳ ಕೆಲಸದ ಗ್ಯಾರಂಟಿ ನೀಡಿತ್ತು. ಈ ಕಾನೂನು ಅಡಿಯಲ್ಲಿ ಕೋಟ್ಯಂತರ ಕಾರ್ಮಿಕರು ಕೆಲಸ ಮಾಡಿ ತಮ್ಮ ಸಂಕಷ್ಟದ ಜೀವನ ನಿರ್ವಹಣೆ ಮಾಡುತ್ತಿದ್ದರು. ಕೂಲಿ ಕಾರ್ಮಿಕರು ನಗರ ಪ್ರದೇಶಗಳಿಗೆ ವಲಸೆ ಹೋಗುವುದು ಕಡಿಮೆಯಾಗಿತ್ತು. ಕೇಂದ್ರ ಸರ್ಕಾರ ಹೊಸ ನಿಯಮ ತರುವುದರಿಂದ ಸಾಕಷ್ಟು ಸಮಸ್ಯೆ ಎದುರಾಗಿದೆ” ಎಂದು ಆಗ್ರಹಿಸಿದರು.
“ಇತ್ತೀಚಿನ ದಿನಗಳಲ್ಲಿ ಸರ್ಕಾರದ ಹೊಸ ನೀತಿಗಳ ಬದಲಾವಣೆಯಿಂದಾಗಿ ಕಾರ್ಮಿಕರಿಗೆ ಸರಿಯಾಗಿ 100 ದಿನಗಳ ಖಾತ್ರಿ ಕೆಲಸ ಸಿಗುತ್ತಿಲ್ಲ. ಕುಟುಂಬಕ್ಕೆ 200 ದಿನಗಳ ಕೆಲಸ ನೀಡಬೇಕು, ಪ್ರತಿ ಕೂಲಿಗೆ ₹600ರಂತೆ ನಿಗದಿಪಡಿಸಬೇಕು. ಕೆಲಸದ ವೇಳೆ ಸಾವನಪ್ಪಿದವರಿಗೆ ₹5 ಲಕ್ಷ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದರು.

“ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಬಜೆಟ್‌ನಲ್ಲಿ ಮೀಸಲಿಡಬೇಕಾದ ಹಣವನ್ನು ಕೇಂದ್ರ ಸರ್ಕಾರ ಪ್ರತಿವರ್ಷ ಕಡಿಮೆ ಮಾಡುತ್ತ ಬರುತ್ತಿದೆ. ಇದರಿಂದ ಕಾರ್ಮಿಕರಿಗೆ ನೂರು ದಿನಗಳ ಉದ್ಯೋಗ ಖಾತ್ರಿ ಕೆಲಸದ ಹಕ್ಕು ಕೇಂದ್ರ ಸರ್ಕಾರ ಕಿತ್ತುಕೊಳ್ಳುತ್ತಿದೆ. ಸಮಯಕ್ಕೆ ಕೆಲಸ ಮಾಡಿದ ಕಾರ್ಮಿಕರಿಗೆ ಪಾವತಿಯಾಗುತ್ತಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ತಮ್ಮ ಬಜೆಟ್‌ನಲ್ಲಿ ₹2 ಲಕ್ಷ ಕೋಟಿ ಹಣ ಮೀಸಲಿಡಬೇಕು. ಈ ವರ್ಷ ಕೆಲಸ ಮಾಡಿದ ಕೂಲಿ ಕಾರ್ಮಿಕರ ಬಾಕಿ ಕೂಲಿ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಯ ಮುಖ್ಯಸ್ಥೆ ಮಾರೆಮ್ಮ ನೀರಮಾನ್ವಿ, ಬಸವರಾಜ್ ಗಬ್ಬೂರು, ಗೋವಿಂದ, ಹುಚ್ಚಪ್ಪ ಕುರ್ಡಿ, ಕೊಂಡಯ್ಯ ಜಾನೇಕಲ್, ತಾಯಪ್ಪ, ನರಸಮ್ಮ ಸೇರಿದಂತೆ ನೂರಾರು ಮಂದಿ ಕೂಲಿ ಕಾರ್ಮಿಕರು ಇದ್ದರು.
