ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂಪಡೆಯಬೇಕು ಮತ್ತು ಕೆಇಆರ್‌ಸಿ ಹಾಗೂ ಕರ್ನಾಟಕ ವಿದ್ಯುತ್ ನಿಗಮಗಳು ವಿದ್ಯುತ್ ಶುಲ್ಕ ಹೆಚ್ಚಿಸಿರುವುನ್ನು ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿ ಕಾಟನ್ ಮಿಲ್ಲರ್ಸ್ ಅಸೋಸಿಯೇಷನ್ ವತಿಯಿಂದ ರಾಯಚೂರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಲಾಯಿತು.
“ಹತ್ತಿ ಗಿರಣಿದಾರರಿಗೆ ಕೃಷಿ ಮಾರುಕಟ್ಟೆಯ ಯಾವುದೇ ಸೌಕರ್ಯದ ಬಳಕೆ ಅವಶ್ಯಕತೆ ಇಲ್ಲವಾದ್ದರಿಂದ ಹತ್ತಿ ಗಿರಣಿ ಉದ್ದಿಮೆದಾರರನ್ನು ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಬೇಕು” ಎಂದು ಪ್ರತಿಭಟನಾಕಾರರು ಮನವಿ ಮಾಡಿದರು.
“ರಾಜ್ಯದ ರೈತರಿಗೆ ಮತ್ತು ಸಣ್ಣ ಕೈಗಾರಿಕೆಗಳಾದ ಹತ್ತಿ ಗಿರಣಿಗಳ ಹಿತಾಸಕ್ತಿಗೆ ಪ್ರತಿಕೂಲವಾಗಿದ್ದಲ್ಲಿ ಹತ್ತಿಗಿರಣಿಗಳು ಕಾರ್ಯನಿರ್ವಹಿಸದೇ ಸ್ಥಗಿತಗೊಳ್ಳುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ಚರ್ಚಿಸಲು ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೊದಲು ಸರ್ಕಾರದೊಂದಿಗೆ ಚರ್ಚಿಸಲು ಅವಕಾಶ ಕಲ್ಪಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕೋವಿಡ್‌ನಿಂದಾಗಿ ಸಾಕಷ್ಟು ಇಂಡಸ್ಟ್ರಿಗಳಲ್ಲಿ ಉತ್ಪಾದನಾ ಚಟುವಟಿಕೆಗಳಿಲ್ಲದೆ ಬ್ಯಾಂಕ್ ಸಾಲ ಕಟ್ಟಲಾಗದೇ ಕೈಗಾರಿಕೋದ್ಯಮಿಗಳು ಬಹಳಷ್ಟು ತೊಂದರೆಗಳನ್ನು ಅನುಭವಿಸಿದ್ದು, ಸಾಕಷ್ಟು ನಷ್ಟ ಎದುರಿಸುವಂತಾಗಿದೆ. ಇದರಿಂದ ಹೊರಬರಲು ಬಹಳಷ್ಟು ಕಷ್ಟವಾಗಿದೆ” ಎಂದು ಅವಲತ್ತುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? 25 ಪೊಲೀಸರ ವರ್ಗಾವಣೆ ಕೋರಿ ಐಜಿಪಿಗೆ ಶಾಸಕ ಬಸವರಾಜ ರಾಯರೆಡ್ಡಿ ಪತ್ರ: ವರ್ಗಾವಣೆ ದಂಧೆ ಆರೋಪ
ಕೆಇಆರ್‌ಸಿ ಹಾಗೂ ಕರ್ನಾಟಕ ವಿದ್ಯುತ್ ನಿಗಮಗಳ ವತಿಯಿಂದ ವಿದ್ಯುತ್ ಬಿಲ್‌ಗಳ ದರಗಳನ್ನು ಹೆಚ್ಚಳ ಮಾಡಿದ್ದು, ಕೈಗಾರಿಕೋದ್ಯಮಗಳಿಗೆ ಹೊರೆಯಾಗಿದ್ದು, ಕೈಗಾರಿಕೆ ನಡೆಸುವುದು ಕಷ್ಟವಾಗಿದೆ. ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಕೂಡಲೇ ವಿದ್ಯುತ್ ದರ ಇಳಿಕೆ ಮಾಡಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಾಟನ್ ಮಿಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ವಿ ಲಕ್ಷ್ಮಿರೆಡ್ಡಿ, ಗೌರವ ಕಾರ್ಯದರ್ಶಿ ಶೈಲೇಶ್‌ಕುಮಾರ ದೋಖಾ, ಗಂಗಾಧರ, ಗೋಪಾಲ, ನಾಗನಗೌಡ ಹರವಿ ಮಂಜುನಾಥ ಸೇರಿದಂತೆ ಹಲವರು ಇದ್ದರು.