ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಪೋತ್ನಾಳ ವ್ಯಾಪ್ತಿಯ ಖರಾಬದಿನ್ನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನ ಮಳೆ ನೀರು ಸಂಗ್ರಹವಾಗಿ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದ್ದು. ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ನಡೆದಾಡಲೂ ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹದಗೆಟ್ಟಿರುವ ಮೈದಾನದಲ್ಲಿ ಮಕ್ಕಳು ಆಟವಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ʼಈದಿನ.ಕಾಮ್ʼ ನಲ್ಲಿ ವರದಿ ಪ್ರಕಟವಾದ ಬೆನ್ನಲೇ ಎಚ್ಚೆತ್ತ ಅಧಿಕಾರಿಗಳು ಶಾಲಾ ಆವರಣ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ.
ಶಾಲಾ ಅವ್ಯವಸ್ಥೆ ಕುರಿತು ಜೂನ್ 17ರಂದು ಕೆಸರಲ್ಲಿ ಶಾಲೆಯೋ, ಶಾಲೆಯಲ್ಲಿ ಕೇಸರೋʼ ಎಂಬ ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಕಟವಾಗಿತ್ತು. ವರದಿಗೆ ಸ್ಪಂದಿಸಿದ ಶಿಕ್ಷಣ ಇಲಾಖೆ ಸಮಸ್ಯೆ ಪರಿಹಾರಕ್ಕೆ ಮುಂದಾಗಿ ಶಾಲಾ ಮೈದಾನ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.
ಸ್ವಲ್ಪ ಮಳೆ ಬಂದರೆ ಸಾಕು ಶಾಲಾ ಮೈದಾನದಲ್ಲಿ ನೀರು ಸಂಗ್ರಹವಾಗಿ ಮಕ್ಕಳು ಓಡಾಡಲು ಬಾರದಂತಹ ಪರಿಸ್ಥಿತಿ ಇತ್ತು. ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗುವ ಹಿನ್ನೆಲೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಪಡುತ್ತಿದ್ದರು. ಈ ಬಗ್ಗೆ ಪೋಷಕರು ʼಈದಿನʼ ಜೊತೆಗೆ ಮಾತನಾಡಿ ಅಳಲು ತೋಡಿಕೊಂಡಿದ್ದರು.

ಅಂಬೇಡ್ಕರ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಹಾಗೂ ಸ್ಥಳೀಯ ನಿವಾಸಿ ಬಸವರಾಜ್ ಖರಾಬದಿನ್ನಿ ಮಾತನಾಡಿ, ʼನಮ್ಮೂರಿನ ಸರ್ಕಾರಿ ಶಾಲೆಯ ಆಟದ ಮೈದಾನದಲ್ಲಿ ಮಳೆ ನೀರು ಸಂಗ್ರಹವಾಗಿ ಮಕ್ಕಳ ಓಡಾಟಕ್ಕೆ ತುಂಬಾ ತೊಂದರೆ ಅನುಭವಿಸುತ್ತಿದ್ದರು. ಇದರಿಂದ ಮಕ್ಕಳಿಗೆ ಚರ್ಮ ರೋಗ ಸೇರಿದಂತೆ ಸಾಂಕ್ರಮಿಕ ರೋಗದ ಭೀತಿ ಕಾಡುತ್ತಿತ್ತು. ಈ ಬಗ್ಗೆ ಈದಿನ.ಕಾಮ್ ಮಾಧ್ಯಮ ವರದಿ ಪ್ರಕಟಿಸಿದ ಕಾರಣಕ್ಕೆ ಅಧಿಕಾರಿಗಳು ಶಾಲಾ ಆವರಣ ಸ್ವಚ್ಛಗೊಳಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆʼ ಎಂದು ತಿಳಿಸಿದರು.
ಇದನ್ನೂ ಓದಿ : ರಾಯಚೂರು | ‘ಕೆಸರಲ್ಲಿ ಶಾಲೆಯೋ, ಶಾಲೆಯಲ್ಲಿ ಕೇಸರೋʼ
ನಮ್ಮೂರಿನ ಶಾಲಾ ಸಮಸ್ಯೆ ಕುರಿತು ಸುದ್ದಿ ಪ್ರಕಟಿಸಿ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಕಲ್ಪಿಸಿದ ಜನಪರ ಕಾಳಜಿಯ ʼಈದಿನʼ ಮಾಧ್ಯಮ ತಂಡಕ್ಕೆ ಗ್ರಾಮದ ಶರಣು ಮದ್ದಮಗುಡ್ಡಿ ಮತ್ತಿತರರು ಕೃತಜ್ಞತೆ ಸಲ್ಲಿಸಿದ್ದಾರೆ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್