ದಲಿತ ಸಮುದಾಯದ ಯುವಕನಿಗೆ ಜಾತಿ ನಿಂದನೆ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಪ್ರಗತಿ ಪರ ಹೋರಾಟ ಹಾಗೂ ದಲಿತ ಒಕ್ಕೂಟ ವತಿಯಿಂದ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಹಲ್ಲೆಗೊಳಗಾದ ಯುವಕ ಮಾದಿಗ ಸಮುದಾಯದ ಸಾಯಿಕುಮಾರ್ ಎಂದು ಗುರುತಿಸಲಾಗಿದ್ದು, ಗ್ರಾಮದ ಕುರುಬ ಸಮುದಾಯದ ಕರಿಯಪ್ಪ, ಗುಕ್ ಮಲ್ಲಪ್ಪ, ದೇವಪ್ಪ ಸೇರಿ ಕೆಲವರು ಹಲ್ಲೆ ಮಾಡಿದ್ದಾರೆ ಎಂದು ಪ್ರಕರಣದಲ್ಲಿ ದಾಖಲಾಗಿದೆ.
ದೇವದುರ್ಗ ತಾಲೂಕು ಚಿಕ್ಕಹೊನ್ನಕುಣಿ ಗ್ರಾಮದಲ್ಲಿ ಶಾಲೆಯ ಬೀಳ್ಕೊಡುಗೆ ಸಮಾರಂಭಕ್ಕೆ ಸಾಯಿಕುಮಾರ್ ಆಗಮಿಸಿದಾಗ ಏಕಾಏಕಿ ಅನ್ಯ ಜಾತಿಯ ಸಮುದಾಯದ ಯುವಕರು ಹಲ್ಲೆ ಮಾಡಿದ್ದಾರೆ. ನಂತರ ಯುವಕನ ಮನೆಗೆ ಹೋಗಿ ಆತನ ತಾಯಿ ಮೇಲೆಯೂ ಹಲ್ಲೆ ಮಾಡಿ ಸೀರೆ ಎಳೆದಾಡಿ ಕುಟುಂಬಸ್ಥರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ನಡೆದು ನಾಲ್ಕೈದು ದಿನಗಳು ಕಳೆದರೂ ಸ್ಥಳೀಯ ಪೊಲೀಸರು ಆರೋಪಿಗಳನ್ನು ಬಂಧಿಸುವುದರಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ. ಹಿರಿಯ ಮೇಲಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಹಾಗೂ ಕುಟುಂಬಸ್ಥರಿಗೆ ಭದ್ರತೆ ಒದಗಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಮನವಿ ಸಲ್ಲಿಸಿದರು.
ಇದನ್ನೂ ಓದಿ: ರಾಯಚೂರು | ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ : ಕೊಲೆ ಆರೋಪ
ಈ ವೇಳೆ ಹೇಮರಾಜ್ ಅಸ್ಕಿಹಾಳ, ವಿಶ್ವನಾಥ ಪಟ್ಟಿ, ಹನುಮಂತಪ್ಪ ಮನ್ನಾಪುರಿ, ಕ್ರಾಂತಿ ಕುಮಾರ, ತಾಯಣ್ಣ ಗದಾರ್, ಎಂ ಈರಣ್ಣ, ನರಸಿಂಹಲು ಸೇರಿದಂತೆ ಸಮುದಾಯದ ಮುಖಂಡರು ಇದ್ದರು.
