ಪ್ರಧಾನಿ ಮೋದಿ ಉಪನಾಮ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಜಾರ್ಖಂಡ್ ಹೈಕೋರ್ಟ್ ಸೂಚನೆ ನೀಡಿದೆ.
2019 ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅವರು ಮಾಡಿದ ಮೋದಿ ಉಪನಾಮದ ಟೀಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯಲ್ಲಿ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಬಾರದು ಎಂದು ಜಾರ್ಖಂಡ್ ಹೈಕೋರ್ಟ್ ಮಂಗಳವಾರ ಆದೇಶಿಸಿದೆ. ಅಲ್ಲದೆ ಮುಂದಿನ ವಿಚಾರಣೆ ಆಗಸ್ಟ್ 16 ರಂದು ನಡೆಯಲಿದೆ.
ರಾಹುಲ್ ಗಾಂಧಿ ವಿರುದ್ಧ ಪ್ರದೀಪ್ ಮೋದಿ ಎಂಬ ಬಿಜೆಪಿ ಕಾರ್ಯಕರ್ತರೊಬ್ಬರು ರಾಂಚಿ ಸಿವಿಲ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. 2019 ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷದ ಸಭೆಯೊಂದರಲ್ಲಿ ಭಾಷಣ ಮಾಡಿದ್ದ ರಾಹುಲ್ ಗಾಂಧಿ, “ಕೊಲೆಗಾರನು ಬಿಜೆಪಿಯಲ್ಲಿ ಮಾತ್ರ ಪಕ್ಷದ ಅಧ್ಯಕ್ಷನಾಗಬಹುದು, ಅದು ಕಾಂಗ್ರೆಸಿನಲ್ಲಿ ಸಾಧ್ಯವಿಲ್ಲ” ಎಂದು ಹೇಳಿದ್ದರು.
ಈ ಸುದ್ದಿ ಓದಿದ್ದೀರಾ? ದೆಹಲಿ ವಿದ್ಯುತ್ ನಿಯಂತ್ರಕ ಮುಖ್ಯಸ್ಥರ ನೇಮಕ ವಿವಾದ: ಕೇಂದ್ರ, ಎಲ್‌ಜಿಗೆ ಸುಪ್ರೀಂ ನೋಟಿಸ್
ರಾಹುಲ್ ಗಾಂಧಿಯ ಈ ಹೇಳಿಕೆ ವಿರುದ್ಧ ಸಿವಿಲ್ ನ್ಯಾಯಾಲಯದಲ್ಲಿ ಎರಡು ಮಾನನಷ್ಟ ಮೊಕದ್ದಮೆಗಳನ್ನು ದಾಖಲಿಸಲಾಗಿತ್ತು. ಆದರೆ ಕೆಳ ನ್ಯಾಯಾಲಯವು ಅವರ ವಿರುದ್ಧ ವಾರಂಟ್ ಹೊರಡಿಸಿದ ನಂತರ ಅವುಗಳನ್ನು ಜಾರ್ಖಂಡ್ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು. ಈಗ ನ್ಯಾಯಾಲಯವು ‘ಬಲವಂತದ ಕ್ರಮ ಬೇಡ’ ಎಂಬ ಆದೇಶವನ್ನು ಹೊರಡಿಸುವ ಮೂಲಕ ರಾಹುಲ್ ಗಾಂಧಿಗೆ ರಿಲೀಫ್ ನೀಡಿದೆ.
ರಾಂಚಿಯ ಸಂಸದ – ಶಾಸಕ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯಲ್ಲಿ ಖುದ್ದು ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ರಾಹುಲ್ ಗಾಂಧಿ ಅವರ ವಕೀಲರು ಜಾರ್ಖಂಡ್ ಹೈಕೋರ್ಟ್‌ನಲ್ಲಿ ಕ್ರಿಮಿನಲ್ ರಿಟ್ ಅರ್ಜಿ ಸಲ್ಲಿಸಿದ್ದರು. ಇದೇ ಅರ್ಜಿಯನ್ನು ಸಂಸದ-ಶಾಸಕ ನ್ಯಾಯಾಲಯ ತಿರಸ್ಕರಿಸಿತ್ತು.