ಸರ್ಕಾರಿ ಹಾಗೂ ಅರೆ ಸರ್ಕಾರಿ ಕಚೇರಿಗಳ ಇಲಾಖೆಗಳಲ್ಲಿ ವಿಶೇಷ ಚೇತನರಿಗೆ ಮೀಸಲಿರಿಸಿದ ಶೇ 5% ಉದ್ಯೋಗ ಅನುದಾನ ಮೀಸಲಿದ್ದರೂ ಕೂಡ ಒದಗಿಸುವುದರಲ್ಲಿ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಮುಖಂಡರು ಆರೋಪಿಸಿದ್ದು, ಈ ಸಂಬಂಧ ಕ್ರಮ ಕೈಗೊಳ್ಳುವಂತೆ ರಾಯಚೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಬಳಿಕ ಜಿಲ್ಲಾಡಳಿತಕ್ಕೆ ಹಕ್ಕೊತ್ತಾಯ ಸಲ್ಲಿಸಿದ ಪ್ರತಿಭಟನಾಕಾರರು, ಸರ್ಕಾರಿ ಹಾಗೂ ಅರೆ ಸರ್ಕಾರಿ ಕಚೇರಿ, ಇಲಾಖೆಗಳಲ್ಲಿ ವಿಶೇಷ ಚೇತನರ ವಿದ್ಯಾರ್ಹತೆ, ಸಾಮರ್ಥ್ಯಕ್ಕೆ ಅನುಗುಣವಾಗಿ ಸ್ವಉದ್ಯೋಗ ಮಾಡಲು ಸ್ಥಳಾವಕಾಶ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಸುಮಾರು ವಿಶೇಷ ಚೇತನರು ಎಸೆಸೆಲ್ಸಿ, ಪಿಯುಸಿ, ಬಿಎ, ಬಿಕಾಂ, ಐಟಿಐ, ಕಂಪ್ಯೂಟರ್ ಜ್ಞಾನ, ವಿದ್ಯಾರ್ಹತೆ ಹೊಂದಿದ್ದು, ಅವರ ಸ್ವಂತ ಜೀವನ ನಿರ್ವಹಣೆ ಕುಟುಂಬ ನಿರ್ವಹಣೆ ಮಾಡುವುದು ಚಿಂತಾಜನಕವಾಗಿದೆ ಎಂದರು.

ರಾಯಚೂರು ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಈಗಾಗಲೆ ಕೆಲವು ಸಿಬ್ಬಂದಿಗಳ ನೇಮಕ ಕರೆದಿದ್ದು, ಟೆಂಡರ್ ಅನ್ನು ಏಜೆನ್ಸಿಗೆ ಕೊಡಲಾಗಿದೆ. ಇದರಲ್ಲಿ ಹೆಚ್ಚಾಗಿ ಸಾಮಾನ್ಯದವರಿಗೆ ಹೆಚ್ಚಿನ ಆದ್ಯತೆಯನ್ನು ಕೊಡುವುದು ಕಂಡುಬಂದಿದೆ. ಎಲ್ಲ ಸರಕಾರಿ ಕಚೇರಿಗಳ ಇಲಾಖೆಗಳಲ್ಲಿ ವಿಶೇಷ ಚೇತನರಿಗೆ ಮೀಸಲು ಕೋಟಾ ಇದ್ದರೂ ಕೂಡ, ಸಾಮಾನ್ಯದವರಿಗೆ ಹೆಚ್ಚಿನ ಆದ್ಯತೆ ಕೊಡುವುದು ಒಂದು ರೀತಿಯಲ್ಲಿ ವಿಶೇಷ ಚೇತನ ವ್ಯಕ್ತಿಗಳಿಗೆ ದ್ರೋಹ ಬಗೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಶೇಷ ಚೇತನರ ನೂತನ 2016 ಕಾಯ್ದೆಯಂತೆ ಸರ್ಕಾರಿ ಉದ್ಯೋಗಗಳಲ್ಲಿ ಶೇ.5% ಮೀಸಲಾತಿಯಂತೆ ಖಾಸಗಿ ಕಂಪನಿಗಳಲ್ಲಿಯೂ ಕೂಡ ವಿಶೇಷ ಚೇತನರಿಗೆ ಮೀಸಲಾತಿ ಇದೆ. ಈ ಕುರಿತು ವಿಶೇಷ ಚೇತನರ ಸಮಾನ ಹಕ್ಕುಗಳ ಸಂರಕ್ಷಣಾ 2016 ಕಾಯ್ದೆ ಅಧಿನಿಯಮ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳು, ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ರಾಯಚೂರು | ರೈತರಿಗೆ ವಂಚನೆ ಆರೋಪ: ಜೆಸ್ಕಾಂ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಒತ್ತಾಯ
ಖಾಸಗಿ ಕಂಪನಿಗಳಲ್ಲಿಯೂ ಮೀಸಲಾತಿಯನ್ನು ವಿಸ್ತರಿಸಿ ವಿಶೇಷ ಚೇತನರ ವಿದ್ಯಾರ್ಹತೆ ಹಾಗೂ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಉದ್ಯೋಗವಕಾಶಗಳನ್ನು ಒದಗಿಸಿಕೊಡುವಲ್ಲಿ ಆದೇಶವನ್ನು ನೀಡಬೇಕು. ವಿಶೇಷ ಚೇತನರ 2016 ಕಾಯ್ದೆ ಉಲ್ಲಂಘಿಸಿದಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ರಾಯಚೂರು ಜಿಲ್ಲಾಧ್ಯಕ್ಷ ಹೊನ್ನಪ್ಪ ಗೂಳಪ್ಪ, ರಾಜು, ಮುರಳಿ, ನರಸಿಂಹಲು, ಧರ್ಮರೆಡ್ಡಿ, ಟಿ.ವಿ.ವೀರೇಶ, ನಾಗರಾಜ, ತಿಮ್ಮಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
