ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಕೆ ಆರ್ ಪುರ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರನ್ನು ಸಿರವಾರ ತಾಲೂಕಿಗೆ ವರ್ಗಾವಣೆ ಮಾಡಿರುವ ಸರ್ಕಾರ ಕೂಡಲೇ ಆದೇಶ ಹಿಂಪಡೆಯಬೇಕು ಎಂದು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ರಾಯಚೂರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
“ಲೋಕಾಯುಕ್ತ ದಾಳಿಗೆ ಒಳಗಾಗಿ ಬಂಧನದಲ್ಲಿ ಇರುವಾಗಲೇ ಕಂದಾಯ ಇಲಾಖೆ ಅಜಿತ್ ರೈ ವಿರುದ್ಧ ಅಮಾನತು ಆದೇಶ ಹೊರಡಿಸಿತ್ತು. ಅಜಿತ್ ಕುಮಾರ್ ರೈನನ್ನು ಅಮಾನತಿನಲ್ಲಿಟ್ಟು, ಇದೀಗ ಭ್ರಷ್ಟ ಅಧಿಕಾರಿ ಎಸ್ ಅಜಿತ್ ಕುಮಾರ್ ರೈನ್ನು ಸಿರವಾರ ತಾಲೂಕಿಗೆ ವರ್ಗಾವಣೆ ಮಾಡಿರುವುದು ಖಂಡನೀಯ” ಎಂದರು.
“ಬೆಂಗಳೂರಿನ ತಹಶೀಲ್ದಾರ್ ಗ್ರೇಡ್ 1 ಅಧಿಕಾರಿಯಾಗಿದ್ದ ಅಜಿತ್ ಕುಮಾರ್ ರೈ ಅಕ್ರಮ ಹಣ ಪತ್ತೆಯಾದ ಬಳಿಕ ಗ್ರೇಡ್ -1 ತಹಶೀಲ್ದಾರ್ ಹುದ್ದೆಯಿಂದ ಗ್ರೇಡ್ –2 ತಹಶೀಲ್ದಾರ್ ಹಿಂಬಡ್ತಿ ಮಾಡಿ ಸರ್ಕಾರ ವರ್ಗಾವಣೆ ಮಾಡಿದೆ” ಎಂದು ಆರೋಪಿಸಿದರು.
“ಆದಾಯಕ್ಕಿಂತ ಹೆಚ್ಚು ಆಸ್ತಿ ಪತ್ತೆಯಾಗಿ ಸಾಕ್ಷಿ ಸಹಿತ ಸಿಕ್ಕಿಬಿದ್ದಿದ್ದು, ಅಮಾನತುಗೊಂಡಿದ್ದ ತಹಶೀಲ್ದಾರ್‌ನನ್ನು ಸಿರವಾರಗೆ ಯಾಕೆ ವರ್ಗಾಯಿಸಿದ್ದಾರೆ. ರಾಯಚೂರು ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಬೇಕಿತ್ತು” ಎಂದು ಆಗ್ರಹಿಸಿದರು.
ಸಿರವಾರ ತಾಲೂಕು ನೂತನವಾಗಿ ರಚನೆಯಾಗಿದೆ. ಅಭಿವೃದ್ಧಿಯಾಗಬೇಕಾದ ತಾಲೂಕಿಗೆ ಭ್ರಷ್ಟ ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದನ್ನು ಹಿಂಪಡೆಯಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬೇಡಿಕೆ ಈಡೇರಿಕೆಗೆ ಕೆಪಿಆರ್‌ಎಸ್ ಆಗ್ರಹ
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಸ್ ಶಿವಕುಮಾರ್ ಯಾದವ್, ಕರುಣಾಕರರೆಡ್ಡಿ, ಗೋವಿಂದರಾಜ್, ಎಂ ಡಿ ರಫೀಕ್, ಬಾವಸಲಿ ಸೇರಿದಂತೆ ಇತರರು ಇದ್ದರು.