ದೇವದುರ್ಗ ತಾಲೂಕಿನ ಮಲದಕ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ಯೋಜನೆಯ ಹೆಸರಿನಲ್ಲಿ ಫಲಾನುಭವಿಗಳಿಂದ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪಿಡಿಒ ಶಂಶುದ್ದೀನ್ ವಸತಿ ಯೋಜನೆಯಡಿ ಹೆಚ್ಚುವರಿ ಮನೆ ಮಂಜೂರಾಗಿದೆಯೆಂದು ಸುಳ್ಳು ಮಾಹಿತಿ ನೀಡಿ ಜನರಿಂದ ಹಣ ಪಡೆಯುತ್ತಿದ್ದಾರೆ ಎಂದು ಮಲದಕ್ ಗ್ರಾಮದ ಮುಖಂಡ ಭೀಮರಾಯ ಹೊಸಮನಿ ಆರೋಪಿಸಿದರು.
ರಾಯಚೂರಿನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, “ಸರ್ಕಾರದಿಂದ ಯಾವುದೇ ಗ್ರಾಮಕ್ಕೆ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಲು ಫಲಾನುಭವಿಗಳನ್ನು ಆಯ್ಕೆ ಮಾಡಲು ಗ್ರಾಮಸಭೆ, ಜಿಲ್ಲಾ ಪಂಚಾಯಿತಿ ಹಾಗೂ ಸಂಬಂಧಿಸಿದ ಇಲಾಖೆಗೆ ಮನೆಗಳ ಪಟ್ಟಿ ಕಳುಹಿಸಬೇಕು. ಸರ್ಕಾರದ ಯಾವುದೇ ನಿಯಮಗಳ ಪಾಲನೆ ಮಾಡದೆ, ಯೋಜನೆಯ ಬಗ್ಗೆ ಸ್ಪಷ್ಟಪಡಿಸದೇ ನಿವಾಸಿಗಳಿಂದ ಹಣ ಪಡೆಯುತ್ತಿದ್ದಾರೆ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ವೃದ್ಧೆಯ ತೆಂಗಿನ ತೋಟ ನಾಶ; ದುಷ್ಕರ್ಮಿಗಳ ಅಟ್ಟಹಾಸಕ್ಕೆ 42 ತೆಂಗಿನ ಮರಗಳು ಬಲಿ
“ವಸತಿ ಯೋಜನೆಯಡಿ ಹೆಚ್ಚುವರಿಯಾಗಿ 300 ಮನೆ ಮಂಜುರಾಗಿದೆಯೆಂದು ನಂಬಿಸಿ ಪಿಡಿಒ ಗ್ರಾಮಸ್ಥರಿಂದ ₹30 ಸಾವಿರ ಹಣ ಪಡೆಯುತ್ತಿದ್ದಾರೆ. ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ವಿಚಾರಿಸಿದರೆ ಮನೆ ಮಂಜುರಾಗಿರುವ ಬಗ್ಗೆ ಮಾಹಿತಿಯಿಲ್ಲವೆಂದು ಹೇಳುತ್ತಿದ್ದಾರೆ. ಮನೆ ಮಂಜೂರು ನೆಪದಲ್ಲಿ ಜನರಿಗೆ ವಂಚನೆ ಮಾಡುತ್ತಿದ್ದಾರೆ. ಕೂಡಲೇ ಸೂಕ್ತ ಕಾನೂನು ಕ್ರಮ ಜರುಗಿಸಬೇಕು” ಎಂದು ಮನವಿ ಮಾಡಿದರು.
ಮುಖಂಡರಾದ ಆನಂದ, ದೇವೇಂದ್ರಪ್ಪ, ಮಲ್ಲೇಶ ನಾಯಕ, ಶಿವರಾಜ ನಾಯಕ ಇದ್ದರು.
