ಸಮಾಜದಲ್ಲಿ ಪುರುಷ ಸಮನಾಗಿ ಬೆಳೆದಿರುವ, ಬೆಳೆಯುತ್ತಿರುವ ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ, ಉದ್ಯೋಗ ಖಾತರಿ ಸೇರಿದಂತೆ ವಿವಿಧ ರೀತಿಯ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್ಸ್ (ಸಿಐಟಿಯು) ಹಾಗೂ ದುಡಿಯುವ ಮಹಿಳೆಯರ ಸಮನ್ವಯ ಸಮಿತಿಗಳು ಪ್ರತಿಭಟನೆ ನಡೆಸಿದವು.
ರಾಯಚೂರು ನಗರದ ಸಾರ್ವಜನಿಕ ಉದ್ಯಾನವನದಿಂದ ತಹಶೀಲ್ದಾರ್ ಕಚೇರಿವರೆಗೆ ರ‍್ಯಾಲಿ ನಡೆಸಿ ನಂತರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. “ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಮಾಣ ಹೆಚ್ಚಳವಾಗುತ್ತಿದೆ, ಕೌಟುಂಬಿಕ ಹಿಂಸೆಯ ಕಾರಣದಿಂದ ಮಹಿಳೆಯು ತೀವ್ರ ಶೋಷಣೆಗೆ ಒಳಗಾಗುತ್ತಿದ್ದಾಳೆ. ದುಡಿಯುವ ಮಹಿಳೆಯರ ಹಕ್ಕುಗಳ ಮೇಲೆ ಸರ್ಕಾರ ನಿರಂತರ ದಾಳಿ ಮಾಡುತ್ತಿದೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಪ್ರತಿಭಟನಾ ದಿನಾಚರಣೆ ಆಚರಿಸಿ ಮಹಿಳೆಯನ್ನೂ ಪುರುಷನಂತೆ ಸಮಾನವಾಗಿ ಕಾಣಬೇಕು” ಎಂದು ಸಂಘಟನೆಯ ಮುಖಂಡರು ಮನವಿ ಮಾಡಿದರು.
“ಮಹಿಳೆಯರಿಗೆ ಉದ್ಯೋಗಗಳನ್ನು ಖಚಿತಪಡಿಸಬೇಕು, ಮಹಿಳೆಯರನ್ನು ಕಾರ್ಮಿಕರು ಅಥವಾ ರೈತರು ಎಂದು ಪರಿಗಣಿಸಬೇಕು. ಸರ್ಕಾರದ ವಿವಿಧ ಸ್ಕೀಮ್‌ಗಳಡಿ ಗೌರವಧನಕ್ಕೆ ಕೆಲಸ ಮಾಡುವ ಕಾರ್ಮಿಕರೆಂದು ಗುರುತಿಸಿ 45ನೇ ಐಎಲ್‌ಸಿ ಪ್ರಕಾರ ಕನಿಷ್ಠ ವೇತನ, ಸೇವಾ ಭದ್ರತೆ, ಗ್ರಾಚ್ಯುಟಿ ಸೌಲಭ್ಯಗಳನ್ನು ನೀಡಬೇಕು. ಎಲ್ಲಾ ಮಹಿಳೆಯರಿಗೂ ಮುಪ್ಪಿನ ರಜೆ, ಹೆರಿಗೆ ರಜೆ, ಹೆರಿಗೆ ಸೌಲಭ್ಯ ನೀಡಬೇಕು” ಎಂದು ಒತ್ತಾಯಿಸಿದರು.
“ಕೆಲಸದ ಸ್ಥಳಗಳಲ್ಲಿ ನಡೆಯುವ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮವಹಿಸಬೇಕು. ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳಾ ಹಕ್ಕುಗಳ ರಕ್ಷಣೆಗೆ ಇರುವ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ರಾತ್ರಿ ಪಾಳಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕು” ಎಂದರು.
ಇದನ್ನೂ ಓದಿ: ರಾಯಚೂರು | ಸ್ನಾನ ಮಾಡಲು ಹೊಂಡಕ್ಕೆ ಜಿಗಿದ ವ್ಯಕ್ತಿ ನಾಪತ್ತೆ
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷೆ ಶಕುಂತಲಾ ಪಾಟೀಲ್, ಹೆಚ್. ಪದ್ಮಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್. ಶರಣಬಸವ, ಕಾರ್ಯದರ್ಶಿ ರಂಗಮ್ಮ ಅನ್ವರ, ಅಕ್ಕ ಮಹಾದೇವಿ, ವರಲಕ್ಷ್ಮಿ, ತಾಯಮ್ಮ, ಕಲ್ಯಾಣಮ್ಮ, ಗೋಕುರಮ್ಮ, ತಾಯಮ್ಮ ಸೇರಿದಂತೆ ಅನೇಕರು ಇದ್ದರು.
