ವಿಶೇಷಚೇತನರೂ ಕೂಡಾ ನಾಯಕತ್ವ ಬೆಳಸಿಕೊಳ್ಳಬೇಕು ಎಂಬುದು ಈ ವರ್ಷದ ಘೋಷ್ಯವಾಕ್ಯ. ಸುಸ್ಥಿರ ಭವಿಷ್ಯಕ್ಕಾಗಿ ವಿಶೇಷಚೇತನರ ನಾಯಕತ್ವಕ್ಕೆ ಉತ್ತೇಜನ ನೀಡುವುದರ ಜತೆಗೆ ಸರ್ಕಾರಿ ಮತ್ತು ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಯಚೂರು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಿಶೇಷಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿಶೇಷಚೇತನರಿಗಾಗಿ ಶ್ರಮಿಸುತ್ತಿರುವ ಸಂಘ ಹಾಗೂ ವಿವಿಧ ಒಕ್ಕೂಟಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ವಿಶೇಷಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ವಿಶೇಷಚೇತನರು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಸಾಮಾಜಿಕ, ಆರ್ಥಿಕವಾಗಿ ಸದೃಢರಾದಾಗ ಮಾತ್ರ ಮುನ್ನೆಲೆಗೆ ಬರಲು ಸಾಧ್ಯ, ವಿಶೇಷಚೇತನರಲ್ಲಿ ನಾಯಕತ್ವ ಬೆಳೆದಾಗ ಸಮಾಜದಲ್ಲಿ ಗೌರವ ದೊರೆಯುತ್ತದೆ. ವಿದ್ಯಾವಂತ ವಿಶೇಷಚೇತನರಿಗೆ ಸರ್ಕಾರಿ ಉದ್ಯೋಗದಲ್ಲಿ ಅವಕಾಶಗಳಿವೆ. ಜತೆಗೆ ಸ್ವಯಂ ಉದ್ಯೋಗ ಮಾಡಲು ನಗರದಲ್ಲಿ ತರಬೇತಿ ನೀಡಿ ಸಹಕಾರ ನೀಡಲಾಗುತ್ತಿದೆ. ಈಗಾಗಲೇ 100 ಮಂದಿ ಮಹಿಳೆಯರು ಇದರಲ್ಲಿ ತರಬೇತಿ ಪಡೆಯುತ್ತಿದ್ದಾರೆ” ಎಂದರು.
“ನಗರ ಮತ್ತು ಗ್ರಾಮೀಣ ಭಾಗದ ವಿಶೇಷಚೇತನರು ನಾಯಕತ್ವ ಬೆಳಸಿಕೊಳ್ಳಬೇಕು. ಸ್ವಯಂ ಉದ್ಯೋಗದ ತರಬೇತಿ ಪಡೆದುಕೊಂಡು ಸ್ವಯಂ ಉದ್ಯೋಗದಲ್ಲಿ ತೊಡಗಬೇಕು, ಸ್ವಯಂ ಉದ್ಯೋಗಕ್ಕಾಗಿ ತರಬೇತಿ, ಸಹಾಯ ಧನ, ಸ್ವಯಂ ಉದ್ಯೋಗದಲ್ಲಿ ಮಾಡಿದ ಉತ್ಪಾದನೆಗಳ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತದೆ” ಎಂದು ಹೇಳಿದರು.
ಜಿಲ್ಲಾ ವಿಶೇಷಚೇತನರ ಕಲ್ಯಾಣಾಧಿಕಾರಿ ಶ್ರೀದೇವಿ ಮಾತನಾಡಿ, “ಜಿಲ್ಲೆಯಲ್ಲಿ 26,825 ಮಂದಿ ವಿಶೇಷಚೇತನರಿದ್ದಾರೆ. ಸರ್ಕಾರದ ಸೌಲಭ್ಯಗಳ ಕುರಿತು ಇಲಾಖೆಯಿಂದ ಮಾಹಿತಿ ನೀಡುವುದರ ಜತೆಗೆ ಸರ್ಕರಿ ಸೌಲಭ್ಯಗಳನ್ನು ಒದಗಿಸಿಕೊಡಲು ಅನುಕೂಲ ಮಾಡಿಕೊಡುತ್ತದೆ. ಈಗಾಗಲೇ ವಿವಿಧ ಯೋಜನೆಗಳಡಿಯಲ್ಲಿ ದ್ವಿಚಕ್ರ ವಾಹನ ವಿತರಣೆ, ಪಾಕೆಟ್ ಲ್ಯಾಪ್‌ಟಾಪ್, ಸೇರಿದಂತೆ ಅನೇಕ ಸಲಕರಣೆಗಳನ್ನು ನೀಡಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬಾಲಕಿ ಮೇಲೆ ಅತ್ಯಾಚಾರ; ಶಾಲಾ ಶಿಕ್ಷಕ ಹಾಜಿಮಲಂಗ ಗಿಣಿಯಾರ ಬಂಧನ
“ಅಂಗವಿಕಲರನ್ನು ಗುರುತಿಸಲು ರಿಮ್ಸ್ ಆಸ್ಪತ್ರೆಯಲ್ಲಿ ಗುರುತಿನ ಚೀಟಿ ನೀಡುವ ಕೆಲಸ ಮಾಡುತ್ತಿದೆ. ವಿಶೇಷಚೇತನರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕು” ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಕೆಪಿಡಿ ಸಂಸ್ಥೆ ಅಧ್ಯಕ್ಷ ನಾಗರಾಜ, ಜಾಫರ್, ಶೇಖರಪ್ಪ, ನವಕರ್ನಾಟಕ ಉಪಾಧ್ಯಕ್ಷ ಎಂಡಿ ಹುಸೇನ್, ಹಿರಿಯ ನಾಗರಿಕ ಹಾಗೂ ವಿಶೇಷಚೇತನರ ಸಹಾಯಕವಾಣಿ ಕೇಂದ್ರದ ಪವನ ಕಿಶೋರ್ ಪಾಟೀಲ್ ಸೇರಿದಂತೆ ಬಹುತೇಕರು ಇದ್ದರು.
