ಕೇಂದ್ರದ ಮೋದಿ ಸರ್ಕಾರವು ರಾಜ್ಯಸಭೆಯಲ್ಲಿ ಮಂಡಿಸಿದ ಹೊಸ ಚುನಾವಣಾ ಮಸೂದೆ ಅಂಗೀಕಾರವಾಗಿದ್ದೇ ಆದರೆ, ಸಂಸತ್ತು ಕೇವಲ ಕಲ್ಲು ಮಣ್ಣಿನ ಕಟ್ಟಡವಾಗಿ ಉಳಿಯಲಿದೆ ಎಂದು ಟಿಯುಸಿಐ ರಾಜ್ಯಾಧ್ಯಕ್ಷ ಆರ್ ಮಾನಸಯ್ಯ ಆತಂಕ ವ್ಯಕ್ತಪಡಿಸಿದರು.
“ಪ್ರಜಾಪ್ರಭುತ್ವದ ಆಧಾರ ಸ್ಥಂಭವಾದ ಭಾರತ ಚುನಾವಣಾ ಆಯೋಗವು ನೂತನ ಮಸೂದೆ ಜಾರಿಯಾದರೆ ಭಾಜಪ ಚುನಾವಣಾ ಆಯೋಗವಾಗಲಿದೆ. ಪ್ರಸ್ತಾಪಿತ ಮಸೂದೆಯು ಭಾರತದ ಮುಖ್ಯ ನ್ಯಾಯಮೂರ್ತಿಯನ್ನು, ಸರ್ಕಾರದ ಕಾರ್ಯದರ್ಶಿ ದರ್ಜೆಗೆ ತಳ್ಳಲಿದೆ. ಭಾರತ ಮುಖ್ಯ ಚುನಾವಣಾಯುಕ್ತರನ್ನು ಚುನಾಯಿಸುವ(ನೇಮಿಸುವ)ಅಧಿಕಾರ ಪ್ರಧಾನಿ ಕಾರ್ಯಾಲಯದ ಪಾಲಾಗುತ್ತದೆ” ಎಂದು ಹೇಳಿದರು.
“ಸ್ವಾಯತ್ತತೆ ಕಳೆದುಕೊಂಡ, ಬಿಜೆಪಿ ಪ್ರಾಯೋಜಿತ ಚುನಾವಣಾ ಆಯೋಗವು ಬಿಜೆಪಿಯೇತರ ಪಕ್ಷಗಳನ್ನು ಅಧಿಕಾರಕ್ಕೇರಲು ಬಿಡಬಹುದೆ? ಪ್ರಜಾಪ್ರಭುತ್ವ ಹಾಗೂ ಪಾರದರ್ಶಕ ಪದ್ದತಿಯಡಿ ಬರುವ ಲೋಕಸಭಾ ಚುನಾವಣೆ ನಡೆದರೆ ಕರ್ನಾಟಕ ಕಲಿಸಿದ ಪಾಠವನ್ನೇ ಬಿಜೆಪಿ ಮರಳಿ ಕಲಿಯಬೇಕಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಅನಧಿಕೃತ ಇ-ಖಾತೆಗಳು ಸೃಷ್ಠಿ; ಕ್ರಮಕ್ಕೆ ನಗರಸಭೆ ಪೌರಾಯುಕ್ತ ಆಗ್ರಹ
“ಬಿಜೆಪಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭೀತಿ ಎದುರಾಗಿದೆ. ದರಿಂದ ಪಾರಾಗಲು ಚುನಾವಣಾ ಆಯೋಗವನ್ನೇ ತನ್ನ ರಾಜಕೀಯ ಸಂಸ್ಥೆಯನ್ನಾಗಿಸಲು ಈ ಮಸೂದೆಯ ಅಂಗೀಕಾರಕ್ಕೆ ಮುಂದಾಗಿದೆ” ಎಂದು ಆರೋಪಿಸಿದರು.
ದೇಶದ ಎಲ್ಲ ಪ್ರತಿಪಕ್ಷಗಳು, ಎಡ ಶಕ್ತಿಗಳು, ಕಾರ್ಮಿಕ-ರೈತ ಸಂಘಟನೆಗಳು, ದಮನಿತ ಸಮುದಾಯಗಳಾದ ದಲಿತ, ಕ್ರೈಸ್ತ, ಮುಸ್ಲಿಂ, ಆದಿವಾಸಿ ಜನಾಂಗಗಳು ವಿಶೇಷವಾಗಿ ಮಹಿಳೆ, ವಿದ್ಯಾರ್ಥಿಗಳು, ಯುವಜನಾಂಗಗಳು ಚುನಾವಣಾ ಆಯೋಗದ ಉಳಿವಿಗಾಗಿ ದನಿ ಎತ್ತಬೇಕಿದೆ ಎಂದು ಕರೆ ನೀಡಿದ್ದಾರೆ.