ದೇಶದ ರೈತರು ಕೃಷಿಗೆ ಸಂಬಂಧಿಸಿದ ಆಧುನಿಕ ಸವಾಲುಗಳನ್ನು ಎದುರಿಸಲು ಸನ್ನದ್ದರಾಗಬೇಕು. ಕೇವಲ ಕೃಷಿ ಕಾರ್ಯ ಮಾಡದೇ ಕಚ್ಛಾ ಉತ್ಪನ್ನಗಳಿಂದ ವಸ್ತುಗಳನ್ನು ತಯಾರಿಸಲು ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾಗಬೇಕು ಎಂದು ಮಂಡ್ಯ ಜಿಲ್ಲೆಯ ಮೇಲುಕೋಟೆ ಶಾಸಕ, ರೈತ ಮುಖಂಡ ದರ್ಶನ್ ಪಟ್ಟಣ್ಣಯ್ಯನವರು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಸಂಘ ರಾಜ್ಯ ಹಾಗೂ ರಾಯಚೂರು ಜಿಲ್ಲಾ ಘಟಕದಿಂದ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕೆ.ಎಸ್ ಪುಟ್ಟಣ್ಣಯ್ಯ ಹಾಗೂ ಚೌದರಿ ಚರಣ್ ಸಿಂಗ್ ಜನ್ಮ ದಿನಾಚರಣೆಯ ಅಂಗವಾಗಿ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
“ಬಿಜೆಪಿ ನೇತೃತ್ವದ ಸರ್ಕಾರ ಬಂಡವಾಳಶಾಹಿಪರ ಆಡಳಿತ ನಡೆಸುತ್ತಿದ್ದು, ರೈತರ ಹಿತಾಸಕ್ತಿ ಕಡೆಗಣಿಸಿದೆ. ಕೃಷಿ ಕ್ಷೇತ್ರ ಬಿಕ್ಕಟ್ಟು ಎದುರಿಸುತ್ತಿದೆ. ಹವಾಮಾನ ವೈಪರೀತ್ಯ ಒಂದು ಸವಾಲಾಗಿದೆ. ಇದಕ್ಕೆ ರೈತರು ವೈಜ್ಞಾನಿಕ ರೀತಿಯಲ್ಲಿ ಎದುರಿಸಲು ತಯಾರಾಗಬೇಕು. ಈ ಹಿಂದೆ ಇದ್ದ ರೈತರ ಸಮಸ್ಯೆಗಳು ಈಗ ಭಿನ್ನವಾಗಿವೆ. ರೈತ ಸಂಘಟನೆಗಳು ಇದನ್ನರಿತು ಹೋರಾಟ ರೂಪಿಸಬೇಕು” ಎಂದು ಕಿವಿಮಾತು ಹೇಳಿದರು.
ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಪ್ರಸ್ತುತ ಕೇಂದ್ರ ಸರ್ಕಾರ ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡಿದೆ. ಆದರೆ ರೈತರ ಸಾಲಮನ್ನಾ ಮಾಡಿಲ್ಲ. ಯುಪಿಎ ಸರ್ಕಾರ ₹72 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿತ್ತು. ರೈತರ ಸಮಸ್ಯೆಗಳ ಪರಿಹಾರಕ್ಕೆ ನಿರಂತರ ಹೋರಾಟ, ಒತ್ತಡ ಹೇರಬೇಕು. ಕೃಷಿ ತಿದ್ದುಪಡಿ ಕಾಯ್ದೆ ವಿರುದ್ಧ ಒಂದು ವರ್ಷದ ಕಾಲ ನಡೆದ ಹೋರಾಟಕ್ಕೆ ಮಣಿದು ಪ್ರಧಾನಿ ಮೋದಿ ರೈತರಿಗೆ ತಲೆಬಾಗಿದ್ದು, ಐತಿಹಾಸಿಕ ಸಾಕ್ಷಿಯಾಗಿದೆ” ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, “ಮಾಜಿ ಪ್ರಧಾನಿ ಚರಣ್ ಸಿಂಗ್ ಗ್ರಾಮೀಣ ಆರ್ಥಿಕತೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಸಿ ರೈತರ ಅಭಿವೃದ್ಧಿಗೆ ಶ್ರಮಿಸಿದ್ದರು. ದಿ ಪುಟ್ಟಣ್ಣಯ್ಯನವರೂ ರೈತ ನಾಯಕರಾಗಿ ಹೋರಾಡುವುದರ ಜೊತೆಗೆ ಶಾಸಕರಾಗಿ ಸದನದಲ್ಲಿ ರೈತರ, ಕೃಷಿ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ ಸರ್ಕಾರಕ್ಕೆ ಚಾಟಿ ಬೀಸುತ್ತಿದ್ದರು. ಇಂತಹ ಇಬ್ಬರು ಮಹಾನ್ ನಾಯಕರ ಸ್ಮರಣೆ ಅಗತ್ಯವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಸಿರಿಧಾನ್ಯ ಬೆಳೆಯುವ ರೈತರಿಗೆ ರೈತಸಿರಿ ಯೋಜನೆ: ಜಂಟಿ ಕೃಷಿ ನಿರ್ದೇಶಕ
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸರ್ವೋದಯ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಜೆ ಎಂ ವೀರಸಂಗಯ್ಯ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಇದ್ದರು.