ರಾಯಚೂರಿನ ವಾರ್ಡ್ ನಂ.28ರ ಸಂತೋಷ ನಗರ ಬಡಾವಣೆಯಲ್ಲಿ ಸರ್ಕಾರಿ ಶಾಲಾ ನಿರ್ಮಾಣಕ್ಕೆ 384/1/(ಎ)ನಲ್ಲಿ ಭೂಮಿಯನ್ನು ಮೀಸಲಿಡಲಾಗಿದೆ. ಆ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ ಒತ್ತುವರಿ ತೆರವುಗೊಳಿಸಿ, ಶೈಕ್ಷಣಿಕ ಉದ್ದೇಶಕ್ಕೆ ಆ ಜಾಗವನ್ನು ಬಳಕೆ ಮಾಡಬೇಕು ಎಂದು ಒತ್ತಾಯಿಸಿ ನಾಗರಿಕ ಹಕ್ಕುಗಳ ಸಂರಕ್ಷಣೆಗಾಗಿ ಸಂಘಟನೆಯು ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
“ನಾಗರಿಕ ಸೌಲಭ್ಯದ ನಿವೇಶನವನ್ನು ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ಕೊಠಡಿ ನಿರ್ಮಾಣಕ್ಕೆ ಮಂಜೂರು ಮಾಡಲಾಗಿದೆ. ಆದರೆ, ನಗರ ಶಾಸಕ ಶಿವರಾಜ ಪಾಟೀಲ್ ಅವರು ಪತ್ರ ಬರೆದಿದ್ದು, ದಿಗ್ಭ್ರಮೆ ಹಾಗೂ ಆಶ್ಚರ್ಯವನ್ನುಂಟು ಮಾಡುವುದಾಗಿದೆ. ಸಿಎ ಸೈಟ್ ಜಾಗದಲ್ಲಿ ಸರ್ಕಾರಿ ಕನ್ನಡ ಮಾದ್ಯಮ ಪ್ರೌಢಶಾಲೆಗೆ ಮೀಸಲಿಟ್ಟ ಸ್ಥಳವನ್ನು ನನ್ನ ಗಮನಕ್ಕೆ ಇಲ್ಲದೇ ಮಂಜೂರು ಮಾಡಲಾಗಿರುತ್ತದೆ ಎಂದು ತಿಳಿದಿದ್ದು, ಈ ಸ್ಥಳ ಮಂಜೂರಿ ಕುರಿತು ಹಲವು ಸಮಸ್ಯೆಗಳಿರುವುದರಿಂದ ಶಾಲೆ ಜಾಗವನ್ನು ಬೇರೆ ಬಡಾವಣೆಯಲ್ಲಿ ಆಯ್ಕೆ ಮಾಡುವ ಬಗ್ಗೆ ತಮ್ಮಲ್ಲಿ ಚರ್ಚೆ ಮಾಡಿ ಮುಂದಿನ ನಿರ್ಣಯ ತೆಗೆದುಕೊಳ್ಳುವವರೆಗೆ ಶಾಲೆಗೆ ಸ್ಥಳ ಮಂಜೂರು ಆಗಿರುವ ಆದೇಶವನ್ನು ಹಿಂಪಡೆಯಲು ತಿಳಿಸಿದ್ದು, ಇದು ಸರಿಯಾದ ನಡೆಯಲ್ಲ” ಎಂದು ಸಂಘಟನೆಯ ಮುಖಂಡರು ಹೇಳಿದರು.
“ಆಡಳಿತಾತ್ಮಕ ಪ್ರಕ್ರಿಯೆಯಲ್ಲಿ ಶಾಸಕರೊಬ್ಬರ ಸ್ಪಷ್ಟ ಹಸ್ತಕ್ಷೇಪ ಇದಾಗಿದ್ದು, ಸಂವಿಧಾನದ ಅಧಿಕಾರ ವಿಭಜನೆಯ ತತ್ವಗಳಿಗೆ ವ್ಯತಿರಿಕ್ತ ಹಾಗೂ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಮಂಜೂರು ಮಾಡಿರುವ ಈ ನಾಗರಿಕ ಸೌಲಭ್ಯ ನಿವೇಶನದ ಆದೇಶವನ್ನು ಹಿಂಪಡೆಯಲು ಕೋರಿರುವುದು ಸಮಂಜಸ ಹಾಗೂ ಸಾರ್ವಜನಿಕ ಹಿತದೃಷ್ಟಿ ಎನಿಸದು. ನಗರ ಹಾಗೂ ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರಸ್ತುತ ವಿದ್ಯಾಮಾನಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಶತ ಶತಮಾನಗಳಿಂದ ಶಾಂತಿ ಹಾಗೂ ನೆಮ್ಮದಿಯ ಬಾಳ್ವೆಗೆ ಹೆಸರಾಗಿರುವ ಸೂಫಿ-ಶರಣ-ದಾಸ-ಸಂತ ಪರಂಪರೆಯ ಇಲ್ಲಿಯ ನಾಗರಿಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಸಾಮಾಜಿಕ ಹೊಣೆಗಾರಿಕೆಯಾಗಿಯಾಗಿದೆ” ಎಂದು ಹೇಳಿದರು.
“ಸರ್ವೋಚ್ಛ ನ್ಯಾಯಾಲಯ ಹಾಗೂ ಹಲವು ಉಚ್ಛನ್ಯಾಯಾಲಯಗಳು ಆಸ್ಪತ್ರೆ, ಶಾಲೆಗಳಂತಹ ನಾಗರಿಕ ಸೌಲಭ್ಯಗಳಿಗಾಗಿ ಮಂಜೂರು ಆಗಿರುವುದನ್ನು ಧಾರ್ಮಿಕ ಸಂಸ್ಥೆಗಳಿಗೆ ಮಾರ್ಪಡಿಸಿ ಆದೇಶಿರುವುದನ್ನು ರದ್ದುಪಡಿಸಿ ಸಂವಿಧಾನದ ಮೂಲ ತಳಹದಿ ತತ್ವ ಆಗಿರುವ ಜಾತ್ಯತೀತ ಸಮಾನತೆಯನ್ನು ಎತ್ತಿ ಹಿಡಿದಿದೆ. ಸರ್ಕಾರಿ ಶಾಲೆ ಉದ್ದೇಶದ ಹೊರತಾದ ಯಾವುದೋ ನಿರ್ದಿಷ್ಟ ಧಾರ್ಮಿಕ ಚಟುವಟಿಕೆಗಾಗಿ ನಿವೇಶನವನ್ನು ಮಾರ್ಪಡಿಸಿ ಸರ್ಕಾರಿ ಸಂಪನ್ಮೂಲವನ್ನು ಬಳಸಲು ಯತ್ನಿಸುವ ಪ್ರಯತ್ನ ಸಂವಿಧಾನ ಪರಿಚ್ಛೇದ 14 ಮತ್ತು 15ರ ಸ್ಪಷ್ಟ ಉಲ್ಲಂಘನೆ ಮತ್ತು ದುರುಪಯೋಗವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಗಾಂಧಿ ಪಾರ್ಕ್‌ನಲ್ಲಿ ಅನೈರ್ಮಲ್ಯ; ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ
“ಶೈಕ್ಷಣಿಕ ಉದ್ದೇಶಕ್ಕೆ ಮಂಜೂರು ಆಗಿರುವ ಶಾಲಾ ಕಟ್ಟಡ ನಿರ್ಮಾಣ ಮಾಡುವುದು ಅವಶ್ಯವಾಗಿದೆ. ಹಾಗಾಗಿ ಕೂಡಲೇ ಕ್ರಮ ವಹಿಸಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಇಕ್ಬಾಲ್ ಅಹ್ಮದ್, ಉಪಾಧ್ಯಕ್ಷ ಅನ್ವರ್ ವಹೀದ್, ಮಹಮದ್ ಸುಲ್ತಾನ್, ಪ್ರಧಾನ ಕಾರ್ಯದರ್ಶಿ ಮಹೆಬೂಬ್ ಬಾಷ ಮೂಲಿಮನಿ, ಸಿರಾಜ್ ಅಹ್ಮದ್ ಜಾಫ್ರಿ, ರಾಜ್ಯ ಸಮಿತಿ ಸದಸ್ಯ ಖಾಜಾ ವಹಿದುದ್ದೀನ್ ಸೇರಿದಂತೆ ಇತರರು ಇದ್ದರು.
ವರದಿ : ಹಫೀಜುಲ್ಲ