ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ರಾಯಚೂರು ಕ್ಷೇತ್ರದಲ್ಲಿ ಸ್ಪರ್ಧಿಸಲು ನಾನು ಆಕಾಂಕ್ಷಿಯಾಗಿದ್ದೇನೆ. ವರಿಷ್ಠ ನಾಯಕರನ್ನು ಭೇಟಿ ಮಾಡಿ, ಟಿಕೆಟ್‌ಗೆ ಮನವಿ ಮಾಡಿದ್ದೇನೆ. ಅನೇಕ ನಾಯಕರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮಾಜಿ ಸಂಸದ, ಬಿಜೆಪಿ ಮುಖಂಡ ಬಿ.ವಿ ನಾಯಕ ತಿಳಿಸಿದರು.
ರಾಯಚೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಪಕ್ಷದಲ್ಲಿದ್ದ ನಾನು ಅನೇಕ ಕಾರಣದಿಂದ ಪಕ್ಷ ತೊರೆದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾನ್ವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದೇನೆ. ನನಗೆ ಪಕ್ಷಾತೀತವಾಗಿ ಅನೇಕ ಅಭಿಮಾನಿಗಳಿದ್ದು ಅವರ ಅಭಿಲಾಷೆಯಂತೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿಲು ಟಿಕೆಟ್‌ಗಾಗಿ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದೇನೆ. ಕೇಂದ್ರದಲ್ಲಿ ಈ ಬಾರಿ ಪುನಃ ಎನ್‌ಡಿಎ ಸರ್ಕಾರ ರಚನೆಯಾಗಲಿದೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ನನಗೆ ಟಿಕೆಟ್ ನೀಡದಿದ್ದರು ವರಿಷ್ಠರ ನಿರ್ಧಾರಕ್ಕೆ ಬದ್ದನಾಗಿ ಪಕ್ಷಕ್ಕಾಗಿ ದುಡಿಯುತ್ತೇನೆ” ಎಂದು ಹೇಳಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದು, ಆಗ ಮೋದಿಯ ಅಲೆಯಲ್ಲಿಯೇ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಗೆಲುವು ಸಾಧಿಸಿದ್ದರು. ಈಗಲೋ ಮೋದಿ ಅಲೆಯಿದೆ. ವಿಶ್ವಮಟ್ಟದ ನಾಯಕರಾಗಿ ನರೇಂದ್ರ ಮೋದಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.
ರಾಜಕೀಯ ನೆಲೆ ಕಂಡುಕೊಳ್ಳಲು ಪಕ್ಷ ಬದಲಾವಣೆ ಮಾಡಿದ್ದೇನೆ. ನನಗೆ ದೇವದುರ್ಗ, ರಾಯಚೂರು, ಶಹಪುರ, ಮಾನ್ವಿಯಲ್ಲಿ ದೊಡ್ಡ ಅಭಿಮಾನ ಬಳಗವಿದೆ. ನಾನು ಸಂಸದನಾಗಿ ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆ, ಎಸ್‌ಸಿಪಿ, ಟಿಎಸ್‌ಪಿ ಯೋಜನೆಗೆ ಅನುದಾನ, ಕಾಡಾ ಕಚೇರಿ ಸ್ಥಾಪನೆ, ರಾಯಚೂರು ರಸ್ತೆ ಸುಧಾರಣೆಗೆ ಅನುದಾನ ತಂದಿದ್ದೇನೆ. ಹೀಗೆ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಟಿಕೆಟ್ ನೀಡಿದರೆ ಗೆಲುವು ಸಾಧಿಸುತ್ತೇನೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ವೇಳೆ ಮಾಜಿ ಶಾಸಕ ಬಸವನಗೌಡ ಬ್ಯಾಗವಾಟ್, ಮಲ್ಲಿಕಾರ್ಜುನ, ಶರಣಪ್ಪ ಗೌಡ, ಅಯ್ಯಪ್ಪ ಮ್ಯಾಕಲ್, ಜೆ.ಸುಧಾಕರ್ ಇದ್ದರು.