ರಾಯಚೂರು ಜಿಲ್ಲೆಯ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಈಗಾಗಲೇ ಭಾರೀ ಪ್ರಮಾಣದಲ್ಲಿ ಕೃಷ್ಣಾ ನದಿಗೆ ನೀರನ್ನು ಬಿಡುಗಡೆ ಮಾಡಲಾಗಿದ್ದು, ಇದರಿಂದ ನದಿ ಪಾತ್ರದ ರೈತರಿಗೆ ಸಂಕಷ್ಟ ಎದುರಾಗಿದೆ. ಅಲ್ಲದೇ, ಪಂಪ್‌ಸೆಟ್ ಮುಳುಗುವ ಭೀತಿಯಲ್ಲಿದ್ದು, ಬ್ಯಾರೇಜ್ ಗೇಟ್ ಓಪನ್ ಮಾಡುವಂತೆ ಆಗ್ರಹಿಸಿ ರೈತರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಗೂಗಲ್-ವಡಗೇರಾ ಮಧ್ಯೆ ಶುಕ್ರವಾರ ರಾತ್ರಿ ನಡೆದಿದೆ.
ಈಗಾಗಲೇ ರಾಯಚೂರಿನ ದೇವದುರ್ಗ ತಾಲೂಕಿನ ಹೂವಿನಹಡಗಿ ಸೇತುವೆ ಸಂಪೂರ್ಣ ಮುಳುಗಡೆಯಾಗಿ ಸಂಚಾರ ಬಂದ್ ಮಾಡಲಾಗಿದೆ. ಗೂಗಲ್ ಮತ್ತು ವಡಗೇರಾ ಮಧ್ಯವಿರುವ ಬ್ರಿಡ್ಜ್ ಕಂ ಬ್ಯಾರೇಜ್ ಭರ್ತಿಯಾಗುವ ಹಂತ ತಲುಪಿದೆ. ಆದರೆ ಗೂಗಲ್ ಬ್ಯಾರೇಜ್‌ನ ಗೇಟ್‌ಗಳು ಸರಿಯಾಗಿ ತೆರೆಯದ ಕಾರಣ ರೈತರಿಗೆ ಪಂಪ್ ಸೆಟ್ ಹಾಗೂ ವಿದ್ಯುತ್ ಟಿಸಿ ಮುಳುಗುವ ಭೀತಿ ಎದುರಾಗಿದೆ.
ಬ್ಯಾರೇಜ್‌ನ ಅರ್ಧ ಗೇಟ್ ಓಪನ್ ಮಾಡಲಾಗಿದ್ದು, ಇನ್ನರ್ಧ ಗೇಟ್’ಗಳು ಸಮರ್ಪಕ ನಿರ್ವಹಣೆ ಇಲ್ಲದೆ ತೆರೆಯಲು ಆಗುತ್ತಿಲ್ಲ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಕೂಡ ಯಾರೂ ಕೂಡ ಸರಿಯಾಗಿ ಸ್ಪಂದಿಸುತ್ತಿಲ್ಲ. ರೈತರು ರಾತ್ರಿಯಾದರೂ ಬ್ಯಾರೇಜ್ ಮೇಲೆ ಕುಳಿತಿದ್ದು, ಕೂಡಲೇ ಗೇಟ್ ಓಪನ್ ಮಾಡಲು ಪಟ್ಟು ಹಿಡಿದಿದ್ದಾರೆ.
ಇಂದು ಕೂಡ ಭಾರೀ ಪ್ರಮಾಣದಲ್ಲಿ ನದಿಗೆ ನೀರು ಹರಿಬಿಡಲಾಗಿದ್ದು, ಅಧಿಕಾರಿಗಳು ಕೂಡಲೇ ಈ ಕುರಿತು ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ರೈತರ ಈ ಸಮಸ್ಯೆಯ ಕುರಿತು ಈ ದಿನ.ಕಾಮ್ ಜಂಬಣ್ಣ ಅವರನ್ನು ಸಂಪರ್ಕಿಸಿದಾಗ, “69 ಗೇಟ್ ಓಪನ್ ಮಾಡಲಾಗಿದೆ. ಮೂರು ಲಕ್ಷ ನೀರು ಬಿಡುವ ಸಾಧ್ಯತೆ ಇದೆ. ಪ್ರಸ್ತುತ ಗೂಗಲ್ ಬ್ಯಾರೇಜ್ ಗೇಟ್‌ಗೆ 2.75 ಲಕ್ಷ ನೀರು ಬಿಡುಗಡೆ ಆಗಿದ್ದು, ಆದರೆ ಗೂಗಲ್ ಬ್ಯಾರೇಜ್ ಗೇಟ್ ಓಪನ್ ಮಾಡಲು ಹೋದ ಆಪರೇಟರ್ ಅವರಿಗೆ ಸ್ಥಳೀಯರು ತೊಂದರೆ ಕೊಟ್ಟಿದ್ದಾರೆ. ಇದರಿಂದ ಸಮಸ್ಯೆ ಆಗಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇವೆ” ಎಂದು ತಿಳಿಸಿದರು.
ಈ ದಿನ. ಕಾಮ್ ಜೊತೆಗೆ ಮಾತನಾಡಿದ ರೈತ ಸುಭಾಷ್ ಪಾಟೀಲ್, “ಆಪರೇಟರ್ ಅವರಿಗೆ ಮೀನುಗಾರರು ತೊಂದರೆ ಕೊಟ್ಟಿದ್ದಾರೆ. ಆದ ಕಾರಣ ನನಗೆ ತೊಂದರೆಯಾಗದಂತೆ ಭದ್ರತೆ ಕೊಟ್ಟರೆ ನಾನು ಗೇಟ್ ಓಪನ್ ಮಾಡುತ್ತೇನೆ, ಇಲ್ಲವಾದಲ್ಲಿ ಗೇಟ್ ಓಪನ್ ಮಾಡುವುದಿಲ್ಲ ಎಂದು ಆಪರೇಟರ್ ಪಟ್ಟು ಹಿಡಿದಿದ್ದಾರೆ” ಎಂದು ತಿಳಿಸಿದರು.
“ಎರಡು ಗಂಟೆಗಳಿಂದ ರೈತರು ಗೇಟ್ ಓಪನ್ ಮಾಡಲು ಅಧಿಕಾರಿಗಳಿಗೆ ಆಪರೇಟರ್, ಪೊಲೀಸ್ ಸಿಬ್ಬಂದಿಗಳಿಗೆ ಕರೆ ಮಾಡಿದರು ಯಾರು ಸ್ಪಂದಿಸಿಲ್ಲ. ಆತಂಕದಿಂದ ನಾವುಗಳು ಎದುರು ನೋಡುತ್ತಿರುವಾಗ ಅಧಿಕಾರಿಗಳು ಆಗಮಿಸಿದ್ದಾರೆ. ಆದರೂ, ಸಮಸ್ಯೆ ಸಂಪೂರ್ಣ ಬಗ್ಗೆ ಹರಿದಿಲ್ಲ. ಪೊಲೀಸ್ ಅಧಿಕಾರಿಗಳು ನಾವು ಸತ್ತ ಮೇಲೆ ಬರುತ್ತಾರೇನೋ” ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಪಂಪ್‌ಸೆಟ್ ಮುಳುಗುವ ಭೀತಿಯಲ್ಲಿದೆ. ಹಾಗಾಗಿ, ಕೂಡಲೇ ಗೇಟ್ ಓಪನ್ ಮಾಡುವಂತೆ ರೈತರು ಪಟ್ಟು ಹಿಡಿದಿದ್ದಾರೆ.

ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.