ಸುಸುಜ್ಜಿತ ಶುದ್ಧ ನೀರಿನ ಟ್ಯಾಂಕ್‌ಗಳಿದ್ದರೂ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಹೈಟೆಕ್ ಟ್ಯಾಂಕ್‌ಗಳು ನೋಟಕ್ಕಷ್ಟೇ; ಬಳಕೆಗೆ ಯೋಗ್ಯವಾಗಿಲ್ಲ ಎಂದು ರಾಯಚೂರು ಜನರು ಸ್ಥಳೀಯ ಆಡಳಿತದ ವಿರುದ್ಧ ಆರೋಪಿಸುತ್ತಿದ್ದಾರೆ.
ದೇವದುರ್ಗ ತಾಲೂಕಿನ ಮುಷ್ಟೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ 9 ಗ್ರಾಮಗಳಲ್ಲಿ 8 ಹೈಟೆಕ್ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಈ ಪೈಕಿ ಕನಿಷ್ಟ ಒಂದೂ ಬಳಕೆಯಾಗುತ್ತಿಲ್ಲ. ಬಳಕೆಯಿಲ್ಲದೆ ಟ್ಯಾಂಕ್‌ಗಳ ಕಂಬಿಗಳು ತುಕ್ಕು ಹಿಡಿಯುತ್ತಿವೆ. ನಿರ್ವಹಣೆಯ ನಿರ್ಲಕ್ಷ್ಯ ಹಾಗೂ ತಾಂತ್ರಿಕ ಸಮಸ್ಯೆಯಿಂದ ಟ್ಯಾಂಕ್‌ಗಳು ಸ್ಥಗಿತಗೊಂಡ ನಂತರ ಗ್ರಾಮಸ್ಥರಿಗೆ ಬೇಸಿಗೆ ದಿನಮಾನಗಳಲ್ಲಿ ಚುರುಕು ಬಿಸಿಲಲ್ಲಿ ಶುದ್ಧ ಕುಡಿಯುವ ನೀರು ಅರಸಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.

ಜಲ ನಿರ್ಮಾಣ ಯೋಜನೆಯಲ್ಲಿ ಮತ್ತು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಯೋಜನೆಯಡಿಯಲ್ಲಿ ಮೂಷ್ಟೂರು ಗ್ರಾಪಂ ವ್ಯಾಪ್ತಿಯ ಪಿಲಿಗುಂಡ ಗ್ರಾಮ 2, ಶಿವಂಗಿ 2, ಮಯಷ್ಟೂರು 1, ಚಿಂತಲಕುಂಟಿ 1, ಗೆಜ್ಜೇಬಾವಿ 1 ಹಾಗೂ ಆಲದತ್ತಿ 1 ಸೇರಿ ಒಟ್ಟು 8 ಹೈಟೆಕ್ ಟ್ಯಾಂಕ್‌ಗಳು ಬಳಕೆಯಿಲ್ಲದೆ ಪಾಳು ಬಿದ್ದಿವೆ ಎನ್ನುತ್ತಾರೆ ಗ್ರಾಮಸ್ಥರು.
ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರುತ್ತಿದೆ. ಶುದ್ಧ ಜೀವ ಜಲಕ್ಕೆ ಪರಿತಪಿಸುವಂತಾಗಿದೆ. ಅಧಿಕಾರಿಗಳು ನೀರಿನ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಶುದ್ಧ ಕುಡಿಯುವ ನೀರು ಪೂರೈಸುವಂತೆ ಜನಪ್ರತಿನಿಧಿಗಳ ಬಳಿ ಅಂಗಲಾಚುವುದು ಸಾಮಾನ್ಯವಾಗಿದೆ.

ಈ ಸುದ್ದಿ ಓದಿದ್ದೀರಾ? ರಾಯಚೂರು |ಆಹಾರ ಸೇವನೆಯಲ್ಲಿ ಏರುಪೇರು ವಾಂತಿಬೇದಿ ಪ್ರಕರಣ; 10 ಜನ ಅಸ್ವಸ್ಥ
ಈ ಬಗ್ಗೆ ಸ್ಥಳೀಯ ನಿವಾಸಿ, ಹಿರಿಯ ಹೋರಾಟಗಾರ ಹಾಗೂ ಆಮ್ ಆದ್ಮಿ ಪಕ್ಷದ ಜಿಲ್ಲಾ ಮುಖಂಡ ಭೀಮರಾಯ ನಾಯ್ಕ ಈ ದಿನ ಡಾಟ್ ಕಾಮ್‌ನೊಂದಿಗೆ ಮಾತನಾಡಿ, “2014, 15 ಹಾಗೂ 16ನೇ ವರ್ಷಗಳಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಹೈಟೆಕ್ ಕುಡಿಯುವ ನೀರಿನ ಟ್ಯಾಂಕ್ ಗಳು ಉದ್ಘಾಟನೆಯಾದವು. ಕೇವಲ ಮೂರುನಾಲ್ಕು ತಿಂಗಳು ನೀರು ಹರಿಸಿದ್ದು ನಂತರ ಬಳಕೆಯಿಲ್ಲದೆ ಹೆಸರಿಗಷ್ಟೆ ಟ್ಯಾಂಕ್ ಗಳಾಗಿವೆ. ಅಲ್ಲಿಂದ ಇಲ್ಲಿಯವರೆಗೂ ಕೂಡ ಯಾರೂ ನಿರ್ವಹಣೆ ಹೊಣೆ ಹೊತ್ತಿಲ್ಲ. ಹೀಗೆ ತುಕ್ಕು ಹಿಡಿದು ಪಾಳು ಬಿದ್ದಿವೆ” ಎಂದರು.
“ಸರ್ಕಾರ ಸಾವಿರಾರು ಕೋಟಿ ಹಣ ಖರ್ಚು ಮಾಡಿ ಘಟಕಗಳ ಸ್ಥಾಪನೆಗೆ ಮುಂದಾಗಿದೆ. ಆದರೆ ಸರಿಯಾಗಿ ನಿರ್ವಹಣೆ ಇಲ್ಲದೆ ಘಟಕಗಳು ಸ್ಥಗಿತಗೊಂಡು ಗ್ರಾಮಸ್ಥರಿಗೆ ನೀರಿಲ್ಲದೆ ಬೋರ್ ವೆಲ್‌ಗಳ ಮೊರೆ ಹೋಗಬೇಕಾಗಿದೆ. ಮಳೆ ಕೊರತೆಯಿಂದ ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿತ ಮತ್ತು ನಿರ್ವಹಣೆ ಸಮಸ್ಯೆಯಿಂದ ಬೇಸಿಗೆ ಆರಂಭದಲ್ಲಿಯೇ ಪಟ್ಟಣ ಸೇರಿದಂತೆ ವಿವಿಧೆಡೆ ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ನೀರಿನ ಚಿಂತೆ ಹಾಗೂ ಬಿಸಿಲಿನ ತಾಪ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ನಿದ್ದೆಗೆಡಿಸಿದೆ. ಈ ಭಾಗದ ಜನರ ಸಮಸ್ಯೆ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ತಮಗೆ ಸಂಬಂಧವಿಲ್ಲದಂತೆ ಕಾಲ ಕಳೆಯುತ್ತಿದ್ದಾರೆ. ಅಧಿಕಾರಿಗಳಿಗೆ ಸಾರ್ವಜನಿಕರು ಕೇಳಿದರೆ ಉಡಾಫೆ ಉತ್ತರ ನೀಡುವುದು.. ಇಲ್ಲದಿದ್ದರೆ ನಮ್ಮ ಇಂಚಾರ್ಜ್ ಇಲ್ಲ, ಅದು ಟೆಂಡರ್ ಅವರೇ ಎಲ್ಲಾ ನಿರ್ವಹಿಸಬೇಕು ಎನ್ನುತ್ತಾರೆ. ಇಂತ ಅಧಿಕಾರಿಗಳು ಅಭಿವೃದ್ಧಿ ಮಾಡಲು ಹೇಗೆ ಸಾಧ್ಯ? ಇಂತಹವರನ್ನು ನೋಡಿಕೊಂಡು ಸುಮ್ಮನೇ ಕೂತಿರುವ ಜನಪ್ರತಿನಿಧಿಗಳೂ ಇವರಂತೆಯೇ ಅಲ್ಲವೇ?.
ಹಲವೆಡೆ ಗ್ರಾಮದ ಕುಂದು ಕೊರತೆಗಳ ಸಭೆ ನಡೆಸಿ, ಸಣ್ಣ ಪುಟ್ಟ ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಇದಕ್ಕೆ ಸಾವಿರಾರು ಹಣ ಖರ್ಚು ಮಾಡುವುದಕ್ಕಿಂತ ಇದ್ದಿದ್ದನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಉಪಯುಕ್ತವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮುಷ್ಟೂರು ಗ್ರಾಮದ ನಿವಾಸಿಯೊಬ್ಬರು ಮಾತನಾಡಿ, “ಹೈಟೆಕ್ ನೀರಿನ ಟ್ಯಾಂಕ್ ಕಟ್ಟಿ ಮನೆ ಮನೆಗೆ ನೀರು ಹರಿಸಲಾಗುವುದು ಎಂದು ಅಧಿಕಾರಿಗಳು ಹೇಳಿ ಹೋದವರು ಮತ್ತೆ ಅದನ್ನು ನೋಡೋಕೂ ಬಂದಿಲ್ಲ. ಮನೆಯಲ್ಲಿ ನೀರು ತರಲು ಹೋದರೆ ಬೇರೆ ಕೆಲಸ ಮಾಡಲು ಆಗುವುದಿಲ್ಲ. ಬೇರೆ ಕೆಲಸಕ್ಕೆ ಹೋದರೆ ನೀರು ಸಿಗುವುದಿಲ್ಲ. ಬೋರ್ ವೆಲ್ ಇದ್ದವರ ಮನೆಗೆ ಹೋಗಿ ನೀರು ತರುವ ಪರಿಸ್ಥಿತಿಯಿದೆ” ಎಂದರು.
ನೂರಾರು ಕೋಟಿ ಹಣ ಖರ್ಚು ಮಾಡಿ ಕಟ್ಟಿದ್ದರೂ ಉಪಯುಕ್ತವಾಗಿಲ್ಲ ಅಂದರೆ ಕಟ್ಟಲಾರದೆ ಇದ್ದರೆ ಸರಕಾರದ ಹಣವಾದರೂ ಉಳಿಯುತ್ತಿತ್ತು ಎಂದರು.

ಸರ್ಕಾರಗಳೇನೋ ಕೋಟ್ಯಂತರ ಅನುದಾನ ನೀಡಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುತ್ತಾರೆ. ಅವುಗಳನ್ನು ಕಾರ್ಯರೂಪಕ್ಕೆ ತಂದರೂ ಸಂಬಂಧಪಟ್ಟ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡದಿದ್ದರೆ ಹೀಗೇ ಆಗುತ್ತದೆ. ಅಭಿವೃದ್ಧಿಯಾಗಲೀ, ಆಗದೇ ಇರಲಿ.. ಅಭಿವೃದ್ಧಿ ಹೆಸರಲ್ಲಿ ಪೋಲಾಗುವುದು ಜನರ ದುಡ್ಡು. ಇನ್ನು ಮುಂದೆಯಾದರೂ ಮುಷ್ಟೂರು ಗ್ರಾಪಂ ವ್ಯಾಪ್ತಿಯ ಅಧಿಕಾರಿಗಳು ಎಚ್ಚೆತ್ತು ಟ್ಯಾಂಕ್‌ಗಳ ಸದ್ಬಳಕೆಗೆ ಹಾಗೂ ಜನರಿಗೆ ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳುವರೇ ನೋಡಬೇಕಿದೆ.