ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ವಿವಿಧ ಹಳ್ಳಿಗಳಿಗೆ ಕಟ್ಟಡ ಕಾಮಗಾರಿಗಳಿಗೆ ಸರ್ಕಾರದ ನಿಯಮಾನುಸಾರ ಮರಳು ನೀಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು) ತಹಶೀಲ್ದಾರ್ ಚೆನ್ನಮಲ್ಲಪ್ಪ ಘಂಟಿ ಅವರಿಗೆ ಮನವಿ ಸಲ್ಲಿಸಿತು.
ತಾಲೂಕಿನಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಕಟ್ಟಡ ಕಾರ್ಮಿಕರು, ಸಣ್ಣ ಪುಟ್ಟ ಮನೆಗಳು ಹಾಗೂ ಗ್ರಾಮ ಪಂಚಾಯತ್ ಕಾಮಾಗಾರಿಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮರಳು ಸಿಗದೆ ಕಾಮಗಾರಿಗಳು ಕುಂಠಿತಗೊಂಡಿವೆ. ಕಾಮಗಾರಿಗಳು ಯಥಾವತ್ತಾಗಿ ನಡೆಯುವುದಕ್ಕೆ ಸರ್ಕಾರದ ನಿಯಮದಂತೆ ಮರಳು ನೀಡುವುದಕ್ಕೆ ಮುಂದಾಗಬೇಕೆಂದು ಸಂಘಟನೆಯ ಮುಖಂಡರು ಒತ್ತಾಯಿಸಿದರು.
ಪರವಾನಗಿ ನೀಡಿದಾಗ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅನಧಿಕೃತ ನೆರೆಯ ಜಿಲ್ಲೆಗಳಿಗೆ ಮರಳು ಸಾಗಿಸಲು ಮುಂದಾಗುತ್ತಾರೆ. ಸ್ಥಳೀಯ ಜನರ ಹೆಸರು ಬಳಸಿಕೊಂಡು ಅಧಿಕಾರ ದುರುಪಯೋಗಪಡಿಸಿಕೊಂಡು ಅವ್ಯವಹಾರ ನಡೆಸುತ್ತಾರೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಸರ್ಕಾರದ ನಿಯಮದ ಪ್ರಕಾರ ಸ್ಥಳೀಯರಿಗೆ ಗ್ರಾಮ ಪಂಚಾಯತಿಗಳ ಮುಖಾಂತರ ಮರಳು ಕೇಂದ್ರಗಳನ್ನು ಸ್ಥಾಪಿಸಲು ಆಗ್ರಹಿಸಿ ಜಿಲ್ಲಾಡಳಿತ ಕಾರ್ಮಿಕರಿಗೆ ಬಡವರಿಗೆ ಯಾವುದೇ ಸಮಸ್ಯೆ ಆಗದಂತೆ ಗಮನವಹಿಸಬೇಕು ಎಂದು ಪ್ರತಿಭಟಿಸಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವ್ಯವಹಾರ; ಇಬ್ಬರು ಅಧಿಕಾರಿಗಳು ಅಮಾನತು
ಈ ವೇಳೆ ಸಿಐಟಿಯು ರಾಜ್ಯ ಜಂಟಿ ಕಾರ್ಯದರ್ಶಿ ಶಬ್ಬೀರ್ ಜಾಲಹಳ್ಳಿ, ರೈತ ಮುಖಂಡ ನರಸಣ್ಣ ನಾಯಕ, ಗಿರಿಯಪ್ಪ ಪೂಜಾರಿ, ಕಟ್ಟಡ ಕಾರ್ಮಿಕ ಸಂಘಟನೆ ತಾಲೂಕು ಅಧ್ಯಕ್ಷ ಪಿಡ್ಡಪ್ಪ ನಾಯಕ, ಕಾರ್ಯದರ್ಶಿ ಯೂಸುಫ್ ಸಾಬ್, ವಿದ್ಯಾರ್ಥಿ ಮುಖಂಡ ಮಹಾಲಿಂಗ ದೊಡ್ಡಮನಿ, ಪ್ಯಾಟಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಯಲ್ಲಪ್ಪ, ಶರೀಫ್, ಖಾಜಾ ಹುಸೇನಪ್ಪ, ಬಸವರಾಜ ಚಿಂಚೋಡಿ, ಹನುಮಂತ ದೊಡ್ಡಮನಿ, ಶಾಂತಪ್ಪ ಗಾಣಧಾಳ, ಹನುಮಂತ ಗುರಿಕಾರ ಮತ್ತು ಇತರರು ಇದ್ದರು.
