ರಾಯಚೂರು ಮತ್ತು ಸಿಂಧನೂರು ತಾಲೂಕುಗಳಲ್ಲಿ ಭೂಮಿಯನ್ನು ಗುರುತಿಸಿ ಅರ್ಹ ಲಿಂಗತ್ವ ಅಲ್ಪಸಂಖ್ಯಾತರಿಗೆ ನಿವೇಶನ ಮಂಜೂರು ಮಾಡಲು ಸೂಕ್ತ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೀಶ್ ಕೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಲಿಂಗತ್ವ ಅಲ್ಪಸಂಖ್ಯಾತರ ಮನೆಗಳ ನಿರ್ಮಾಣ, ನಿವೇಶನ ಮಂಜೂರು ಮಾಡಲು ಕಾಯ್ದಿರಿಸುವ ಬಗ್ಗೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ರಾಯಚೂರು ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಸಮೀಕ್ಷೆ ನಡೆಸಿ ಅರ್ಹ ಲಿಂಗತ್ವ ಅಲ್ಪಸಂಖ್ಯಾತರ ಪಟ್ಟಿಯನ್ನು ತಯಾರಿಸಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯಲ್ಲಿ ಮಂಡಿಸಿ, ಅನುಮೋದನೆ ಪಡೆದು, ಆಯ್ಕೆ ಸಮಿತಿಯ ಆಯ್ಕೆಪಟ್ಟಿಗೆ ಅನುಗುಣವಾಗಿ ಬೇಕಾಗಬಹುದಾದ ಜಮೀನಿನ ವಿಸ್ತೀರ್ಣದನ್ವಯ ಸರ್ಕಾರಿ ಜಮೀನನ್ನು ಗುರುತಿಸುವ ಕಾರ್ಯವು ಈಗಾಗಲೇ ಲಿಂಗಸೂಗೂರು, ದೇವದುರ್ಗ ಮತ್ತು ಮಾನವಿ ತಾಲೂಕುಗಳಲ್ಲಿ ಪೂರ್ಣವಾಗಿದೆ” ಎಂದರು.
“ಜಮೀನು ಗುರುತಿಸುವ ಪ್ರಕ್ರಿಯೆಯನ್ನು ಬಾಕಿ ಇರಿಸಿಕೊಂಡ ರಾಯಚೂರು ತಾಲೂಕು ಮತ್ತು ಸಿಂಧನೂರು ತಾಲೂಕಿನ ಅಧಿಕಾರಿಗಳು ಈ ಬಗ್ಗೆ ಕೂಡಲೇ ಗಮನ ಹರಿಸಬೇಕು” ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
“ಜಮೀನು ಗುರುತಿಸುವ ಪ್ರಕ್ರಿಯೆಯನ್ನು ಈಗಾಗಲೇ ಪೂರ್ಣಗೊಳಿಸಿದ ಲಿಂಗಸೂಗೂರ, ದೇವದುರ್ಗ ಮತ್ತು ಮಾನ್ವಿ ತಾಲೂಕುಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ನಿವೇಶನ ಹಂಚಿಕೆ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ನಡೆಸಲು ಕ್ರಮ ವಹಿಸಬೇಕು” ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
“ಗೃಹಲಕ್ಷ್ಮಿ ಯೋಜನೆಯಡಿ, ಅರ್ಹ ಲಿಂಗತ್ವ ಅಲ್ಪಸಂಖ್ಯಾತರಿಗೆ ಮಾಸಿಕ ₹2,000 ಸಮರ್ಪಕವಾಗಿ ಸಿಗುವಂತೆ ನೋಡಿಕೊಳ್ಳಬೇಕು” ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.
“ಲಿಂಗತ್ವ ಅಲ್ಪಸಂಖ್ಯಾತರ ಮನವಿಯಂತೆ, ಅರ್ಹ ಲಿಂಗತ್ವ ಅಲ್ಪಸಂಖ್ಯಾತರನ್ನು ಒಗ್ಗೂಡಿಸಿ ಅವರಿಗೆ ಸ್ವಯಂ ಉದ್ಯೋಗ ಕೌಶಲ್ಯ ತರಬೇತಿಗೆ ಏರ್ಪಾಡು, ಉದ್ಯೋಗ ಮಾಡಲು ಬೇಕಾದ ಮೂಲಭೂತ ಸೌಕರ್ಯದ ಜತೆಗೆ ಸಿದ್ದಪಡಿಸಿದ ವಸ್ತುಗಳಿಗೆ ಉತ್ತಮ ಬೆಲೆ ಸಿಗುವಂತೆ ಪೂರಕವಾದ ಮಾರುಕಟ್ಟೆ ವ್ಯವಸ್ಥೆಗೆ ಇಲಾಖೆಗಳಿಂದ ಅಗತ್ಯ ಕ್ರಮ ವಹಿಸಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಗುಬ್ಬಿಯಲ್ಲಿ ದಲಿತ ಯುವಕರ ಮೇಲೆ ಹಲ್ಲೆ; ರೈಲ್ವೆ ಪೊಲೀಸ್ ಚಂದ್ರಶೇಖರ್ ಬಂಧನಕ್ಕೆ ರೈತ ಸಂಘ ಒತ್ತಾಯ
“ರಾಯಚೂರು ಜಿಲ್ಲೆಯಲ್ಲಿನ ಲಿಂಗತ್ವ ಅಲ್ಪಸಂಖ್ಯಾತರು ಬೀದಿ ಬದಿಯಲ್ಲಿ, ಬಸ್ ನಿಲ್ದಾಣಗಳಲ್ಲಿ, ದೇವಸ್ಥಾನಗಳಲ್ಲಿ ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲಿ ವಾಸಿಸುತ್ತಿದ್ದು, ಕೂಡಲೇ ಇವರನ್ನು ನಿಗದಿಪಡಿಸಿದ ಸ್ಥಳಕ್ಕೆ ಸ್ಥಳಾಂತರಗೊಳಿಸಲು ಅನುಮತಿ ನೀಡಬೇಕು. ಜತೆಗೆ ವಾಸಮಾಡಲು ಬೇಕಾದ ಮೂಲಭೂತ ಸೌಕರ್ಯವನ್ನು ಕೂಡಲೇ ಕಲ್ಪಿಸಬೇಕು. ರಾಯಚೂರು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ನಿವೇಶನಕ್ಕಾಗಿ ವಾಸಯೋಗ್ಯವಾದ ಜಮೀನು ಗುರುತಿಸಬೇಕೆಂದು ನಾಲ್ಕಾರು ವರ್ಷಗಳಿಂದ ಒತ್ತಾಯಿಸುತ್ತಿದ್ದೇವೆ. ಮಾನ್ವಿ, ದೇವದುರ್ಗ ಮತ್ತು ಲಿಂಗಸೂಗೂರು ತಾಲೂಕುಗಳಲ್ಲಿ ಈಗಾಗಲೇ ಜಮೀನು ಗುರುತಿಸಿದಂತೆ ಸಿಂಧನೂರ ಮತ್ತು ರಾಯಚೂರು ತಾಲೂಕುಗಳಲ್ಲಿಯೂ ಆದಷ್ಟು ಬೇಗ ವಾಸಯೋಗ್ಯ ಜಮೀನು ಗುರುತಿಸಬೇಕು” ಎಂದು ಸಭೆಯಲ್ಲಿದ್ದ ಲಿಂಗತ್ವ ಅಲ್ಪಸಂಖ್ಯಾತರು ಮನವಿ ಮಾಡಿದರು.