ಹೆರಿಗೆಯಾಗಿ ನಾಲ್ಕು ದಿನಗಳ ಬಳಿಕ ನವಜಾತ ಶಿಶು ಸಾವನ್ನಪ್ಪಿದ್ದು, ಅತಿಯಾದ ರಕ್ತಸ್ರಾವದಿಂದ ಬಾಣಂತಿಯೂ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಶಿವಲಿಂಗಮ್ಮ(21) ಮೃತ ಬಾಣಂತಿ ಎಂದು ಗುರುತಿಸಿದ್ದು, ದೇವದುರ್ಗ ತಾಲೂಕಿನ ಮಸೀದಾಪುರ ಗ್ರಾಮದವರು ಎನ್ನಲಾಗಿದೆ.
ಹೆರಿಗೆ ಕಾರಣದಿಂದ ಡಿಸೆಂಬರ್ 27ರಂದು ರಾಯಚೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಸಿಸೇರಿಯನ್ ಮೂಲಕ ಹೆರಿಗೆಯಾಗಿತ್ತು ಎಂದು ತಿಳಿದುಬಂದಿದೆ. ಹೆರಿಗೆ ಬಳಿಕ ರಕ್ತದೊತ್ತಡ ಹೆಚ್ಚಾಗಿರುವುದು ಕಂಡುಬಂದಿದ್ದು, ಇದರ ಹಿನ್ನೆಲೆಯಲ್ಲಿ ಬಾಣಂತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ 4 ದಿನಗಳ ಕಾಲ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು.
ಇಂದು ಬುಧವಾರ ಮಧ್ಯರಾತ್ರಿ ಮಗು ಸಾವನ್ನಪ್ಪಿದ್ದು, ಕೆಲವೇ ಗಂಟೆಗಳ ಬಳಿಕ ಬಾಣಂತಿ ಶಿವಲಿಂಗಮ್ಮ ಕೂಡ ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ರೈಲಿನಲ್ಲಿ ಅಸ್ವಸ್ಥಗೊಂಡ ಮಹಿಳೆ ಸಾವು
ಗ್ರಾಮದ ನಿವಾಸಿ ಹೋರಾಟಗಾರ ಶಾಂತ ಕುಮಾರ ಮಾತನಾಡಿ, “ವೈದ್ಯರ ನಿರ್ಲಕ್ಷ್ಯ ಕಾರಣದಿಂದ ಬಾಣಂತಿಯ ಸಾವಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಒಟ್ಟು 11 ಮಂದಿ ಬಾಣಂತಿಯರು ಮೃತಪಟ್ಟಿದ್ದು, ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ಆದರೂ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡಿಲ್ಲ. ಆರೋಗ್ಯ ಇಲಾಖೆ ಹಾಗೂ ಸರ್ಕಾರಿ ವೈದ್ಯರು ಗರ್ಭಿಣಿಯರಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಅವರನ್ನು ಆರೈಕೆ ಮಾಡಿ ಇಂತಹ ಸಾವು ನೋವುಗಳಿಗೆ ಕಡಿವಾಣ ಹಾಕಬೇಕು” ಎಂದರು.
