ಮೆಣಸಿನಕಾಯಿ ಮಾರಾಟ ಮಾಡಿದ್ದ ರೈತರಿಗೆ ಹಣ ಬಾಕಿ ಉಳಿಸಿಕೊಂಡು ದಲ್ಲಾಳಿಯೋರ್ವ ನಾಪತ್ತೆಯಾಗಿರುವ ಘಟನೆ ರಾಯಚೂರು ಜಿಲ್ಲೆಯ ಘಟನೆ ದೇವದುರ್ಗ ತಾಲೂಕಿನಲ್ಲಿ ನಡೆದಿದೆ.
ದೇವದುರ್ಗ ತಾಲೂಕಿನ ಸುಮಾರು 50ಕ್ಕಿಂತ ಹೆಚ್ಚು ರೈತರು ಮೆಣಸಿನಕಾಯಿ ಬೆಳೆದು ಮಸರಕಲ್ ಗ್ರಾಮದ ಅಲಿ ಪಾಷಾ ಎನ್ನುವ ವ್ಯಕ್ತಿಯ ಮಧ್ಯಸ್ಥಿಕೆಯಲ್ಲಿ ಆಂಧ್ರ ಮೂಲದ ಬ್ಯಾಡಗಿ ಸ್ವಾಮಿ ಎಂಬಾತನಿಗೆ ಸುಮಾರು 500 ಕ್ವಿಂಟಾಲ್ ಮಾರಾಟ ಮಾಡಿದ್ದಾರೆ. ಒಟ್ಟು 3 ಕೋಟಿ ರೂಪಾಯಿ ಮೊತ್ತದ ಬೆಳೆಯನ್ನು ಖರೀದಿಸಿದ್ದ ಸ್ವಾಮಿ ಹಣ ಪಾವತಿಸದೇ ಮೋಸ ಮಾಡಿದ್ದು, ಆಂಧ್ರಕ್ಕೆ ಪರಾರಿಯಾಗಿದ್ದಾನೆ ಎಂದು ರೈತರು ದೂರಿದ್ದಾರೆ.
ಸಾಲ ಮಾಡಿ ಬೆಳೆದಿದ್ದ ಮೆಣಸಿನಕಾಯಿ ಬೆಳೆದ ರೈತರು ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಆತಂಕಕ್ಕೆ ಒಳಗಾಗಿದ್ದಾರೆ. ಪ್ರತಿ ವರ್ಷ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಪರದಾಡುತ್ತಿದ್ದರು. ಈ ಬಾರಿಯಾದರೂ ನಮಗೆ ಅಲ್ಪಸ್ವಲ್ಪ ಲಾಭ ಸಿಗಬಹುದು ಎಂದು ಕಾತರದಿಂದ ಕಾಯುತ್ತಾ ಇರುವಾಗಲೇ, ದಲ್ಲಾಳಿ ಮಾಡಿದ ಮೋಸದಿಂದ ಮತ್ತೆ ಸಂಕಟ ಎದುರಾಗಿದೆ.
ಈ ಬಗ್ಗೆ ಮೆಣಸಿನಕಾಯಿ ಬೆಳೆದ ರೈತ ಪ್ರಭಾಕರ ಇಂಗಳದಾಳ ಮಾತನಾಡಿ, “ನಾವು ಮೆಣಸಿನಕಾಯಿ ಬೆಳೆಯಲು ಸಾಕಷ್ಟು ಶ್ರಮಪಟ್ಟಿದ್ದೆವು. ಕೈಗೆ ಹಣ ಸಿಗುವ ಹುಮ್ಮಸ್ಸಿನಲ್ಲಿ ರೈತರು ಕಾದು ಕುಳಿತಿದ್ದರು. ಕಳೆದ ವರ್ಷ ಹೀಗೆ ರೈತರು ಮಾರಾಟ ಮಾಡಿದಾಗ ಹಣ ಜಮಾ ಆಗಿತ್ತು. ಆದರೆ ಈ ಬಾರಿ ಅದೇ ನಂಬಿಕೆಯಿಂದ ಅಲಿ ಪಾಷಾ ಎಂಬ ದಲ್ಲಾಳಿಯ ಮಧ್ಯಸ್ಥಿಕೆಯಲ್ಲಿ ಸ್ವಾಮಿ ಎನ್ನುವ ವ್ಯಕ್ತಿಗೆ ಮಾರಾಟ ಮಾಡಿದ್ದೆವು. ನಮಗೆ ಮೋಸ ಮಾಡಿ, ಪರಾರಿಯಾಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದೇವೆ” ಎಂದು ನೋವು ತೋಡಿಕೊಂಡಿದ್ದಾರೆ.

ಗಬ್ಬೂರು ಪೊಲೀಸ್ ಠಾಣೆಯಲ್ಲಿ ರೈತರ 15 ಜನರ ಒಂದೊಂದು ತಂಡವಾಗಿ ಮಾಡಿ 5 ಪ್ರಕರಣಗಳನ್ನು ದಾಖಲಿಸಿದ್ದೇವೆ. ಇಲ್ಲಿಯವರೆಗೂ ಯಾವುದೇ ರೀತಿಯ ಪರಿಹಾರ ದೊರಕಿಲ್ಲ ಹಾಗೂ ದಲ್ಲಾಳಿ ವಿರುದ್ಧ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ದಾವಣಗೆರೆ | ಒಳಮೀಸಲಾತಿ: ಒಗ್ಗಟ್ಟಿನ ಹೋರಾಟಕ್ಕೆ ನಿರ್ಧರಿಸಿದ ಛಲವಾದಿ, ಮಾದಿಗ ಸಮಾಜದ ಮುಖಂಡರು
ರೈತರು ಕಷ್ಟಪಟ್ಟು ಸಾಲಸೋಲ ಮಾಡಿ ಹಗಲು ರಾತ್ರಿ ಎನ್ನದೆ ಕೃಷಿ ಕೆಲಸದಲ್ಲಿ ತೊಡಗಿ ವರ್ಷಕ್ಕೆ ಎರಡು ಮೂರು ಬೆಳೆ ಬೆಳೆದು ಬದುಕಿಗಾಗಿ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ ಎಂದು ತಿಳಿಸಿದ ಅವರು, ಈ ಬೆಳವಣಿಗೆಯಿಂದ ರೈತರ ಎಷ್ಟೋ ಕುಟುಂಬಗಳು ಬೀದಿಪಾಲಾಗುವ ಆತಂಕದಲ್ಲಿದ್ದಾರೆ. ಕೆಲವು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರು, ಪೂನಾ ಇನ್ನಿತರ ಕಡೆಗೆ ದುಡಿಯುವುದಕ್ಕೇ ಗುಳೆ ಹೊರಟಿದ್ದಾರೆ” ಎಂದು ರೈತ ಪ್ರಭಾಕರ ಇಂಗಳದಾಳ ತಿಳಿಸಿದರು.
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ರೈತರಿಗೆ ಪರಿಹಾರ ದೊರಕಿಸಿಕೊಡಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
