ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜೋಳದಡಗಿ ಗ್ರಾಮ ಮತ್ತು ಯಾದಗಿರಿ ಜಿಲ್ಲೆಯ ಟೊಣ್ಣರು ಗ್ರಾಮದ ನಡುವೆ ಹರಿಯುವ ಕೃಷ್ಣ ನದಿ ಬಳಿ ಅಕ್ರಮ ಮರಳುಗಾರಿಕೆಗಾಗಿ ಅಕ್ರಮವಾಗಿ ನಿರ್ಮಾಣ ಮಾಡಲಾಗಿದ್ದ ರಸ್ತೆಯನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಕಂದಾಯ ಇಲಾಖೆಯ ಅಧಿಕಾರಿಗಳು, ಪೊಲೀಸರು ಮತ್ತು ಮರಳು ಟಾಸ್ಕ ಪೊರ್ಸ್ ಸಮಿತಿ ಅಧಿಕಾರಿಗಳು ಅನಧಿಕೃತವಾಗಿ ನಿರ್ಮಾಣ ಮಾಡಲಾಗಿದ್ದ ರಸ್ತೆಯನ್ನು ತೆರವುಗೊಳಿಸಿದ್ದಾರೆ.
ದೇವದುರ್ಗ ತಾಲೂಕಿನಲ್ಲಿ ಇತ್ತೀಚಗಷ್ಟೇ ಮೂರು ಅಕ್ರಮ ಮರಳು ಲಾರಿಗಳನ್ನು ಕ್ಷೇತ್ರದ ಶಾಸಕಿ ಕರಿಯಮ್ಮ ಅವರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದರು. ಆದರೂ, ಶಾಸಕರು, ಜಿಲ್ಲಾಡಳಿತದ ಕಣ್ಣು ತಪ್ಪಿಸಿ ಅಕ್ರಮ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಇನ್ನೊಂದೆಡೆ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ರಾಜಕೀಯ ಪ್ರಭಾವಿಗಳ ಸಂಬಂಧಿಗಳೇ ಅಕ್ರಮ ಮರಳು ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳೂ ಇವೆ.
ರಾತ್ರೋರಾತ್ರಿ ಮರಳು ಸಾಗಿಸಲು ನದಿಗೆ ಅಡ್ಡಲಾಗಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ತಾಲೂಕಿನ ಜೋಳದಡಗಿ ಗ್ರಾಮಸ್ಥರ ಇತ್ತೀಚಗಷ್ಟೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ನದಿಯಲ್ಲಿ ಅಕ್ರಮ ರಸ್ತೆ ನಿರ್ಮಾಣ ಮಾಡುತ್ತಿರುವ ದೂರು ನೀಡಿದ್ದರು. ದೂರಿನ ಮೇರೆಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಜೆಸಿಬಿ ಮೂಲಕ ಹಾಕಲಾಗಿದ್ದ ರಸ್ತೆಯನ್ನು ತೆರವುಗೊಳಿಳಿಸಿದ್ದಾರೆ.
ವರದಿ : ಹಫೀಜುಲ್ಲ